ಚಕ್ಕುಲಿ ಮುರುಕು / Chakkuli Muruku

Click here for English version.

ಚಕ್ಕುಲಿ ಎಂದೊಡನೆ ನೆನಪಾಗುವುದು ಗಣೇಶ ಚತುರ್ಥಿ. ಮೊದಲೆಲ್ಲ ಚಿಕ್ಕವರಿದ್ದಾಗ ಗಣೇಶ ಚತುರ್ಥಿಯ ಸಮಯದಲ್ಲಿ ಮನೆಯಲ್ಲಿ ದೊಡ್ಡ ದೊಡ್ಡ ಡಬ್ಬಗಳಲ್ಲಿ ತುಂಬಿಸಿಟ್ಟ ಚಕ್ಕುಲಿಯನ್ನು ತಿಂಗಳಾನುಗಟ್ಟಲೆ ತಿನ್ನುತ್ತಿದ್ದುದು ನೆನಪಾಗುತ್ತದೆ. 
ನೋಡಿದೊಡನೆಯೇ ಬಾಯಲ್ಲಿ ನೀರೂರಿಸುವ ಈ ಚಕ್ಕುಲಿ ಮುರುಕು ಅಥವಾ ಬೆಣ್ಣೆ ಮುರುಕು ತಮಿಳುನಾಡಿನಲ್ಲಿ ಬಹಳ ಜನಪ್ರಿಯವಾದ ತಿನಿಸು. ಬಾಯಲ್ಲಿಟ್ಟರೆ ಕರಗಿಯೇ ಹೋಗುವುದೇನೋ ಎನ್ನುವಷ್ಟು ಗರಿಗರಿ. ಚಕ್ಕುಲಿ ಮುರುಕನ್ನು ತಯಾರಿಸುವಾಗ ಡಬ್ಬದ ತುಂಬ ತಯಾರಿಸಿದಂತೆ ಅನ್ನಿಸಿದರೂ ನೋಡ-ನೋಡುತ್ತಿದ್ದಂತೆಯೇ ಖರ್ಚಾಗಿಬಿಡುತ್ತದೆ! 


ತಯಾರಿಸಲು ಬೇಕಾಗುವ ಸಮಯ: 1 ಘಂಟೆ

ಬೇಕಾಗುವ ಸಾಮಗ್ರಿಗಳು:
ಅಕ್ಕಿಹಿಟ್ಟು - 1 ಲೋಟ
ಮೈದಾಹಿಟ್ಟು - 1 ಲೋಟ
ಕಡಲೆಹಿಟ್ಟು - 1 ಲೋಟ
ಪುಟಾಣಿ ಹಿಟ್ಟು - 1 ಲೋಟ
ಕೆಂಪು ಮೆಣಸಿನ ಪುಡಿ - ಒಂದೂವರೆ ಟೀ ಚಮಚದಷ್ಟು (ಖಾರಕ್ಕೆ ತಕ್ಕಂತೆ)
ಜೀರಿಗೆ - 1 ಟೀ ಚಮಚ (ಓಮ ಸೇರಿಸಿದರೂ ಚೆನ್ನಾಗಿರುತ್ತದೆ)
ಬಿಳಿ ಎಳ್ಳು - 1 ಟೀ ಚಮಚ 
ಉಪ್ಪು - ರುಚಿಗೆ ತಕ್ಕಷ್ಟು
ಅಡುಗೆ ಸೋಡಾ - 1 ಚಿಟಿಕೆ
ಬೆಣ್ಣೆ - 1 ನಿಂಬೆಗಾತ್ರದಷ್ಟು
ನೀರು - ಸ್ವಲ್ಪ (ಹಿಟ್ಟನ್ನು ಕಲಸಲು)
ಕರಿಯಲು ಎಣ್ಣೆ
 
ಮಾಡುವ ವಿಧಾನ:
ಎಲ್ಲ ಬಗೆಯ ಹಿಟ್ಟುಗಳು, ಮೆಣಸಿನ ಪುಡಿ, ಉಪ್ಪು, ಎಳ್ಳು, ಜೀರಿಗೆ, ಸೋಡಾ - ಇಷ್ಟನ್ನೂ ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಬೆಣ್ಣೆಯನ್ನು ಚೆನ್ನಾಗಿ ಕಾಯಿಸಿಕೊಂಡು ಹಿಟ್ಟಿನ ಮಿಶ್ರಣದ ಮೇಲೆ ಸುರಿಯಿರಿ.
ಹಿಟ್ಟನ್ನು ಒಮ್ಮೆ ಕಲಸಿಕೊಂಡು, ನಂತರ ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇರಿಸಿಕೊಳ್ಳುತ್ತ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ಕಲಸಿದ ಹಿಟ್ಟನ್ನು ಚಕ್ಕುಲಿ ಒರಳಿನಲ್ಲಿ ಹಾಕಿಕೊಂಡು ಕಾದ ಎಣ್ಣೆಯಲ್ಲಿ ಹಿಟ್ಟನ್ನು ಚಕ್ಕುಲಿ ಒರಳಿನಿಂದ ಒತ್ತುತ್ತಾ ಹೋಗಿ.
ಉರಿ ತುಂಬಾ ಜೋರಾಗಿದ್ದರೆ ಮುರುಕು ಚೆನ್ನಾಗಿ ಬೇಯುವುದಿಲ್ಲ. ಮಧ್ಯಮ ಉರಿಯಲ್ಲಿ ಕೆಂಪಗೆ ಕರಿದು ಒಂದು ಟಿಶ್ಯೂ ಪೇಪರ್ ಮೇಲೆ ಹರವಿ, ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ.


ಟಿಪ್ಸ್: 

  • ಹಿಟ್ಟಿಗೆ ಬೆಣ್ಣೆ ಸೇರಿಸುವಾಗ ತುಂಬ ಜಾಸ್ತಿ ಬೆಣ್ಣೆ ಸೇರಿಸಲು ಹೋಗಬೇಡಿ. ಬೆಣ್ಣೆಯ ಪ್ರಮಾಣ ಹೆಚ್ಚಾದರೆ ಚಕ್ಕುಲಿ ಮುರುಕು ಪುಡಿಪುಡಿಯಾಗಿಬಿಡುತ್ತದೆ.
ನನ್ನ ಈ ಚಕ್ಕುಲಿ ತಯಾರಿಕಾ ವಿಧಾನವನ್ನು ಮೇ 31 2011 ರ ದಟ್ಸ್ ಕನ್ನಡ ನ್ಯೂಸ್ ಪೇಪರ್ ನಲ್ಲಿ ಪ್ರಕಟಿಸಲಾಗಿದೆ. ಥ್ಯಾಂಕ್ಸ್ ಟು ದಟ್ಸ್ ಕನ್ನಡ! :)

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)