ಬೂಂದಿ ಲಾಡು / Boondi Laddoo

Click here for English version.

ಹಬ್ಬ ಅಥವಾ ವಿಶೇಷ ಸಂದರ್ಭಗಳಲ್ಲಿ ಭಾರತದಲ್ಲಿ ಸಾಮಾನ್ಯವಾಗಿ ತಯಾರಿಸುವ ಸಿಹಿತಿಂಡಿ ಇದು. ಕಡಲೆಹಿಟ್ಟಿನಿಂದ ಬೂಂದಿ (ಚಿಕ್ಕ ಕಾಳುಗಳು) ತಯಾರಿಸಿಕೊಂಡು ಅದಕ್ಕೆ ಸಕ್ಕರೆ ಪಾಕವನ್ನು ಸೇರಿಸಿ ಈ ಬೂಂದಿ ಲಾಡನ್ನು ಮಾಡುತ್ತಾರೆ. ನಮ್ಮ ಮನೆಯಲ್ಲಿ ಗಣೇಶ ಚತುರ್ಥಿಯ ದಿನ ಪೂಜೆಗೆ ಇದೇ ರೀತಿಯ ಲಾಡನ್ನು ಬೆಲ್ಲ ಹಾಕಿ ತಯಾರಿಸುತ್ತಾರೆ. ಅದಕ್ಕೆ ಲಡ್ಡಿಗೆ ಉಂಡೆ ಎಂದು ಹೆಸರು. ಇಲ್ಲಿ ನಾವು ಬೆಲ್ಲ ಹಾಕುವ ಗೋಜಿಗೆ ಹೋಗದೆ, ಸಕ್ಕರೆ ಹಾಕಿಯೇ ಲಾಡನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿದೆವು. ನಾನು ಬೂಂದಿ ಲಾಡನ್ನು ಮೊದಲೆಂದೂ ತಯಾರಿಸಿರಲಿಲ್ಲ. ಮನೆಯಲ್ಲಿ ಇತರರು ತಯಾರಿಸಿದ್ದನ್ನು ನೋಡಿದ್ದಷ್ಟೇ ನೆನಪು. ಒಟ್ಟಿನಲ್ಲಿ ಲಾಡು ಮಾಡಿದ್ದೂ ಆಯಿತು, ಹಬ್ಬ ಮುಗಿಸಿದ್ದೂ ಆಯಿತು. ಇನ್ನೊಂದು ಸಂಗತಿ ಏನೆಂದರೆ, ಹಬ್ಬಕ್ಕೆಂದು ತಯಾರಿಸಿದ ತಿಂಡಿಗಳಲ್ಲಿ ಮೊದಲು ಖರ್ಚಾದದ್ದೇ ಈ ಲಾಡು!


ತಯಾರಿಸಲು ಬೇಕಾಗುವ ಸಮಯ: 1 ಘಂಟೆ
ಈ ಅಳತೆಯಿಂದ ಮೀಡಿಯಂ ಗಾತ್ರದ 14 ಲಾಡುಗಳನ್ನು ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:
ಕಡಲೆಹಿಟ್ಟು - 2 1/4 ಕಪ್
ಸಕ್ಕರೆ - 2 1/4 ಕಪ್
ಏಲಕ್ಕಿ - 3 
ಲವಂಗ - 4
ದ್ರಾಕ್ಷಿ, ಗೋಡಂಬಿ (ಬೇಕಿದ್ದರೆ) - ಸ್ವಲ್ಪ 
ನೀರು  
ಕರಿಯಲು ಎಣ್ಣೆ 
ಚಿಕ್ಕ ತೂತುಗಳಿರುವ ಜಾಲರಿ (ಬೂಂದಿ ತಯಾರಿಸಲು)

ಮಾಡುವ ವಿಧಾನ:
ಕಡಲೆಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ಗಂಟುಗಳಿಲ್ಲದಂತೆ ದಪ್ಪಗೆ ದೋಸೆ ಹಿಟ್ಟಿನ ಹದಕ್ಕೆ ಕದಡಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು, ತೂತುಗಳಿರುವ ಜಾಲರಿಯ ಮೂಲಕ ಕಡಲೆ ಹಿಟ್ಟನ್ನು ಚಿಕ್ಕ ಹನಿಗಳಾಗಿ ಬಾಣಲೆಗೆ ಬೀಳುವಂತೆ ಮಾಡಿ.
ಎಲ್ಲ ಹಿಟ್ಟನ್ನೂ ಹೀಗೇ ಕರಿದು, ಬೂಂದಿ ತಯಾರಿಸಿಕೊಳ್ಳಿ.
ಸಕ್ಕರೆಗೆ ಸ್ವಲ್ಪ ನೀರು ಸೇರಿಸಿ ಕುದಿಸಿ ದಪ್ಪಗೆ ಒಂದೆಳೆ ಪಾಕ ಮಾಡಿಕೊಳ್ಳಿ.
ಏಲಕ್ಕಿ ಮತ್ತು ಲವಂಗವನ್ನು ಪುಡಿಮಾಡಿ, ಸಕ್ಕರೆ ಪಾಕಕ್ಕೆ ಸೇರಿಸಿ.
ದ್ರಾಕ್ಷಿ, ಗೋಡಂಬಿಯನ್ನು ಎಣ್ಣೆ ಅಥವಾ ತುಪ್ಪದಲ್ಲಿ ಕರಿದುಕೊಂಡು ಸೇರಿಸಿ.
ಕರಿದ ಬೂಂದಿಯನ್ನು ಸಕ್ಕರೆ ಪಾಕಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಮಿಶ್ರಣ ಸ್ವಲ್ಪ ಬಿಸಿಯಿರುವಾಗಲೇ ಕೈಯಿಂದ ಒತ್ತಿ ಲಾಡುಗಳನ್ನು ಕಟ್ಟಿ. ಇಲ್ಲದಿದ್ದರೆ ಮಿಶ್ರಣ ಹಾಗೇ ಗಟ್ಟಿಯಾಗಿಬಿಡುತ್ತದೆ. ಮಿಶ್ರಣ ಗಟ್ಟಿಯಾಗಿಬಿಟ್ಟರೆ ಪುನಃ ಸ್ವಲ್ಪ ಬಿಸಿಮಾಡಿಕೊಂಡು ಲಾಡುಗಳನ್ನು ಮಾಡಿ.
ಈ ಲಾಡು ಒಂದು ವಾರದವರೆಗೂ ಚೆನ್ನಾಗಿರುತ್ತದೆ.


ಟಿಪ್ಸ್:
  • ಲಾಡನ್ನು ಇನ್ನೂ ರುಚಿಕರವಾಗಿ ಮಾಡಲು ಕೇಸರಿ ದಳಗಳನ್ನು ಬೇಕಿದ್ದರೆ ಸೇರಿಸಿ.
  • ಕಡಲೆಹಿಟ್ಟಿನ ಮಿಶ್ರಣ ತುಂಬ ಗಟ್ಟಿಯಾದರೆ ಇನ್ನೂ ಸ್ವಲ್ಪ ನೀರು ಸೇರಿಸಿ ಕಲಸಿ. ಅಥವಾ ಮಿಶ್ರಣ ತೆಳ್ಳಗೆನಿಸಿದರೆ ಸ್ವಲ್ಪ ಕಡಲೆಹಿಟ್ಟನ್ನು ಸೇರಿಸಿ.
  • ಫುಡ್ ಕಲರ್ ಸೇರಿಸಿದರೆ ಲಾಡು ಇನ್ನೂ ಮೋಹಕವಾಗಿ ಕಾಣುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)