ಶುಂಠಿ ತಂಬುಳಿ / Shunthi ( Ginger) Tambuli

Click here for English version.


ತಂಬುಳಿ, ಮಜ್ಜಿಗೆ ಉಪಯೋಗಿಸಿ ಮಾಡುವ ಒಂದು ಬಗೆಯ ಮೇಲೋಗರ. ನಮ್ಮ ಮನೆಯಲ್ಲಂತೂ ಬೇಸಿಗೆ ಬಂದರೆ ಸಾಕು, ದಿನವೂ ಒಂದೊಂದು ಬಗೆಯ ತಂಬುಳಿ..ಶುಂಠಿ ತಂಬುಳಿ , ಎಳ್ಳು - ಜೀರಿಗೆ ತಂಬುಳಿ, ಮೆಂತೆ ತಂಬುಳಿ, ಮಜ್ಜಿಗೆ ಹುಲ್ಲಿನ ತಂಬುಳಿ, ಹಸಿ ಅರಿಶಿನದ ತಂಬುಳಿ, ಅಂಬೆ ಕೊಂಬಿನ ತಂಬುಳಿ, ಮಾವಿನಕಾಯಿ ತಂಬುಳಿ, ಒಂದೆಲಗದ ತಂಬುಳಿ, ಎಲವರಿಗೆ ಸೊಪ್ಪಿನ ತಂಬುಳಿ, ಹೀಗೆ. 
ನನ್ನ ಬ್ಲಾಗ್ ನೋಡಿದ ಕೆಲವರು ಹೇಳುತ್ತಿದ್ದರು, ಮಲೆನಾಡಿನ ಹವ್ಯಕ ಅಡಿಗೆ - ತಿಂಡಿಗಳನ್ನೇ ಮೊದಲು ತಿಳಿಸಿಕೊಡು ಎಂದು. ಆದರೆ ಇಲ್ಲಿ ಆಸ್ಟ್ರೇಲಿಯಾದಲ್ಲಿ ಹವ್ಯಕ ಅಡಿಗೆಗೆ ಬೇಕಾಗುವ ಎಲ್ಲ ಸಾಮಗ್ರಿಗಳೂ ಸಮರ್ಪಕವಾಗಿ ಸಿಗದಿರುವುದರಿಂದ ಎಲ್ಲವನ್ನೂ ಇಲ್ಲಿ ತೋರಿಸಿಕೊಡಲು ಸಾಧ್ಯವಾಗುತ್ತಿಲ್ಲ. 
ಬಹಳ ಸುಲಭದಲ್ಲಿ ತಯಾರಿಸಬಹುದಾದ ಶುಂಠಿ ತಂಬುಳಿಯಿಂದ ಈಗ ಪ್ರಾರಂಭಿಸೋಣ..


ಬೇಕಾಗುವ ಸಾಮಗ್ರಿಗಳು:
ಶುಂಠಿ - ಒಂದೂವರೆ ಇಂಚು
ಹಸಿಮೆಣಸು - ಚಿಕ್ಕ ಚೂರು
ತೆಂಗಿನತುರಿ - ಮುಕ್ಕಾಲು ಕಪ್
ಮಜ್ಜಿಗೆ - 1 ಕಪ್
ಉಪ್ಪು - ರುಚಿಗೆ ತಕ್ಕಷ್ಟು 
ಒಗ್ಗರಣೆಗೆ: ಎಣ್ಣೆ - 1 ಚಮಚ, ಸಾಸಿವೆ - ಅರ್ಧ ಚಮಚ, ಜೀರಿಗೆ - ಅರ್ಧ ಚಮಚ, ನಾಲ್ಕೈದು ಎಸಳು ಕರಿಬೇವು


ಮಾಡುವ ವಿಧಾನ:
ಮೊದಲು ಶುಂಠಿ ಮತ್ತು ಹಸಿಮೆಣಸನ್ನು ತೆಂಗಿನತುರಿಯೊಡನೆ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಬೇಕಾದಷ್ಟು ನೀರು ಸೇರಿಸಿಕೊಳ್ಳಿ.
ರುಬ್ಬಿಕೊಂಡ ಮಿಶ್ರಣವನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಹಾಕಿ ಅದಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಕಲಕಿ. ಮಿಶ್ರಣ ಮಂದವೆನಿಸಿದರೆ ಇನ್ನೂ ಸ್ವಲ್ಪ ನೀರು ಸೇರಿಸಿ.
ನಂತರ ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಕರಿಬೇವಿನ ಒಗ್ಗರಣೆ ಮಾಡಿ ತಂಬುಳಿ ಮಿಶ್ರಣಕ್ಕೆ ಸೇರಿಸಿ.
ಈ ತಂಬುಳಿ ಅನ್ನದೊಡನೆ ಹಾಕಿಕೊಳ್ಳಲು ಚೆನ್ನಾಗಿರುತ್ತದೆ. ಊಟದ ಮಧ್ಯೆ ಹಾಗೇ ಕುಡಿಯಲೂಬಹುದು.


ಟಿಪ್ಸ್:
  • ತಂಬುಳಿಗೆ ತೆಂಗಿನತುರಿ ಮತ್ತು ಮಜ್ಜಿಗೆ ಸೇರಿಸಿರುವುದರಿಂದ ಹೆಚ್ಚು ಸಮಯ ಹಾಗೇ ಇಟ್ಟರೆ ಕೆಟ್ಟುಹೋಗುತ್ತದೆ. ಮದ್ಯಾಹ್ನಕ್ಕೆ ಮಾಡಿದ್ದನ್ನು ಸಂಜೆಗೂ ಇಡುವುದಾದರೆ ಫ್ರಿಜ್ ನಲ್ಲಿಟ್ಟು ಉಪಯೋಗಿಸಿ.

ಕಾಮೆಂಟ್‌ಗಳು