Tomato Rasam / ಟೊಮೇಟೊ ರಸಂ

Click here for English version.

ಮನೆಯಲ್ಲೇ ಇರಬಹುದಾದ ಸಾಮಗ್ರಿಗಳಿಂದ ಬಹಳ ಸುಲಭವಾಗಿ ತಯಾರಿಸಬಹುದಾದ ಈ ರಸಂ, ಜೀರ್ಣಕಾರಿಯೂ ಹೌದು. ಇದು ನನ್ನ ಅಕ್ಕನಿಂದ ಕಲಿತ ಅಡುಗೆ.

ಬೇಕಾಗುವ ಸಾಮಗ್ರಿ:
ಕಳಿತ ಟೊಮೇಟೊ - 1 (ದೊಡ್ಡದು)
ತೆಂಗಿನತುರಿ (ಬೇಕಿದ್ದರೆ) - 1 ಟೀ ಸ್ಪೂನ್
ಹೆಸರುಬೇಳೆ - 1 / 4 ಲೋಟ
ರಸಂ ಪುಡಿ ಅಥವಾ ಸಾರಿನ ಪುಡಿ - ಒಂದೂವರೆ ಚಮಚ (ಖಾರಕ್ಕೆ ತಕ್ಕಂತೆ)
ಹೆಚ್ಚಿದ ಕೊತ್ತಂಬರಿ ಸೊಪ್ಪು - 1 ಟೀ ಸ್ಪೂನ್
ಕರಿಬೇವಿನ ಎಲೆಗಳು - ಸ್ವಲ್ಪ
ಹುಣಸೆ ಹಣ್ಣಿನ ರಸ - ಸ್ವಲ್ಪ 
ಸಕ್ಕರೆ ಅಥವಾ ಬೆಲ್ಲ - 1 / 4 ಟೀ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರಣೆಗೆ : ಒಣಮೆಣಸು - 1 , ಎಣ್ಣೆ - 1 ಟೀ ಸ್ಪೂನ್, ಜೀರಿಗೆ - 1 / 2 ಟೀ ಸ್ಪೂನ್, ಸಾಸಿವೆ - 1 / 2 ಟೀ ಸ್ಪೂನ್, ಅರಿಶಿನ - ಚಿಟಿಕೆ, ಇಂಗು - ಸ್ವಲ್ಪ

ಮಾಡುವ ವಿಧಾನ:
1 ಟೀ ಸ್ಪೂನ್ ನಷ್ಟು ಟೊಮೇಟೊವನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಉಳಿದ ಟೊಮೇಟೊವನ್ನು ದೊಡ್ಡದಾಗಿ ಹೆಚ್ಚಿಕೊಂಡು, ಹೆಸರುಬೇಳೆಯೊಡನೆ  ನೀರು, ಚಿಟಿಕೆ ಅರಿಶಿನ, ಒಂದೆರಡು ಹನಿ ಎಣ್ಣೆ ಹಾಕಿ ಕುಕ್ಕರ್ ನಲ್ಲಿ ಒಂದು ವಿಷಲ್ ಆಗುವವರೆಗೆ ಬೇಯಿಸಿಕೊಳ್ಳಿ. ಇದು ತಣ್ಣಗಾದನಂತರ ಮಿಕ್ಸಿಯಲ್ಲಿ ಒಂದು ಸುತ್ತು ತಿರುವಿ, ನುಣ್ಣಗೆ ಮಾಡಿಕೊಳ್ಳಿ.
ಬಾಣಲಿಯಲ್ಲಿ ಒಗ್ಗರಣೆಗಿಟ್ಟು, ಎಣ್ಣೆ ಕಾದನಂತರ  ಒಣಮೆಣಸು, ಸಾಸಿವೆ, ಜೀರಿಗೆ, ಇಂಗು, ಅರಿಶಿನ ಎಲ್ಲವನ್ನೂ ಹಾಕಿ, ಚಟಗುಟ್ಟಿದ ನಂತರ ಟೊಮೇಟೊ ಹೋಳುಗಳನ್ನು ಸೇರಿಸಿ ಸ್ವಲ್ಪ ಬೇಯಿಸಿಕೊಳ್ಳಿ. ಇದಕ್ಕೆ ಸಾಂಬಾರ್ ಪುಡಿ ಅಥವಾ ರಸಂ ಪುಡಿ ಸೇರಿಸಿ 1 ನಿಮಿಷ ಕೈಯಾಡಿಸಿ, ನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ. ಇದಕ್ಕೆ ಹುಣಸೆ ರಸ, ಉಪ್ಪು, ಸಕ್ಕರೆ ಹಾಕಿ, ಮಿಶ್ರಣ ತೆಳ್ಳಗಾಗುವಷ್ಟು ನೀರು ಸೇರಿಸಿ ಕುದಿಯಲಿಡಿ. ಟೊಮೇಟೊ ಹಣ್ಣು ಹುಳಿಯಾಗಿರುವುದರಿಂದ, ಹುಣಸೆರಸ ಸೇರಿಸುವಾಗ ನೋಡಿಕೊಂಡು ಹಾಕಿ. ಮಿಶ್ರಣ ಚೆನ್ನಾಗಿ ಕುದಿಯತೊಡಗಿದಾಗ ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆಗಳನ್ನು ಸೇರಿಸಿ, 5 ನಿಮಿಷ ಕುದಿಸಿ ಇಳಿಸಿ. ಕುದಿಸುವಾಗ ಸ್ವಲ್ಪ ಪುಡಿ ಇಂಗನ್ನು ಸೇರಿಸಿದರೆ ಇನ್ನೂ ಚೆನ್ನಾಗಿರುತ್ತದೆ.

ಕಾಮೆಂಟ್‌ಗಳು