ಅಡೈ ದೋಸೆ / Adai Dosa

Click here for English version.

ಈಗೀಗ ನಾನು ಅಡಿಗೆಯ ವಿಷಯದಲ್ಲಿ 'ಇಂಟರ್ನೆಟ್ ಅಡಿಕ್ಟ್' ಆಗಿಬಿಟ್ಟಿದ್ದೇನೆನೆನಿಸುತ್ತಿದೆ .ಬೆಂಗಳೂರಿನಲ್ಲಿದ್ದಾಗ ಇಂಟರ್ನೆಟ್ ನೋಡಿ ಅಡಿಗೆಗಳನ್ನು ಮಾಡುತ್ತಿದ್ದುದು ಬಹಳವೇ ಕಡಿಮೆಯಾಗಿತ್ತು. ಏನಾದರೂ ಅಡಿಗೆ ಗೊತ್ತಾಗಿಲ್ಲವೆಂದರೆ ಅಕ್ಕನನ್ನೋ, ಅಮ್ಮನನ್ನೋ ಇಲ್ಲ ಅತ್ತೆಯನ್ನೋ ಕೇಳಿದ್ದರೆ ಆಗಿಬಿಡುತ್ತಿತ್ತು. ಅಲ್ಲದೆ ಅವರುಗಳು ಕಳಿಸುವ ತಿಂಡಿಯ ಸ್ಟಾಕ್ ಯಾವಾಗಲೂ ಮನೆಯಲ್ಲಿ ಇದ್ದೇ ಇರುತ್ತಿತ್ತು. ಅವರಿಂದ ದೂರವಾಗಿ ದೂರ ದೇಶದಲ್ಲಿರುವುದರಿಂದ ನನ್ನ ಗಮನ ಅಡಿಗೆಯೆಡೆಗೆ ಸ್ವಲ್ಪ ಸ್ವಲ್ಪವಾಗಿ ಹೆಚ್ಚಾಗುತ್ತಿದೆ.
ಈಗ ಚಳಿಗಾಲದ ಸಮಯವಾದ್ದರಿಂದ ದೋಸೆ ಹಿಟ್ಟನ್ನು ರುಬ್ಬಿ ಬೆಚ್ಚಗಿನ ಜಾಗದಲ್ಲಿಟ್ಟರೂ ಚೆನ್ನಾಗಿ ಫರ್ಮೆಂಟ್ ಆಗುವುದೇ ಇಲ್ಲ. ಹೀಗಾಗಿ ಹಿಟ್ಟನ್ನು ರುಬ್ಬಿದ ತಕ್ಷಣ ಮಾಡಬಹುದಾದ ದೋಸೆಗಳಿಗಾಗಿ ನನ್ನ ಹುಡುಕಾಟ ನಡೆಯುತ್ತಲೇ ಇತ್ತು. ರಶ್ಮಿಯವರ ಬ್ಲಾಗ್ ನೋಡಿ ತಯಾರಿಸಿದ ಅಡೈ ದೋಸೆ ನಮಗೆ ಬಹಳವೇ ಇಷ್ಟವಾಯಿತು. ಶಿರಸಿಯ ಕಡೆ ದೀಪಾವಳಿ ಹಬ್ಬದ ದಿನ ಬಾಳೆಕಾಯಿ, ತೊಂಡೆಕಾಯಿ, ಮೊಗೆಕಾಯಿ, ಅರಿಶಿನ ಕೊಂಬು ಇತ್ಯಾದಿಗಳನ್ನು ರುಬ್ಬಿ ಹಾಕಿ ತಯಾರಿಸುವ ದೋಸೆಯ ರುಚಿಯನ್ನು ಇದು ನೆನಪಿಸಿತು. ಈ ಅಡೈ ದೋಸೆ ಮಾಡುವ ವಿಧಾನ ಇಂತಿದೆ..


ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಸಾಮಗ್ರಿಗಳನ್ನು ನೆನೆಸುವ ಸಮಯ: 4 - 5 ಘಂಟೆ
  
ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ - 1 ಕಪ್
ತೊಗರಿಬೇಳೆ - 3 / 4 ಕಪ್
ಕಡಲೆಬೇಳೆ - 3 / 4 ಕಪ್
ಉದ್ದಿನಬೇಳೆ - 1 / 2 ಕಪ್
ಅಕ್ಕಿ - 1 ಕಪ್ 
ಮೆಂತ್ಯ - 1 ಟೇಬಲ್ ಸ್ಪೂನ್ 
ಇಂಗು - 1 / 4 ಟೀ ಸ್ಪೂನ್
ಕರಿಬೇವು - 1 / 4 ಕಪ್
ಶುಂಠಿ - 1 ಇಂಚು 
ಕೊತ್ತಂಬರಿ ಸೊಪ್ಪು - 1 / 2 ಕಪ್
ಹಸಿಮೆಣಸು - 3
ಉಪ್ಪು - ರುಚಿಗೆ ತಕ್ಕಷ್ಟು 
ಎಣ್ಣೆ - ಸ್ವಲ್ಪ
 
ಮಾಡುವ ವಿಧಾನ:
ಎಲ್ಲ ಬೇಳೆಗಳು, ಮೆಂತ್ಯ ಮತ್ತು ಅಕ್ಕಿಯನ್ನು ನಾಲ್ಕೈದು ಘಂಟೆಕಾಲ ಇಲ್ಲವೇ ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ.
ನಂತರ ನೆನೆಸಿಟ್ಟ ಎಲ್ಲ ಸಾಮಗ್ರಿಗಳನ್ನು ಇಂಗು, ಕರಿಬೇವು, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸಿನೊಂದಿಗೆ ಸೇರಿಸಿ, ಮಿಕ್ಸಿಯಲ್ಲಿ ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪಗೆ ರುಬ್ಬಿಕೊಳ್ಳಿ.
ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು, ಕಾದ ದೋಸೆ ಕಾವಲಿಯ ಮೇಲೆ ಸೌಟಿನಿಂದ ಬೇಕಾದಷ್ಟು ಹಿಟ್ಟನ್ನು ಹಾಕಿಕೊಂಡು ಮಸಾಲೆ ದೋಸೆಯಂತೆಯೇ ದೊಡ್ಡದಾಗಿ ದೋಸೆಗಳನ್ನು ಹಾಕಿ, ಎಣ್ಣೆ ಹಾಕಿ ದೋಸೆಯ ಎರಡೂ ಕಡೆಗಳನ್ನು ಬೇಯಿಸಿ ತೆಗೆಯಿರಿ.
ಬಿಸಿ ಇರುವಾಗಲೇ ಚಟ್ನಿಯೊಡನೆ ತಿನ್ನಿ.

ಕಾಮೆಂಟ್‌ಗಳು

  1. ನಿಮ್ಮ ಬ್ಲಾಗನ್ನು ಇಂದು ನೋಡಿದೆ. ಭಯಂಕರ ಕಣ್ರೀ ನೀವು. ಇಷ್ಟೆಲ್ಲ ಅಡುಗೆ ಮಾಡಿ ಅದನ್ನು ಕನ್ನಡದಲ್ಲಿ ಬರೆದು ನಮ್ಮಂಥ ಕನ್ನಡ ಪ್ರಿಯರಿಗೆ ಹೀಗೆ ಉಣಬಡಿಸುತ್ತಿರುವುದು ತುಂಬ ಸಂತೋಷ ತಂದಿದೆ. ವಂದನೆಗಳು
    ಮಾಲಾ

    ಪ್ರತ್ಯುತ್ತರಅಳಿಸಿ
  2. ನಿಮ್ಮ ಕಾಮೆಂಟ್ ನೋಡಿ ತುಂಬ ಸಂತೋಷವಾಯಿತು ಮಾಲಾರವರೆ.. ಹೀಗೇ ತಮ್ಮ ಅಭಿಪ್ರಾಯ/ ಸಲಹೆಗಳನ್ನು ಆಗಾಗ್ಗೆ ತಿಳಿಸುತ್ತಿರಿ ಎಂದು ನನ್ನ ಹಾರೈಕೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)