ಕಳಲೆ ಪಲ್ಯ / Spiced Bamboo shoot (Kalale Palya)

Click here for English version.

ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಸಾಕು, ಹಳ್ಳಿಗಳ ಕಡೆ ಕಳಲೆಯ ಸೀಸನ್ ಶುರುವಾಗುತ್ತದೆ. ಒಂದು ಮುಖ್ಯವಾದ ವಿಷಯವೆಂದರೆ ಕಳಲೆಯನ್ನು ಫ್ರೆಶ್ ಆಗಿ ಬಳಸುವಂತಿಲ್ಲ; ಇದನ್ನು ನಮಗೆ ಬೇಕಾದಂತೆ ಹೆಚ್ಚಿಕೊಂಡು 2 - 3 ದಿನ ನೀರಿನಲ್ಲಿ ನೆನೆಸಿಟ್ಟು (ನೀರನ್ನು ದಿನವೂ ಬದಲಾಯಿಸಬೇಕು) ನಂತರವೇ  ಅಡಿಗೆಗೆ ಬಳಸಬಹುದು. ನೀವು ಕಳಲೆ ಪ್ರಿಯರಾದರೆ ಇದನ್ನು ಉಪ್ಪುನೀರಿನಲ್ಲಿ ಹಾಕಿಟ್ಟುಕೊಂಡು ವರ್ಷವಿಡೀ ಬಳಸಬಹುದು! ನಾವು ಇಲ್ಲಿನ ಚೈನೀಸ್ ಶಾಪ್ ಗಳಲ್ಲಿ ಕ್ಯಾನ್ ಗಳಲ್ಲಿ ದೊರೆಯುವ ಕಳಲೆಯನ್ನು ತಂದಿಟ್ಟುಕೊಂಡು ಬಳಸುತ್ತೇವೆ. ಕಳಲೆಯಿಂದ ತಯಾರಿಸುವ ಅಡಿಗೆಗಳು ಬಹಳ ರುಚಿ. ಅದರಲ್ಲೂ ಕಳಲೆಯ ಪಲ್ಯವಂತೂ.. ಬೊಂಬಾಟ್! 


ತಯಾರಿಸಲು ಬೇಕಾಗುವ ಸಮಯ: 1 1 / 4 ಘಂಟೆ

ಬೇಕಾಗುವ ಸಾಮಗ್ರಿಗಳು:
ಕಳಲೆ - 2 lb (4 lb ಅಥವಾ 64 oz ಕ್ಯಾನ್ ನಲ್ಲಿ ಅರ್ಧದಷ್ಟನ್ನು ಬಳಸಿದ್ದೇನೆ)
ಉದ್ದಿನಬೇಳೆ - 1 / 2 ಚಮಚ
ಸಾಸಿವೆ - 1 / 2 ಚಮಚ
ಚಿಟಿಕೆ ಇಂಗು
ಒಣಮೆಣಸು - 2
ಹಸಿಮೆಣಸು - 3 
ಚಿಟಿಕೆ ಅರಿಶಿನ
ಎಣ್ಣೆ 2 - 3 ಚಮಚ
ನಿಂಬೆಹಣ್ಣು - 1
ರುಚಿಗೆ ತಕ್ಕಷ್ಟು ಉಪ್ಪು
  
ಮಾಡುವ ವಿಧಾನ:
ಕಳಲೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನೀರಿನಂಶವನ್ನು ಹಿಂಡಿ ತೆಗೆದುಬಿಡಿ.
ನೀರನ್ನೆಲ್ಲ ಹಿಂಡಿ ತೆಗೆದ ಕಳಲೆಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ ಕಾದ ನಂತರ ಒಣಮೆಣಸಿನ ಚೂರುಗಳು, ಉದ್ದಿನಬೇಳೆ, ಸಾಸಿವೆ, ಚಿಟಿಕೆ ಇಂಗು, ಅರಿಶಿನ ಹಾಕಿ ಚಟಗುಡಿಸಿ, ಹಸಿಮೆಣಸಿನ ಚೂರುಗಳನ್ನು ಸೇರಿಸಿ. 
ನಂತರ ಇದಕ್ಕೆ ಸಣ್ಣಗೆ ಹೆಚ್ಚಿಕೊಂಡ ಕಳಲೆ ಮತ್ತು ಉಪ್ಪನ್ನು ಸೇರಿಸಿ ಸ್ವಲ್ಪ ಕಡಿಮೆ ಉರಿಯಲ್ಲಿ 35 - 40 ನಿಮಿಷ ಹುರಿಯಿರಿ. 
ಕಳಲೆ ಚೆನ್ನಾಗಿ ಹುರಿದ ನಂತರ ಇದಕ್ಕೆ ರುಚಿಗೆ ತಕ್ಕಷ್ಟು ನಿಂಬೆರಸ ಸೇರಿಸಿ ಉರಿಯಿಂದ ಇಳಿಸಿ.
ಈ ಪಲ್ಯ ಊಟಕ್ಕೆ ಹಾಕಿಕೊಳ್ಳಲು ಸೊಗಸಾಗಿರುತ್ತದೆ. ಚೆನ್ನಾಗಿ ಹುರಿದಿರುವುದರಿಂದ 2 - 3 ದಿನಗಳವರೆಗೂ ಕೆಡದೆ ಉಳಿಯುತ್ತದೆ.


ಟಿಪ್ಸ್:
  • ನಾನು ಇಲ್ಲಿ ಕ್ಯಾನ್ ನಲ್ಲಿ ಬರುವ ಕಳಲೆಯನ್ನು ಬಳಸಿದ್ದೇನೆ. ಹೀಗಾಗಿ ಇದನ್ನು ಪುನಃ ನೀರಿನಲ್ಲಿ ನೆನೆಸಿಡುವ ಅಗತ್ಯವಿಲ್ಲ. ಫ್ರೆಶ್ ಕಳಲೆಯನ್ನು ಬಳಸುವುದಾದರೆ 2 ದಿನ ನೀರಿನಲ್ಲಿ ನೆನೆಸಿಕೊಂಡು ಬಳಸಿ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)