Recipe world

Here are some recipes which I came across through the net, books, so on and few are my own experiments..

Saturday, 11 October 2014

ಬ್ರೋಕ್ಲಿ ಫ್ರೈ | ಬ್ರೋಕ್ಲಿ ಪಲ್ಯ | Broccoli Stir Fry | Broccoli Palya

Click here for English version.

ಬ್ರೋಕ್ಲಿ - ಇದು ಹೂಕೋಸಿನಂತೆಯೇ ಇರುವ ಹಸಿರು ಬಣ್ಣದ ತರಕಾರಿ. ವಿಕಿಪೀಡಿಯಾದಲ್ಲಿ ಹೇಳುವಂತೆ, ವಿಟಾಮಿನ್ 'ಸಿ' ಹಾಗೂ ಡಯೆಟರಿ ಫೈಬರ್ ನ ಆಗರವಾಗಿರುವ ಈ ತರಕಾರಿ ಕ್ಯಾನ್ಸರ್ ತಡೆಯುವ ಗುಣಗಳನ್ನೂ ಹೊಂದಿದೆ. ಇಷ್ಟೆಲ್ಲ ಒಳ್ಳೆಯ ಅಂಶಗಳನ್ನು ಹೊಂದಿರುವ ಈ ತರಕಾರಿಯನ್ನು ಅನೇಕ ಬಗೆಯ ಅಡುಗೆಗಳಲ್ಲಿ ಬಳಸುವುದನ್ನು ಇತ್ತೀಚೆಗೆ ಅಭ್ಯಾಸ ಮಾಡಿಕೊಂಡಿದ್ದೇನೆ. 
ಸುಲಭದಲ್ಲಿ ತಯಾರಿಸಬಹುದಾದ ಬ್ರೋಕ್ಲಿ ಅಡಿಗೆ ವೆರೈಟಿಗಳಲ್ಲಿ ಬ್ರೋಕ್ಲಿ ಫ್ರೈ / ಪಲ್ಯವೂ ಒಂದು. ಅನೇಕ ದಿನಗಳಿಂದ ಈ ಫ್ರೈ ತಯಾರಿಸಿದಾಗ ಫೊಟೋ ಕ್ಲಿಕ್ಕಿಸಬೇಕೆಂದುಕೊಂಡಿದ್ದರೂ ಸಾಧ್ಯವಾಗಿರಲಿಲ್ಲ. ನಾನು ಫೊಟೋ ತೆಗೆಯಲೆಂದು ಏನಾದರೂ ಅಡಿಗೆ / ತಿಂಡಿಯನ್ನು ರೆಡಿಮಾಡಿಟ್ಟ ತಕ್ಷಣ ನನ್ನ ಪುಟ್ಟ ಮಗಳು ಅವಳ ಕೆಲಸಗಳನ್ನೆಲ್ಲ ಬದಿಗೊತ್ತಿ, ನನಗೆ ಸಹಾಯ(!) ಮಾಡಲು ಬಂದುಬಿಡುತ್ತಾಳೆ. ಅವಳನ್ನು ಕನ್ವಿನ್ಸ್ ಮಾಡಿ ಅಡಿಗೆಯ ಫೊಟೋ ತೆಗೆಯುವಷ್ಟರಲ್ಲಿ ನಾನು ಸುಸ್ತು! ಅಂತೂ ಹಿಂದಿನ ವೀಕೆಂಡ್ ಗೆ ಮಗಳು ಅಪ್ಪನ ಜತೆ ಆಟದಲ್ಲಿ ಬ್ಯುಸಿಯಾಗಿರುವ ಸಮಯದಲ್ಲಿ ಬ್ರೋಕ್ಲಿ ಫ್ರೈ ಫೊಟೋ ಕ್ಲಿಕ್ಕಿಸಿದ್ದಾಯಿತು!
ಬ್ರೋಕ್ಲಿಯಿಂದ ತಯಾರಿಸಬಹುದಾದ ಇನ್ನೂ ಅನೇಕ ಅಡಿಗೆಗಳನ್ನು ಬರೆಯಲಿಕ್ಕಿದೆ.. ಸದ್ಯಕ್ಕೆ ಸಿಂಪಲ್ಲಾದ ಹಾಗೂ ಬೇಗ ತಯಾರಿಸಬಹುದಾದ ಬ್ರೋಕ್ಲಿ ಫ್ರೈ ಅಥವಾ ಬ್ರೋಕ್ಲಿ ಪಲ್ಯದ ರೆಸಿಪಿಯನ್ನು ನಿಮ್ಮ ಮುಂದಿಡುತ್ತಿದ್ದೇನೆ, ಇಷ್ಟವಾಗುವುದೋ ನೋಡಿ!


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು 
ಸರ್ವಿಂಗ್ಸ್: ಇಬ್ಬರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಸುಲಭ 

ಬೇಕಾಗುವ ಸಾಮಗ್ರಿಗಳು:
 • ಮೀಡಿಯಮ್ ಸೈಜಿಗೆ ಕಟ್ ಮಾಡಿದ ಬ್ರೋಕ್ಲಿ ಚೂರುಗಳು - 3 ಕಪ್ 
 • ಈರುಳ್ಳಿ - 1 ಚಿಕ್ಕದು
 • ಜಜ್ಜಿದ ಶುಂಠಿ, ಬೆಳ್ಳುಳ್ಳಿ - 1/2 ಟೀ ಚಮಚ 
 • ಅಚ್ಚಮೆಣಸಿನಪುಡಿ - 1 ಟೀ ಚಮಚ ಅಥವಾ ರುಚಿಗೆ ತಕ್ಕಷ್ಟು 
 • ಅರಿಶಿನ - 1/2 ಟೀ ಚಮಚ
 • ರುಚಿಗೆ ಉಪ್ಪು
 • ಎಣ್ಣೆ - 1 ಟೇಬಲ್ ಚಮಚ


ತಯಾರಿಸುವ ವಿಧಾನ: 
 • ಈರುಳ್ಳಿಯನ್ನು ಮೀಡಿಯಂ ಸೈಜಿನ ಚೂರುಗಳಾಗಿ ಹೆಚ್ಚಿಕೊಳ್ಳಿ.
 • ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಅದಕ್ಕೆ ಜಜ್ಜಿದ ಶುಂಠಿ - ಬೆಳ್ಳುಳ್ಳಿ ಸೇರಿಸಿ ಸ್ವಲ್ಪ ಕೆಂಪಗೆ ಹುರಿಯಿರಿ. 
 • ಇದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ, ಈರುಳ್ಳಿಯ ಬಣ್ಣ ಬದಲಾಗುವವರೆಗೆ ಹುರಿಯಿರಿ. 
 • ನಂತರ ಇದಕ್ಕೆ ಬ್ರೋಕ್ಲಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮುಚ್ಚಳ ಮುಚ್ಚಿ ಬೇಯಿಸಿ. 
 • ಬ್ರೋಕ್ಲಿ ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತಿರಿ. ಬ್ರೋಕ್ಲಿ ಮುಕ್ಕಾಲು ಭಾಗ ಬೆಂದಾಗ ಇದಕ್ಕೆ ಅಚ್ಚಮೆಣಸಿನಪುಡಿ, ಅರಿಶಿನ ಪುಡಿ ಸೇರಿಸಿ ಕೈಯಾಡಿಸಿ 2 - 3 ನಿಮಿಷ ಬೇಯಿಸಿ ಉರಿ ಆಫ್ ಮಾಡಿ. 
 • ಬಿಸಿ ಬಿಸಿ ಬ್ರೋಕ್ಲಿ ಫ್ರೈ ನ್ನು ಊಟದೊಡನೆ ಸರ್ವ್ ಮಾಡಿ ಅಥವಾ ಹಾಗೆಯೇ ಬೇಕಿದ್ದರೂ ತಿನ್ನಬಹುದು. 

Sunday, 21 September 2014

ಕರಬೂಜ ಹಣ್ಣಿನ ಪಾಯಸ | Muskmelon Payasa | Cantaloupe Kheer | Karabooja Hannina Payasa

Click here for English version.

ಕರಬೂಜ ಹಣ್ಣು ಎಂದ ತಕ್ಷಣ ನನಗೆ ನೆನಪಾಗುವುದು ಡಯೆಟ್. ನಾವು ಡಯೆಟ್ ಪ್ರಿಯರಲ್ಲ, ಆದರೆ ಕರಬೂಜ ಹಣ್ಣು ನಮಗೆ ಪ್ರಿಯ! ಸೆಖೆಯ ದಿನಗಳಲ್ಲಿ ಈ ಹಣ್ಣಿನ ಬಳಕೆ ಎಲ್ಲರಿಗೂ ಬಹಳ ಒಳ್ಳೆಯದು. ನಾನು ಕೇಳಿದಂತೆ, ಕರಬೂಜ ಹಣ್ಣು ವಿಟಾಮಿನ್ 'ಎ' ಮತ್ತು 'ಸಿ', ಫೋಲಿಕ್ ಆಸಿಡ್, ಪೊಟಾಷಿಯಂ ಮುಂತಾದ ಅಗತ್ಯ ಖನಿಜಾಂಶಗಳ ಆಗರ. ನಮ್ಮ ದೇಹದಲ್ಲಿ ನೀರಿನಂಶ ಕಾಯ್ದುಕೊಳ್ಳುವುದಕ್ಕೂ ಇದು ಸಹಕಾರಿ. ಕರಬೂಜ ಹಣ್ಣನ್ನು ಕತ್ತರಿಸಿಕೊಂಡು ಹಾಗೆಯೇ ತಿಂದರೂ ಚೆನ್ನಾಗಿರುತ್ತದೆ ಅಥವಾ ಪಾಯಸ, ಜ್ಯೂಸ್ ಮಾಡಿಕೊಂಡೂ ಸವಿಯಬಹುದು. 
ಕರಬೂಜ ಹಣ್ಣಿನ ಪಾಯಸ ತಯಾರಿಸುವ ವಿಧಾನ ಇಲ್ಲಿದೆ. ರುಚಿಕರವಾದ ಈ ಪಾಯಸ ತಯಾರಿಸಲು ಹೆಚ್ಚಿನ ಶ್ರಮವೇನೂ ಬೇಕಿಲ್ಲ. ಈ ಪಾಯಸವನ್ನು ತಯಾರಿಸಿದ ತಕ್ಷಣವೇ ಸವಿಯಬಹುದು.. ಫ್ರಿಜ್ ನಲ್ಲಿಟ್ಟು ತಣ್ಣಗಾದ ನಂತರ ಕುಡಿದರೆ ಇನ್ನೂ ಹೆಚ್ಚು ರುಚಿ!


ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು
ಫ್ರಿಜ್ ನಲ್ಲಿ ಇಡಬೇಕಾದ ಸಮಯ: 1 ಘಂಟೆ
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಸುಲಭ

ಬೇಕಾಗುವ ಸಾಮಗ್ರಿಗಳು: 
 • ಕರಬೂಜ ಹಣ್ಣು - ಮೀಡಿಯಂ ಸೈಜ್ ಹಣ್ಣಿನ ಕಾಲು ಭಾಗ 
 • ಕುದಿಸಿ ಆರಿಸಿದ ಹಾಲು - 2 ಕಪ್ 
 • ಸಕ್ಕರೆ - 1/2 ಕಪ್ ಅಥವಾ ಸಿಹಿಯಾಗುವಷ್ಟು 
 • ಉಪ್ಪು - ಚಿಟಿಕೆ 
 • ಏಲಕ್ಕಿ ಪುಡಿ - 1/2 ಟೀ ಚಮಚ

ತಯಾರಿಸುವ ವಿಧಾನ:
 • ಕರಬೂಜ ಹಣ್ಣಿನ ಸಿಪ್ಪೆ ಮತ್ತು ಬೀಜವನ್ನು ತೆಗೆದು, ಉಳಿದ ಭಾಗವನ್ನು ತುರಿಯುವ ಮಣೆಯಲ್ಲಿ ತುರಿದುಕೊಳ್ಳಿ.
 • ಇದಕ್ಕೆ ಹಾಲು, ಸಕ್ಕರೆ, ಚಿಟಿಕೆ ಉಪ್ಪು ಮತ್ತು ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ. 
 • ತಯಾರಾದ ಪಾಯಸವನ್ನು ಹಾಗೆಯೇ ಸವಿಯಬಹುದು ಇಲ್ಲವೇ ಫ್ರಿಜ್ ನಲ್ಲಿಟ್ಟು ತಣ್ಣಗಾದ ನಂತರ ಸರ್ವ್ ಮಾಡಬಹುದು.


ಟಿಪ್ಸ್:
 • ಬೆಲ್ಲ ಇಷ್ಟಪಡುವವರು ಈ ಪಾಯಸಕ್ಕೆ ಸಕ್ಕರೆಯ ಬದಲು ಬೆಲ್ಲ ಬಳಸಬಹುದು. 
 • ಅರ್ಜೆಂಟ್ ಆಗಿ ತಣ್ಣಗಿನ ಪಾಯಸ ತಯಾರಿಸಬೇಕೆಂದರೆ ಹಾಲನ್ನು ಮೊದಲೇ ಫ್ರಿಜ್ ನಲ್ಲಿಟ್ಟು ತಣ್ಣಗೆ ಮಾಡಿಕೊಂಡು ಪಾಯಸಕ್ಕೆ ಬಳಸಿ.

Tuesday, 26 August 2014

ಮೋದಕ । Modak

Click here for English version.

ಗಣೇಶ ಚತುರ್ಥಿಯ ಸ್ಪೆಷಲ್ ತಿಂಡಿಗಳಲ್ಲಿ ಮೋದಕವೂ ಒಂದು. ಮೋದಕ ಹಾಗೂ ಪಂಚಕಜ್ಜಾಯ ಇವೆರಡೂ ಗಣಪತಿಗೆ ಅತ್ಯಂತ ಪ್ರಿಯವಾದ ತಿನಿಸುಗಳೆಂದು ಹಿರಿಯರು ಹೇಳುತ್ತಾರೆ. ಈ ಮಾತು ಎಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ, ಆದರೆ ಹಬ್ಬದಲ್ಲಿ ತಯಾರಿಸುವ ಎಲ್ಲ ತಿಂಡಿಗಳೂ ನಮ್ಮ ನಾಲಿಗೆಗೆ ರುಚಿಕರವಂತೂ ಹೌದು! 
ಚೌತಿ ಹಬ್ಬದ ತಯಾರಿ ನಮ್ಮ ಮನೆಯಲ್ಲಿ ಈಗಾಗಲೇ ಶುರುವಾಗಿದೆ. ನಾನು ಯಾವಾಗಲೂ ಮೋದಕ ತಯಾರಿಸುವಾಗ ಹೊದಿಕೆಗೆ ಅಕ್ಕಿಹಿಟ್ಟನ್ನು ಬಳಸುತ್ತಿದ್ದೆ. ಈ ಬಾರಿ ನನ್ನ ಅಕ್ಕ ಹೇಳಿದಂತೆ ಅಕ್ಕಿ ಹಿಟ್ಟಿನ ಬದಲು ಮೈದಾ ಹಿಟ್ಟನ್ನು ಬಳಸಿದೆ. ಗರಿಗರಿಯಾದ ಮೇಲು ಹೊದಿಕೆಯ ಸಿಹಿಯಾದ ಮೋದಕ ನಮಗೆಲ್ಲ ತುಂಬ ಇಷ್ಟವಾಯಿತು. ರುಚಿಕರವಾದ ಈ ಮೋದಕವನ್ನು ಹಬ್ಬಕ್ಕೆ ನೀವೂ ತಯಾರಿಸಿ ನೋಡಿ! 


ತಯಾರಿಸಲು ಬೇಕಾಗುವ ಸಮಯ: 1 1/2 ಘಂಟೆ 
ಡಿಫಿಕಲ್ಟಿ ಲೆವೆಲ್: ಕಷ್ಟಕರ 
ಈ ಅಳತೆಯಿಂದ 30 ಮೋದಕಗಳನ್ನು ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು:
 • ಕರಿಯಲು ಎಣ್ಣೆ 
- ಸ್ಟಫಿಂಗ್ ಗೆ:
 • ಸಕ್ಕರೆ - 1 1/2 ಕಪ್ (ಅಥವಾ ಸಿಹಿಯಾಗುವಷ್ಟು)
 • ಬೆಲ್ಲ (ಬೇಕಿದ್ದರೆ) - 1 ಟೇಬಲ್ ಚಮಚ
 • ಕೊಬ್ಬರಿತುರಿ / ತೆಂಗಿನತುರಿ - 3 ಕಪ್ 
 • ನೀರು - 1 ಕಪ್ 
 • ಎಳ್ಳು - 2 ಟೇಬಲ್ ಚಮಚ
 • ಏಲಕ್ಕಿ ಪುಡಿ - 3/4 ಟೀ ಚಮಚ

- ಮೇಲು ಹೊದಿಕೆಗೆ:
 • ಮೈದಾಹಿಟ್ಟು - 3 ಕಪ್ 
 • ಉಪ್ಪು - ಒಂದು ದೊಡ್ಡ ಚಿಟಿಕೆ
 • ತುಪ್ಪ - 1 1/2 ಟೀ ಚಮಚ 
 • ನೀರು - 1 ಕಪ್ (ಅಂದಾಜು)

ತಯಾರಿಸುವ ವಿಧಾನ:
 • ಮೈದಾ ಹಿಟ್ಟಿಗೆ ಉಪ್ಪು, ತುಪ್ಪ ಸೇರಿಸಿ ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. 3 - 4 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ಮೆತ್ತಗಿದ್ದು, ಕೈಗಳಿಗೆ ಅಂಟದಂತಿರಲಿ. ಈ ಹಿಟ್ಟನ್ನು ದೊಡ್ಡ ಉಂಡೆ ಮಾಡಿ ಒಂದು ಪಾತ್ರೆಯಲ್ಲಿಟ್ಟು ಮುಚ್ಚಳ ಮುಚ್ಚಿ 15 - 20 ನಿಮಿಷ ಇಡಿ.
 • ಒಂದು ದಪ್ಪ ತಳದ ಪಾತ್ರೆಯಲ್ಲಿ ತೆಂಗಿನತುರಿ / ಕೊಬ್ಬರಿತುರಿ, ಸಕ್ಕರೆ, ಬೆಲ್ಲ (ಬೇಕಿದ್ದರೆ) ಹಾಗೂ ನೀರು ಹಾಕಿ ಕುದಿಯಲು ಬಿಡಿ. 
 • ಎಳ್ಳನ್ನು ಸಣ್ಣ ಉರಿಯಲ್ಲಿ ಕೆಂಪಗೆ ಹುರಿದು ಇಟ್ಟುಕೊಳ್ಳಿ.
 • ತೆಂಗಿನತುರಿ ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತ, ನೀರಿನಂಶವೆಲ್ಲ ಆರುವವರೆಗೆ ಬಿಡಿ. ನಂತರ ಇದಕ್ಕೆ ಹುರಿದ ಎಳ್ಳು, ಏಲಕ್ಕಿಪುಡಿ ಸೇರಿಸಿ ಉರಿಯನ್ನು ಆಫ್ ಮಾಡಿ.
 • ಕಲಸಿಟ್ಟ ಮೈದಾ ಹಿಟ್ಟನ್ನು ತೆಗೆದುಕೊಂಡು ಒಂದೇ ಅಳತೆಯ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ. ಒಂದೊಂದೇ ಉಂಡೆಯನ್ನು ತೆಗೆದುಕೊಂಡು ಒಣ ಹಿಟ್ಟಿನಲ್ಲಿ ಹೊರಳಿಸಿಕೊಂಡು ಸಾಧ್ಯವಾದಷ್ಟು ತೆಳ್ಳಗೆ ವೃತ್ತಾಕಾರಕ್ಕೆ ಲಟ್ಟಿಸಿ.
 • ಲಟ್ಟಿಸಿದ ಪುಟ್ಟ ರೊಟ್ಟಿಯೊಳಗೆ ಒಂದು ಟೇಬಲ್ ಚಮಚದಷ್ಟು ತೆಂಗಿನತುರಿ ಮಿಶ್ರಣವನ್ನು ಹಾಕಿ. ರೊಟ್ಟಿಯ ಅಂಚುಗಳನ್ನು ಒಟ್ಟಿಗೆ ಸೇರಿಸಿ ನಾಜೂಕಾಗಿ ಬೆಸೆದು ಮೋದಕದ ಆಕಾರ ಕೊಡಿ. 
 • ತಯಾರಿಸಿದ ಮೋದಕಗಳನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿದು ತೆಗೆಯಿರಿ. 


ಟಿಪ್ಸ್:
 • ಮೋದಕ ತಯಾರಿಸಲು ತಾಜಾ ತೆಂಗಿನತುರಿಯನ್ನು ಬಳಸಬಹುದು ಅಥವಾ ಒಣಕೊಬ್ಬರಿ ತುರಿಯನ್ನೂ ಬಳಸಬಹುದು.
 • ಮೋದಕ ತಯಾರಿಸಲು ಸಕ್ಕರೆಯ ಬದಲು ಬೆಲ್ಲವನ್ನೂ ಬಳಸಬಹುದು. ಬೆಲ್ಲ ಬಳಸಿ ತಯಾರಿಸಿದರೆ ಮೋದಕ ಇನ್ನೂ ರುಚಿ!
 • ಎಲ್ಲ ಕಡೆ ಒಂದೇ ಬಣ್ಣ ಬರಲು ಮೋದಕಗಳನ್ನು ಕರಿಯುವಾಗ ಪದೇ ಪದೇ ಅವನ್ನು ಸೌಟಿನಿಂದ ಕೈಯಾಡಿಸುತ್ತಿರಿ.

Friday, 15 August 2014

ಹದಿಗಡ್ಡೆ ಪಲ್ಯ | ಹಲಸಿನ ಅಡುಗೆಗಳು | Hadigadde Palya | Raw Jack Fruit Recipes

Click here for English version.

ಹಲಸಿನ ಸೀಜನ್ ನಲ್ಲಿ ಊರಿಗೆ ಹೋದಾಗ ನಾನು ಸವಿದ ಅಡಿಗೆಗಳಲ್ಲಿ ಈ ಪಲ್ಯವೂ ಒಂದು. ಹದಿಗಡ್ಡೆ ಎಂದರೆ ಚೆನ್ನಾಗಿ ಬಲಿತ ಹಲಸಿನ ಕಾಯಿಯ ಬೀಜದ ಹೊರಭಾಗದಲ್ಲಿರುವ ಮೆತ್ತಗಿನ ಸಿಪ್ಪೆ. ಹಲಸಿನ ಕಾಯಿಯ ಪ್ರತಿಯೊಂದು ಭಾಗವೂ ಒಂದಿಲ್ಲೊಂದು ರೀತಿಯಲ್ಲಿ ಬಳಕೆಗೆ ಉಪಯುಕ್ತವಾಗಿದೆ. ಇದರ ತೊಳೆ, ಬೀಜ, ಬೀಜದ ಹೊರಗಿನ ಮೆತ್ತಗಿನ ಸಿಪ್ಪೆ (ಹದಿಗಡ್ಡೆ) ಇವೆಲ್ಲ ನಮ್ಮ ಆಹಾರವಾಗಿ ಬಳಕೆಯಾದರೆ, ಇದರ ಹೊರಗಿನ ಗಟ್ಟಿಯಾದ ಸಿಪ್ಪೆ, ಇತ್ಯಾದಿ ಭಾಗಗಳು ಜಾನುವಾರುಗಳಿಗೆ ಒಳ್ಳೆಯ ಮೇವು. 
ಹದಿಗಡ್ಡೆಯನ್ನು ಅಡುಗೆಗೆ ಬಳಸುವುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಒಮ್ಮೆ ಹದಿಗಡ್ಡೆಯನ್ನು ಪಲ್ಯಕ್ಕೆಂದು ಬಿಡಿಸುತ್ತಿದ್ದರಂತೆ. ಆಗ ಮನೆಗೆ ಬಂದಿದ್ದ ದೂರದ ನೆಂಟರೊಬ್ಬರು 'ಅಯ್ಯೋ, ಇದನ್ನೂ ನೀವು ಅಡುಗೆಗೆ ಬಳಸುತ್ತೀರಾ?' ಎಂದು ಮುಖ ಹಿಂಡಿದ್ದರಂತೆ. ನಂತರ ಈ ಪಲ್ಯದ ರುಚಿ ನೋಡಿದ ಅವರು ಪಲ್ಯವನ್ನು ಮತ್ತೆ ಮತ್ತೆ ಹಾಕಿಸಿಕೊಂಡು ಉಂಡದ್ದನ್ನು ನಮ್ಮ ಮನೆಯಲ್ಲಿ ಈಗಲೂ ನೆನಪಿಸಿಕೊಳ್ಳುತ್ತಾರೆ. 
ಹಲಸಿನಕಾಯಿಯ ಚಿಪ್ಸ್, ಹಪ್ಪಳ ತಯಾರಿಸುವಾಗ ಹದಿಗಡ್ಡೆಯನ್ನೂ ಬಿಡಿಸಿಕೊಂಡು ಅದರ ಪಲ್ಯವನ್ನು ತಯಾರಿಸುತ್ತಾರೆ. ಸುಲಭದಲ್ಲಿ ತಯಾರಿಸಬಹುದಾದ ಈ ಪಲ್ಯ ಊಟಕ್ಕೆ ಬಹಳ ರುಚಿ!  


ತಯಾರಿಸಲು ಬೇಕಾಗುವ ಸಮಯ: 15 - 20 ನಿಮಿಷಗಳು
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಸುಲಭ 

ಬೇಕಾಗುವ ಸಾಮಗ್ರಿಗಳು:
 • ಎಣ್ಣೆ - 8 ಟೇಬಲ್ ಚಮಚ
 • ಸಣ್ಣಗೆ ಹೆಚ್ಚಿದ ಹದಿಗಡ್ಡೆ - 3 1/2 ಕಪ್
 • ಉದ್ದಿನಬೇಳೆ - 1 1/2 ಟೇಬಲ್ ಚಮಚ
 • ಇಂಗು - ಚಿಟಿಕೆ
 • ಸಾಸಿವೆ - 1 ಟೇಬಲ್ ಚಮಚ
 • ಸಾಂಬಾರ್ ಪುಡಿ - 2 ಟೇಬಲ್ ಚಮಚ
 • ಉಪ್ಪು - ರುಚಿಗೆ ತಕ್ಕಷ್ಟು
 • ಆಮ್ ಚೂರ್ ಪುಡಿ - ರುಚಿಗೆ ತಕ್ಕಷ್ಟು
 • ಸಕ್ಕರೆ - 1/2 ಟೀ ಚಮಚ 
 • ತೆಂಗಿನತುರಿ - 1/2 ಕಪ್


ತಯಾರಿಸುವ ವಿಧಾನ:
 • ಒಂದು ದಪ್ಪ ತಳದ ಬಾಣಲೆಯಲ್ಲಿ 8 ಟೇಬಲ್ ಚಮಚದಷ್ಟು ಎಣ್ಣೆ ಕಾಯಿಸಿಕೊಳ್ಳಿ. ಇದಕ್ಕೆ ಉದ್ದಿನಬೇಳೆ, ಇಂಗು, ಸಾಸಿವೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. 
 • ಒಗ್ಗರಣೆ ಮಿಶ್ರಣಕ್ಕೆ ಸಾಂಬಾರ್ ಪುಡಿ ಸೇರಿಸಿ ಒಮ್ಮೆ ಕೈಯಾಡಿಸಿ. ಇದಕ್ಕೆ ಸಣ್ಣಗೆ ಹೆಚ್ಚಿದ ಹದಿಗಡ್ಡೆ ಚೂರುಗಳನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಹಾಗೂ ಆಮ್ ಚೂರ್ ಪುಡಿ ಸೇರಿಸಿ ಮಿಕ್ಸ್ ಮಾಡಿ. 
 • ಪಲ್ಯದ ಮಿಶ್ರಣವನ್ನು ನೀರು ಸೇರಿಸದೆ, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ. ಆಗಾಗ್ಗೆ ಕೈಯಾಡಿಸುತ್ತಿರಿ. 
 • ಪಲ್ಯ ಬೆಂದ ನಂತರ ಇದಕ್ಕೆ ತೆಂಗಿನತುರಿ ಸೇರಿಸಿ 3 - 4 ನಿಮಿಷ ಬಿಸಿಮಾಡಿ ಇಳಿಸಿ.
 • ರುಚಿಕಟ್ಟಾದ ಪಲ್ಯವನ್ನು ಅನ್ನ ಅಥವಾ ರೊಟ್ಟಿಯೊಡನೆ ಸವಿದುನೋಡಿ!

Saturday, 5 July 2014

ಹಲಸಿನಕಾಯಿ ತೆಳ್ಳೇವು | ಹಲಸಿನಕಾಯಿ ಪೇಪರ್ ದೋಸೆ | Halasinakayi Tellevu | Raw Jack Fruit Paper Dosa

Click here for English version.

' ತೆಳ್ಳೇವು' - ಇದು ಹವ್ಯಕರ ಸಿಗ್ನೇಚರ್ ಡಿಶ್. ಹಳ್ಳಿಗಳ ಕಡೆ ಹೆಚ್ಚಿನ ಹವ್ಯಕರ ಮನೆಗಳಲ್ಲಿ ಬೆಳಗ್ಗಿನ ತಿಂಡಿಗೆ ಸಾಮಾನ್ಯವಾಗಿ  ತೆಳ್ಳೇವು ತಯಾರಿಸುತ್ತಾರೆ. ಅಗಲವಾದ ದೋಸೆ ಕಾವಲಿಯ ಮೇಲೆ ಪೇಪರ್ ನಷ್ಟು ತೆಳ್ಳಗಿನ ಈ ದೋಸೆ ತಯಾರಿಸುವುದೂ ಒಂದು ಕಲೆಯೇ!
ಬೇರೆ ಬೇರೆ ತರಕಾರಿಗಳನ್ನು ಬಳಸಿ ವಿವಿಧ ಬಗೆಯ ತೆಳ್ಳೇವು ತಯಾರಿಸಬಹುದು. ಮೊಗೆಕಾಯಿ ಹಾಗೂ ಸೌತೆಕಾಯಿ ತೆಳ್ಳೇವು ತಯಾರಿಸಲು ಹೆಚ್ಚಾಗಿ ಬಳಕೆಯಾಗುತ್ತವೆ. ತೆಳ್ಳೇವು ಪ್ರಿಯರು ಹಲಸಿನಕಾಯಿ ಸೀಜನ್ ನಲ್ಲಿ ಒಮ್ಮೆಯಾದರೂ ಹಲಸಿನಕಾಯಿಯ ತೆಳ್ಳೇವು ತಯಾರಿಸುತ್ತಾರೆ. ಹಲಸಿನಕಾಯಿಯ ತೆಳ್ಳೇವು ತಿನ್ನಲು ಬಹಳ ರುಚಿ. ಚೆನ್ನಾಗಿ ಬೆಳೆದ ಹಲಸಿನಕಾಯಿಯ ತೊಳೆಗಳನ್ನು ಬಿಡಿಸಿ ರುಬ್ಬಿಕೊಂಡು ಆಗಿಂದಾಗ್ಗೆ ದೋಸೆ (ತೆಳ್ಳೇವು) ತಯಾರಿಸಬೇಕು. ತೆಳ್ಳೇವು ತಯಾರಿಸುವ ಮೊದಲು ಇಷ್ಟೆಲ್ಲಾ ಕೆಲಸ ಇರುವುದರಿಂದ ಈ  ತೆಳ್ಳೇವನ್ನು ಸಾಯಂಕಾಲದ ತಿಂಡಿಗೆ ತಯಾರಿಸುವುದು ಹೆಚ್ಚು ಅನುಕೂಲ.
ನಾನಂತೂ ಹಲಸಿನಕಾಯಿ ತೆಳ್ಳೇವು ತಿನ್ನದೇ ತುಂಬಾ ವರ್ಷಗಳೇ ಆಗಿಬಿಟ್ಟಿದ್ದವು. ಈ ವರ್ಷ ಹಲಸಿನ ಸೀಜನ್ ನಲ್ಲಿ ಊರಿಗೆ ಹೋಗಿದ್ದರಿಂದ ಈ ತೆಳ್ಳೇವು ಸವಿಯುವ ಭಾಗ್ಯ ಸಿಕ್ಕಿತು. ಕಾಯಿ ಚಟ್ನಿ ಹಾಗೂ ಜೇನುತುಪ್ಪದೊಡನೆ ಹಲಸಿನಕಾಯಿ  ತೆಳ್ಳೇವು ತಿಂದರೆ ಅದರ ರುಚಿಯನ್ನು ಯಾರೂ ಮರೆಯುವಂತಿಲ್ಲ!
ತೆಳ್ಳೇವು ತಯಾರಿಸುವ ವಿಡಿಯೋ ವನ್ನು ನಾನು ಈ ಹಿಂದೆ ಬರೆದ 'ತೆಳ್ಳೇವು' ರೆಸಿಪಿಯಲ್ಲಿ ಹಾಕಿದ್ದೆ. ವಿಡಿಯೋ ರೆಸಿಪಿ ನೋಡಲು ಇಲ್ಲಿ ಕ್ಲಿಕ್ ಮಾಡಿ.


ತಯಾರಿಸಲು ಬೇಕಾಗುವ ಸಮಯ: 2 ಘಂಟೆ
ಸರ್ವಿಂಗ್ಸ್: 5 - 6 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಕಷ್ಟಕರ
ಬೇಕಾಗುವ ಸಾಮಗ್ರಿಗಳು:
 • 1 ಮೀಡಿಯಂ ಸೈಜಿನ ಹಲಸಿನಕಾಯಿ
 • ರುಚಿಗೆ ಉಪ್ಪು
 • ನೀರು

ತಯಾರಿಸುವ ವಿಧಾನ:
 • ಹಲಸಿನಕಾಯಿ ತೊಳೆಗಳನ್ನು ಬಿಡಿಸಿ ಬೀಜ ಬೇರ್ಪಡಿಸಿಕೊಂಡು, ತೊಳೆಗಳನ್ನು ಸಣ್ಣ ಚೂರುಗಳಾಗಿ ಹೆಚ್ಚಿಕೊಳ್ಳಿ.
 • ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಒರಳಿನಲ್ಲಿ ನುಣ್ಣಗೆ ರುಬ್ಬಿ.
 • ರುಬ್ಬುವಾಗ ಸ್ವಲ್ಪ ನೀರು ಬೇಕಿದ್ದರೆ ಸೇರಿಸಿ. ಹಿಟ್ಟಿನ ಹದ ದೋಸೆ ಹಿಟ್ಟಿಗಿಂತ ಸ್ವಲ್ಪ ಮಂದವಾಗಿರಲಿ.
 • ಒಂದು ಸೌಟಿನಷ್ಟು ಹಿಟ್ಟನ್ನು ಕಾದ ಕಾವಲಿಯಮೇಲೆ ತೆಳ್ಳಗೆ ಹರಡಿ, ಮೀಡಿಯಮ್ ಉರಿಯಲ್ಲಿ ಗರಿಯಾಗಿ ಬೇಯಿಸಿ ತೆಗೆಯಿರಿ.
 • ಬಿಸಿಬಿಸಿ ದೋಸೆಯನ್ನು ಕಾಯಿ ಚಟ್ನಿ ಹಾಗೂ ಜೇನುತುಪ್ಪದೊಡನೆ ಸವಿಯಿರಿ!


ಟಿಪ್ಸ್:
 • ತಯಾರಿಸಿದ ಹಿಟ್ಟನ್ನು ತಕ್ಷಣವೇ ಬಳಸಿ. ಹಿಟ್ಟನ್ನು ತುಂಬ ಹೊತ್ತು ಇಟ್ಟರೆ ದೋಸೆ ಚೆನ್ನಾಗಿ ಬರುವುದಿಲ್ಲ.
 • ಹಿಟ್ಟನ್ನು ರುಬ್ಬಿದ ಸ್ವಲ್ಪ ಸಮಯದ ನಂತರ  ತೆಳ್ಳೇವು ತಯಾರಿಸಲು ಚೆನ್ನಾಗಿ ಬರದಿದ್ದರೆ ಹಿಟ್ಟನ್ನು ಇನ್ನೊಮ್ಮೆ ಒರಳಿನಲ್ಲಿ ರುಬ್ಬಿ ಬಳಸಿ.
 • ಎಲ್ಲ ಹಲಸಿನಕಾಯಿಗಳೂ ತೆಳ್ಳೇವು ತಯಾರಿಸಲು ಸೂಕ್ತವಲ್ಲ. ಹೀಗಾಗಿ ಒಮ್ಮೊಮ್ಮೆ ತೆಳ್ಳೇವು ತಯಾರಿಸುವುದು ಕಷ್ಟವಾಗಿ, ಸ್ವಲ್ಪ ದಪ್ಪಗಿನ ದೋಸೆ ತಯಾರಿಸುವ ಸಂಭವವೂ ಇರುತ್ತದೆ. 
 • ಈ ತೆಳ್ಳೇವಿಗೆ ಹಿಟ್ಟು ರುಬ್ಬಲು ಮಿಕ್ಸಿ ಸೂಕ್ತವಲ್ಲ. ಒರಳು ಅಥವಾ ಗ್ರೈಂಡರ್ ನಲ್ಲಿ ರುಬ್ಬಿದರೆ ಮಂದನೆಯ ಹಿಟ್ಟನ್ನು ತಯಾರಿಸಬಹುದು. 

Tuesday, 10 June 2014

ಅಮಟೆಕಾಯಿ ಚಟ್ನಿ | ಅಂಬಟೆಕಾಯಿ ಚಟ್ನಿ | Amatekayi Chutney | Ambatekayi Chutney |

Click here for English version.

ಅಮಟೆಕಾಯಿ (ಅಂಬಟೆಕಾಯಿ) ಗ್ರಾಮೀಣ ಭಾಗದ ಜನರಿಗೆ ಚಿರಪರಿಚಿತವಾದ ತರಕಾರಿ. ಮಾವಿನಕಾಯಿ, ಹುಣಸೆಕಾಯಿಗಳಂತೆಯೇ ತುಂಬ ಹುಳಿಯಾಗಿರುವ ಈ ಕಾಯಿಯಿಂದ ಬಗೆಬಗೆಯ ಮೇಲೋಗರ, ಗೊಜ್ಜು, ಚಟ್ನಿ, ಉಪ್ಪಿನಕಾಯಿಗಳನ್ನು ತಯಾರಿಸುತ್ತಾರೆ. ಊರಿನಿಂದ ದೂರವಿರುವಾಗ ನಾವು ಮಿಸ್ ಮಾಡಿಕೊಳ್ಳುವ ತರಕಾರಿಗಳಲ್ಲಿ ಇದೂ ಒಂದು.
ಅಮಟೆಕಾಯಿಯ ಸಾರು (ಅಮಟಿ) ತಯಾರಿಸುವ ವಿಧಾನವನ್ನು ಬಹಳ ದಿನಗಳ ಹಿಂದೆಯೇ ಬರೆದಿದ್ದೆ. ಅಮಟೆಕಾಯಿಯ ಚಟ್ನಿ ಮಾಡುವ ವಿಧಾನ ಇಲ್ಲಿದೆ..


ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು 
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಸುಲಭ

ಬೇಕಾಗುವ ಸಾಮಗ್ರಿಗಳು:
 • ಮೀಡಿಯಮ್ ಸೈಜಿನ ಅಮಟೆಕಾಯಿ - 1
 • ತೆಂಗಿನತುರಿ - 1 ಕಪ್ 
 • ಹಸಿಮೆಣಸು - 2
 • ರುಚಿಗೆ ಉಪ್ಪು 
 • ನಿಂಬೆಹಣ್ಣು - ಅರ್ಧ ಭಾಗ 
 • ನೀರು - 1 ಕಪ್  
ಒಗ್ಗರಣೆಗೆ: ಎಣ್ಣೆ - 1 ಟೀ ಸ್ಪೂನ್, ಸಾಸಿವೆ - 3/4 ಟೀ ಸ್ಪೂನ್

ಮಾಡುವ ವಿಧಾನ:
 • ಓಟೆಯನ್ನು ಬಿಟ್ಟು ಅಮಟೆಕಾಯಿಯನ್ನು ಮೀಡಿಯಂ ಸೈಜಿನ ಚೂರುಗಳಾಗಿ ಹೆಚ್ಚಿಕೊಳ್ಳಿ.  
 • ಪಾತ್ರೆಯಲ್ಲಿ 1 ಕಪ್ ನಷ್ಟು ನೀರು ಹಾಕಿ ಅಮಟೆಕಾಯಿ ಚೂರುಗಳು ಮತ್ತು ಹಸಿಮೆಣಸನ್ನು ಅದರಲ್ಲಿ ಹಾಕಿ ಅರೆಬರೆ ಮುಚ್ಚಿ 5 ನಿಮಿಷ ಬೇಯಿಸಿ.
 • ಬೆಂದ ಮಿಶ್ರಣ ಸ್ವಲ್ಪ ತಣ್ಣಗಾದ ನಂತರ ಅದಕ್ಕೆ ತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸಿಯಲ್ಲಿ ಸ್ವಲ್ಪ ತರಿಯಾಗಿ ರುಬ್ಬಿ. ಅಮಟೆಕಾಯಿ ಚೂರು ಬೇಯಿಸಿದ ನೀರು ಉಳಿದಿದ್ದರೆ ರುಬ್ಬುವಾಗ ಅದೇ ನೀರನ್ನು ಬಳಸಿ. 
 • ಚಟ್ನಿಯ ರುಚಿ ನೋಡಿಕೊಂಡು ರುಚಿಗೆ ತಕ್ಕಷ್ಟು ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ. 
 • ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಸಾಸಿವೆ ಸಿಡಿಸಿ ಒಗ್ಗರಣೆ ಮಾಡಿ ರುಬ್ಬಿಟ್ಟ ಚಟ್ನಿಗೆ ಸೇರಿಸಿ.
 • ತಯಾರಾದ ಅಮಟೆಕಾಯಿ ಚಟ್ನಿಯನ್ನು ಅನ್ನದೊಡನೆ ಸವಿಯಿರಿ!

Saturday, 10 May 2014

ಸಬ್ಬಸಿಗೆ ಸೊಪ್ಪಿನ ಪಲ್ಯ | Sabbasige Soppina Palya | Dill Leaves Stri Fry

Click here for English version.

ಹಸಿರು ತರಕಾರಿ ಮತ್ತು ಸೊಪ್ಪುಗಳು ನಮ್ಮ ದೇಹಕ್ಕೆ ಅಗತ್ಯವಾದ ವಿವಿಧ ಪೋಷಕಾಂಶಗಳ ಆಗರವಾಗಿವೆ. ಶಾಕಾಹಾರಿಗಳಿಗಂತೂ ಅಗತ್ಯವಿರುವ ಎಲ್ಲ ಪೋಷಕಾಂಶಗಳೂ ಸೊಪ್ಪು, ತರಕಾರಿಗಳಿಂದಲೇ ಸಿಗಬೇಕು. ಹೀಗಾಗಿ ನಮ್ಮ ನಿತ್ಯದ ಆಹಾರದಲ್ಲಿ ಹಣ್ಣುಗಳ ಜತೆಗೆ ಸೊಪ್ಪು, ತರಕಾರಿಗಳ ಸೇವನೆಯೂ ಅತ್ಯವಶ್ಯ. ಪಾಲಕ್, ಸಬ್ಬಸಿಗೆ, ಹರಿವೆ ಇತ್ಯಾದಿ ಸೊಪ್ಪುಗಳು ಊಟಕ್ಕೂ ರುಚಿಕರ ಹಾಗೆಯೇ ಆರೋಗ್ಯಕ್ಕೂ ಹಿತಕರ. 
ಸಬ್ಬಸಿಗೆ ಸೊಪ್ಪು ಕ್ಯಾಲ್ಶಿಯಂ, ಫೋಲಿಕ್ ಆಸಿಡ್, ಇತ್ಯಾದಿ ಖನಿಜಾಂಶಗಳ ಆಗರ. ಬಾಳಂತಿಯರಿಗಂತೂ ನಿತ್ಯದ ಆಹಾರದಲ್ಲಿ ಸಬ್ಬಸಿಗೆ ಸೊಪ್ಪಿನ ಬಳಕೆ ಬಹಳ ಒಳ್ಳೆಯದು. ನನ್ನ ಬಾಳಂತನದ ವೇಳೆಯಲ್ಲಿ ಅಮ್ಮ ಸಬ್ಬಸಿಗೆ ಸೊಪ್ಪಿನ ಪಲ್ಯ, ತೊವ್ವೆ, ಇತ್ಯಾದಿ ವಿವಿಧ ಅಡಿಗೆಗಳನ್ನು ಮಾಡುತ್ತಿದ್ದರು. ಹೀಗಾಗಿ ಮಗು ಹುಟ್ಟಿದ ನಂತರ ನನ್ನ ಅಡಿಗೆ ಕಲೆಕ್ಷನ್ ಗೆ ಅನೇಕ ಹೊಸ ಅಡಿಗೆಗಳು ಸೇರಿವೆ!
ಸಬ್ಬಸಿಗೆ ಸೊಪ್ಪಿನ ಪಲ್ಯ ತಯಾರಿಸುವ ವಿಧಾನ ಈ ಕೆಳಗಿನಂತಿದೆ..


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು
ಸರ್ವಿಂಗ್ಸ್: 4 - 5
ಡಿಫಿಕಲ್ಟಿ ಲೆವೆಲ್: ಸುಲಭ

ಬೇಕಾಗುವ ಸಾಮಗ್ರಿಗಳು:
 • ಸಬ್ಬಸಿಗೆ ಸೊಪ್ಪು - 1 ದೊಡ್ಡ ಕಟ್ಟು 
 • ಉದ್ದಿನಬೇಳೆ - 1 ಟೀ ಸ್ಪೂನ್       
 • ಸಾಸಿವೆ - 3/4 ಟೀ ಸ್ಪೂನ್
 • ಚಿಟಿಕೆ ಇಂಗು 
 • ತೆಂಗಿನತುರಿ - 2 ಟೇಬಲ್ ಸ್ಪೂನ್ (ಬೇಕಿದ್ದರೆ)
 • ಆಮ್ ಚೂರ್ ಪುಡಿ - 1/4 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು 
 • ಮಸಾಲಾ ಪುಡಿ - 3 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು (ಟಿಪ್ಸ್ ನೋಡಿ)
 • ಸಕ್ಕರೆ - 3/4 ಟೇಬಲ್ ಸ್ಪೂನ್
 • ರುಚಿಗೆ ತಕ್ಕಷ್ಟು ಉಪ್ಪು 
 • ಎಣ್ಣೆ - 4 ಟೇಬಲ್ ಸ್ಪೂನ್

ತಯಾರಿಸುವ ವಿಧಾನ:
 • ಸಬ್ಬಸಿಗೆ ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ.
 • ಒಂದು ದಪ್ಪ ತಳದ ಬಾಣಲೆಯಲ್ಲಿ 4 ಟೇಬಲ್ ಸ್ಪೂನ್ ನಷ್ಟು ಎಣ್ಣೆ ಕಾಯಿಸಿ ಅದಕ್ಕೆ ಉದ್ದಿನಬೇಳೆ, ಇಂಗು, ಸಾಸಿವೆ ಹಾಕಿ ಒಗ್ಗರಣೆ ಮಾಡಿ. 
 • ಒಗ್ಗರಣೆ ಚಟಪಟ ಎಂದಾಗ ಇದಕ್ಕೆ ಮಸಾಲಾ ಪುಡಿ ಸೇರಿಸಿ. ಜೊತೆಗೇ ಹೆಚ್ಚಿದ ಸಬ್ಬಸಿಗೆ ಸೊಪ್ಪನ್ನು ಸೇರಿಸಿ ಕೈಯಾಡಿಸಿ. 
 • ಪಲ್ಯದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಆಮ್ ಚೂರ್ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಾಣಲೆಗೆ ಮುಚ್ಚಳವನ್ನು ಅರೆಬರೆ ಮುಚ್ಚಿ ಪಲ್ಯವನ್ನು 5 ನಿಮಿಷ ಬೇಯಿಸಿ. ನಡುವೆ ಒಂದೆರಡು ಬಾರಿ ಮಿಶ್ರಣವನ್ನು ಕೈಯಾಡಿಸಿ.
 • ಪಲ್ಯ ಬೆಂದ ನಂತರ ಇದಕ್ಕೆ 2 ಟೇಬಲ್ ಸ್ಪೂನ್ ನಷ್ಟು ತೆಂಗಿನತುರಿ ಸೇರಿಸಿ ಚೆನ್ನಾಗಿ ಬಿಸಿಮಾಡಿ ಉರಿಯನ್ನು ಆಫ್ ಮಾಡಿ. 
 • ರುಚಿಕಟ್ಟಾದ ಸಬ್ಬಸಿಗೆ ಸೊಪ್ಪಿನ ಪಲ್ಯವನ್ನು ಅನ್ನ ಇಲ್ಲವೇ ಚಪಾತಿಯೊಡನೆ ಸವಿಯಿರಿ!

 ಟಿಪ್ಸ್:
 • ಈ ಪಲ್ಯಕ್ಕೆ ಸಾರಿನ ಪುಡಿ ಅಥವಾ ಯಾವುದೇ ಬಗೆಯ ಪಲ್ಯದ ಪುಡಿಯನ್ನು ಬಳಸಬಹುದು. ಖಾರಕ್ಕೆ ಅನುಗುಣವಾಗಿ ಪುಡಿಯ ಪ್ರಮಾಣವನ್ನು ಅಡ್ಜೆಸ್ಟ್ ಮಾಡಿಕೊಳ್ಳಿ.
Related Posts Plugin for WordPress, Blogger...