ಕ್ಯಾರೆಟ್ ಸ್ಯಾಂಡ್ ವಿಚ್ / Carrot Sandwich

Click here for English version.

ಎಲ್ಲಾದರೂ ಪ್ರವಾಸಕ್ಕೆ ಹೋಗುವಾಗ ನಾನು ಮೊದಲು ನೆನಪಿಸಿಕೊಳ್ಳುವ ತಿಂಡಿ ಇದು. ಹಿಂದಿನ ದಿನವೇ ತಯಾರಿಸಿಟ್ಟುಕೊಂಡು ಬೆಳಿಗ್ಗೆ ತಿಂಡಿ ತಯಾರಿಸುವ ಯಾವುದೇ ಜಂಜಾಟವಿಲ್ಲದೆ ಆರಾಮಾಗಿ ಉಳಿದ ಕೆಲಸಗಳನ್ನು ಮಾಡಿಕೊಳ್ಳಬಹುದು. ಬೆಳಗಿನ ತಿಂಡಿ ಅಥವಾ ಸ್ನ್ಯಾಕ್ಸ್ ನಂತೆಯೂ ಉಪಯೋಗಿಸಬಹುದು. ನಾಲ್ಕೈದು ವರ್ಷಗಳ ಹಿಂದೆ ಯಾವುದೋ ಮ್ಯಾಗಜಿನ್ ನಲ್ಲಿ ನೋಡಿ ಕಲಿತದ್ದು ಈ ಸ್ಯಾಂಡ್ ವಿಚ್.


ಬೇಕಾಗುವ ಸಾಮಗ್ರಿಗಳು:
ಮಧ್ಯಮಗಾತ್ರದ ಕ್ಯಾರೆಟ್ - 2 
ಸಣ್ಣಗೆ ಹೆಚ್ಚಿದ ಟೊಮೆಟೋ - 2 ಟೀ ಸ್ಪೂನ್
ಮಧ್ಯಮಗಾತ್ರದ ಈರುಳ್ಳಿ - 1 (ಸಣ್ಣಗೆ ಹೆಚ್ಚಿಕೊಳ್ಳಿ)
ಸಣ್ಣಗೆ ಹೆಚ್ಚಿದ ಕರಿಬೇವು - 1 ಟೀ ಸ್ಪೂನ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - 1 ಟೀ ಸ್ಪೂನ್
ಹಸಿಮೆಣಸು ಹೆಚ್ಚಿದ್ದು - 1 ಟೀ ಸ್ಪೂನ್ (ಖಾರಕ್ಕೆ ತಕ್ಕಂತೆ)
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೀ ಸ್ಪೂನ್ (ಬೆಳ್ಳುಳ್ಳಿ ಬೇಡದಿದ್ದರೆ ಶುಂಠಿ ಮಾತ್ರ ಹಾಕಿ)
ಉಪ್ಪು - ರುಚಿಗೆ ತಕ್ಕಷ್ಟು 
ನಿಂಬೆರಸ - ನಾಲ್ಕಾರು ಹನಿ 
ಬ್ರೆಡ್ - 1 ಲೋಫ್ 
ತುಪ್ಪ - ಸ್ವಲ್ಪ 
ಒಗ್ಗರಣೆಗೆ: 1 ಚಮಚ ಎಣ್ಣೆ, ಜೀರಿಗೆ - 1 / 2 ಚಮಚ, ಅರಿಶಿನ - ಚಿಟಿಕೆ 


ಮಾಡುವ ವಿಧಾನ:
ಮೊದಲು ಕ್ಯಾರೆಟ್ ತುರಿದುಕೊಳ್ಳಿ. 
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಜೀರಿಗೆ ಅರಿಶಿನ, ಹೆಚ್ಚಿದ ಹಸಿಮೆಣಸು ಹಾಕಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವಂತೆ ಹುರಿಯಿರಿ. 
ನಂತರ ಅದಕ್ಕೆ ಹೆಚ್ಚಿದ ಟೊಮೆಟೋ ಸೇರಿಸಿ ಸ್ವಲ್ಪ ಹುರಿದು, ಹೆಚ್ಚಿದ ಈರುಳ್ಳಿ ಮತ್ತು ತುರಿದ ಕ್ಯಾರೆಟ್ ಸೇರಿಸಿ. ಬಾಣಲೆಗೆ ಒಂದು ಪ್ಲೇಟನ್ನು ಅರ್ಧಂಬರ್ಧ ಮುಚ್ಚಿ ಹದವಾದ ಉರಿಯಲ್ಲಿ ಬೇಯಲು ಬಿಡಿ. 
ಮಿಶ್ರಣ ಸ್ವಲ್ಪ ಬೆಂದ ನಂತರ ಅದಕ್ಕೆ ಹೆಚ್ಚಿದ ಕರಿಬೇವು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕೈಯಾಡಿಸಿ. ಮಿಶ್ರಣ ಚೆನ್ನಾಗಿ ಬೆಂದು, ನೀರಿನಂಶವೆಲ್ಲಾ ಆರಿದನಂತರ ಅದಕ್ಕೆ ನಿಂಬೆರಸ ಸೇರಿಸಿ ಕಲಸಿ ಉರಿಯಿಂದ ಇಳಿಸಿ ತಣ್ಣಗಾಗಲು ಬಿಡಿ. 
ಟೊಮೆಟೋ ಹುಳಿ ಇರುವುದರಿಂದ ನಿಂಬೆರಸ ಸೇರಿಸುವಾಗ ನೋಡಿಕೊಂಡು ಸೇರಿಸಿ.
ಕಾದ ತವಾದ ಮೇಲೆ ಬ್ರೆಡ್ ಸ್ಲೈಸ್ ಗಳನ್ನು ಇಟ್ಟು ಒಂದು ಮೇಲ್ಮೈ ಯನ್ನು ತುಪ್ಪ ಹಾಕಿ ಚೆನ್ನಾಗಿ ರೋಸ್ಟ್ ಮಾಡಿಕೊಳ್ಳಿ. ರೋಸ್ಟ್ ಮಾಡಿದ ಮೇಲ್ಮೈಯ ಮೇಲೆ ಕ್ಯಾರೆಟ್ ಮಿಶ್ರಣವನ್ನು ಸಮನಾಗಿ ಹರಡಿಕೊಂಡು, ಅದರಮೇಲೆ ಇನ್ನೊಂದು ಬ್ರೆಡ್ ನ ರೋಸ್ಟ್ ಮಾಡಿದ ಮೇಲ್ಮೈ ಬರುವಂತೆ ಇಟ್ಟು ಸ್ವಲ್ಪ ಒತ್ತಿ. 
ನಂತರ ಎರಡೂ ಬ್ರೆಡ್ ಗಳ ಹೊರಭಾಗವನ್ನೂ ಚೆನ್ನಾಗಿ ರೋಸ್ಟ್ ಮಾಡಿ ತವೆಯಿಂದ ತೆಗೆಯಿರಿ. ಇದನ್ನು ಚಾಕುವಿನಿಂದ ಕ್ರಾಸ್ ಆಗಿ ಕತ್ತರಿಸಿಕೊಂಡು ತಿನ್ನಿ. 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)