ಪಾನಿ ಪುರಿ / Pani Puri

Click here for English version.

ಪಾನಿಪುರಿ ಯಾರಿಗೆ ತಾನೇ ಇಷ್ಟವಿಲ್ಲ? ರಸ್ತೆ ಪಕ್ಕದ ಚಾಟ್ ಅಂಗಡಿಗಳಲ್ಲಿ ಪಾನಿಪುರಿ ತಿನ್ನುವ ಗಮ್ಮತ್ತೇ ಬೇರೆ. ಹುಳಿ ಹುಳಿ, ಖಾರ ಖಾರವಾಗಿರುವ 'ಪಾನಿ' ಅಥವಾ 'ಜೀರಿಗೆ ನೀರು' ತಯಾರಿಕೆಯೇ ಇದರಲ್ಲಿ ಮುಖ್ಯವಾದುದು. ಮನೆಯಲ್ಲೇ ಪಾನಿಪುರಿ ತಯಾರಿಸಲು ಸುಲಭದ ವಿಧಾನ ಇಲ್ಲಿದೆ..


ಸರ್ವಿಂಗ್: 4 - 5 ಜನರಿಗೆ ಆಗುತ್ತದೆ 
ತಯಾರಿಸಲು ಬೇಕಾಗುವ ಸಮಯ  : 40 ನಿಮಿಷಗಳು

ಬೇಕಾಗುವ ಸಾಮಗ್ರಿ:
1 ) ಪಾನಿ ತಯಾರಿಸಲು - 
     ಕೊತ್ತಂಬರಿ ಸೊಪ್ಪು - 1 ಕಟ್ಟು
     ಪುದೀನಾ ಸೊಪ್ಪು - 1 ಕಟ್ಟು
     ಹಸಿಮೆಣಸು - 2 ರಿಂದ 3 
     ಹುಣಸೆಹಣ್ಣು - ದೊಡ್ಡ ನಿಂಬೆಗಾತ್ರದಷ್ಟು
     ನಿಂಬೆಹಣ್ಣು - 1 
     ಕಾಳುಮೆಣಸು - 2 ಟೀ ಚಮಚ 
     ಜೀರಿಗೆ - 2 ಟೀ ಚಮಚ
     ಉಪ್ಪು - ರುಚಿಗೆ ತಕ್ಕಷ್ಟು    
     ಕುದಿಸಿ ಆರಿಸಿದ ನೀರು - ಸುಮಾರು ಒಂದೂವರೆ ಲೀಟರ್
2 ) ಆಲೂ ಪಲ್ಯ ತಯಾರಿಸಲು -
     1 ದೊಡ್ಡ ಆಲೂಗಡ್ಡೆ
     ಕೆಂಪು ಮೆಣಸಿನ ಪುಡಿ - 1 / 2 ಚಮಚ
     ಕಾಳುಮೆಣಸಿನ ಪುಡಿ - 1 / 4 ಚಮಚ
     ಉಪ್ಪು - ರುಚಿಗೆ ತಕ್ಕಷ್ಟು 
     ಆಮ್ ಚೂರ್ ಪೌಡರ್ - 1 / 4 ಚಮಚ ಅಥವಾ ನಾಲ್ಕಾರು ಹನಿ ನಿಂಬೆರಸ
     ಮಧ್ಯಮಗಾತ್ರದ ಈರುಳ್ಳಿ - 1 
     ಹೆಚ್ಚಿದ ಕೊತ್ತಂಬರಿ ಸೊಪ್ಪು - 2 ಚಮಚ  

ಮಾಡುವ ವಿಧಾನ:
ಪಾನಿ
ಕರಿಮೆಣಸು, ಜೀರಿಗೆಯನ್ನು ಹುರಿದು ಪುಡಿಮಾಡಿಕೊಳ್ಳಿ. ಹರಳು ಉಪ್ಪನ್ನು ಸೇರಿಸುವುದಾದರೆ ಅದನ್ನೂ ಸ್ವಲ್ಪ ಹುರಿದುಕೊಳ್ಳಿ. 
ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹುಣಸೆಹಣ್ಣು, ಹಸಿಮೆಣಸು ಇಷ್ಟನ್ನೂ ಸ್ವಲ್ಪ ನೀರು ಸೇರಿಸಿ ರುಬ್ಬಿ, ಚೆನ್ನಾಗಿ ಸೋಸಿಕೊಳ್ಳಿ.  
ಸೋಸಿಕೊಂಡ ರಸಕ್ಕೆ ಬೇಕಾದಷ್ಟು ನೀರನ್ನು ಸೇರಿಸಿ, ಪುಡಿಮಾಡಿದ ಜೀರಿಗೆ, ಕರಿಮೆಣಸನ್ನು ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಮತ್ತು ನಿಂಬೆರಸವನ್ನು ಸೇರಿಸಿ ಕಲಕಿ. ಇದರ ರುಚಿ ಉಪ್ಪು, ಹುಳಿ, ಖಾರ ಹದವಾಗಿರಬೇಕು. 
ಆಲೂ ಪಲ್ಯ
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. 
ಆಲೂಗಡ್ಡೆಯನ್ನು ಬೇಯಿಸಿ, ಕೈಗಳಿಂದ ಹಿಸುಕಿ ಮೆತ್ತಗೆ ಹಿಟ್ಟಿನಂತೆ ಮಾಡಿಕೊಳ್ಳಿ. 
ಇದಕ್ಕೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನ ಪುಡಿ, ಪುಡಿಮಾಡಿದ ಕಾಳುಮೆಣಸು, ಉಪ್ಪು, ಹುಳಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಕಲಸಿ.

ಈಗ ಗೋಲ್ ಗಪ್ಪಾ ಅಥವಾ ಪೂರಿಯನ್ನು ತೆಗೆದುಕೊಂಡು ಕೈಯಿಂದ ಒತ್ತಿ ಒಂದು ಮೇಲ್ಮೈಯಲ್ಲಿ ತೂತು ಮಾಡಿಕೊಳ್ಳಿ. ಪೂರಿಯ ಅರ್ಧಭಾಗದವರೆಗೆ ಪಲ್ಯವನ್ನು ತುಂಬಿ, ನಂತರ ಉಳಿದರ್ಧಕ್ಕೆ ಪಾನಿ  ಅಥವಾ ಜೀರಿಗೆ ನೀರನ್ನು ತುಂಬಿಸಿ ಇಡೀ ಪೂರಿಯನ್ನು ಹಾಗೇ ಬಾಯಲ್ಲಿಟ್ಟು ಸವಿಯಿರಿ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)