ಸ್ಪೆಷಲ್ ಮೊಸರನ್ನ / Curd Rice..in a different way!

Click here for English version.

ನನ್ನವರು ಅಡಿಗೆ ಮನೆಗೆ ಕಾಲಿಡುವುದು ಬಹಳ ಅಪರೂಪ. ಅವರೇ ಅಡಿಗೆ ಮಾಡುವುದಾದರೆ ಏನಾದರೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ನಾನು ಮನೆಯಲ್ಲಿ ಇಲ್ಲದಾಗ ಒಂದು ದಿನ ಲಂಚ್ ಬಾಕ್ಸ್ ಗೆ ಹಾಕಿಕೊಂಡು ಹೋಗಲು ತರಕಾರಿ, ಹಣ್ಣುಗಳನ್ನು ಹಾಕಿ ಮೊಸರನ್ನ ತಯಾರಿಸಿದ್ದರಂತೆ. ಅದು ಬಹಳ ಚೆನ್ನಾಗಿ ಬಂತೆಂದು, ಇನ್ನೊಂದು ದಿನ ನನಗೂ ಅದರ ರುಚಿಯನ್ನು ತೋರಿಸಿಯಾಯಿತು. ನಿಜಕ್ಕೂ ತುಂಬ ಚೆನ್ನಾಗಿತ್ತು ಮೊಸರನ್ನ! ಈಗ ನಾನು ಯಾವಾಗಲಾದರೂ ಮೊಸರನ್ನವನ್ನು ತಯಾರಿಸಿದರೆ ಅವರು ಹೇಳುವ ಮಾತು - 'ಚೆನ್ನಾಗಿದೆ, ಆದರೆ ನಾನು ಮಾಡಿದಷ್ಟು ಚೆನ್ನಾಗಿ ಬಂದಿಲ್ಲ!' ನಾನು ಏನು ಹೇಳಲು ಸಾಧ್ಯ ಅಲ್ಲವೇ? ಏಕೆಂದರೆ ಈ ಮೊಸರನ್ನದ ಕಾಪಿ ರೈಟ್ ಅವರದು!! (*)


ಸರ್ವಿಂಗ್ಸ್: 2 
ತಯಾರಿಸುವ ಸಮಯ: 15 ನಿಮಿಷಗಳು
 
ಬೇಕಾಗುವ ಸಾಮಗ್ರಿಗಳು:
ಅನ್ನ - 1 1 /4 ಲೋಟ ಅಕ್ಕಿಯದು 
ಕ್ಯಾರೆಟ್ - ಅರ್ಧ
ಗ್ರಾನಿ ಸ್ಮಿತ್ ಆಪಲ್ (ಹಸಿರು ಬಣ್ಣದ ಸ್ವಲ್ಪ ಹುಳಿ ಇರುವ ಸೇಬು) - ಅರ್ಧ
ಹಸಿಮೆಣಸು - 2 
ಕರಿಬೇವು 
ಶುಂಠಿ - 1 ಇಂಚು
ಅರಿಶಿನ - 1 / 4 ಚಮಚ
ಮೆಣಸಿನ ಪುಡಿ - 1 / 4 ಚಮಚ (ಬೇಕಿದ್ದರೆ)
ಗೋಡಂಬಿ - ಸ್ವಲ್ಪ  
ಉಪ್ಪು
ಗಟ್ಟಿ ಮೊಸರು - 1 ಬೌಲ್ 
ಒಗ್ಗರಣೆಗೆ: ಎಣ್ಣೆ, ಉದ್ದಿನಬೇಳೆ, ಸಾಸಿವೆ

ಮಾಡುವ ವಿಧಾನ:
ಮೊದಲು ಕ್ಯಾರೆಟ್ ತುರಿದುಕೊಳ್ಳಿ. ಸೇಬು ಹಣ್ಣನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
ಅನ್ನವನ್ನು ಒಂದು ಪ್ಲೇಟ್ ನಲ್ಲಿ ಹರವಿ ತಣ್ಣಗಾಗಲು ಬಿಡಿ.
ಒಂದು ಪಾತ್ರೆಯಲ್ಲಿ ಅನ್ನ, ಮೊಸರು, ಜಜ್ಜಿದ ಶುಂಠಿ, ಉಪ್ಪು, ಕ್ಯಾರೆಟ್ ತುರಿ, ಹೆಚ್ಚಿದ ಸೇಬು, ರುಚಿಗೆ ತಕ್ಕಷ್ಟು ಮೆಣಸಿನ ಪುಡಿ ಸೇರಿಸಿ ಕಲಸಿಕೊಳ್ಳಿ. ಬೇಕಿದ್ದರೆ ಕಲಸುವಾಗ ಸ್ವಲ್ಪ ನೀರು ಸೇರಿಸಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ, ಗೋಡಂಬಿ, ಉದ್ದಿನಬೇಳೆ, ಸಾಸಿವೆ, ಅರಿಶಿನ ಹಾಕಿ ಚಟಗುಟ್ಟಿದ ನಂತರ ಹೆಚ್ಚಿದ ಹಸಿಮೆಣಸು, ಕರಿಬೇವು ಸೇರಿಸಿ.
ಒಗ್ಗರಣೆಯನ್ನು ಮೊದಲು ತಯಾರಿಸಿಕೊಂಡ ಮೊಸರನ್ನಕ್ಕೆ ಸೇರಿಸಿ ಕಲಸಿ.
ಮೊಸರು ಹುಳಿ ಇಲ್ಲದಿದ್ದರೆ ಬೇಕಿದ್ದರೆ ಸ್ವಲ್ಪ ನಿಂಬೆರಸ ಸೇರಿಸಿ ಕಲಸಿದರೆ ಚೆನ್ನಾಗಿರುತ್ತದೆ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)