ಇಲ್ಲಿ ನಮ್ಮ ಮನೆಗೆ ಬಹಳ ಹತ್ತಿರದಲ್ಲೇ ಒಂದು ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಇದೆ. ಮನೆಗೆ ಏನೇ ಬೇಕಿದ್ದರೂ ಅಲ್ಲಿಂದಲೇ ತರುವುದು ರೂಢಿ. ನಮಗೆ ಬೇಕಾಗುವ ಇಂಡಿಯನ್ ಗ್ರಾಸರಿಗಳೂ ಅಲ್ಲೇ ಒಂದೆರಡು ಅಂಗಡಿಗಳಲ್ಲಿ ಸಿಗುತ್ತವೆ. ಕಳೆದ ವಾರ ಶಾಪಿಂಗ್ ಗೆ ಹೋದಾಗ ಒಂದು ಕಡೆ ಚೆನ್ನಾಗಿರುವ ತೋತಾಪುರಿ ಮಾವಿನಕಾಯಿಗಳನ್ನು ಇಟ್ಟಿದ್ದರು. ಮಾವಿನಕಾಯಿ ಹಾಗೇ ಕಟ್ ಮಾಡಿಕೊಂಡು ತಿನ್ನಲು ಚೆನ್ನಾಗಿರುವುದೆಂದು ಕೊಂಡುತಂದೆ. ಮನೆಗೆ ತಂದು ಕಟ್ ಮಾಡಿ ನೋಡಿದರೆ ಅದು ತಿನ್ನಲು ಸಾಧ್ಯವಾಗದಷ್ಟು ಹುಳಿ ಇತ್ತು! ನಂತರ ಆ ಮಾವಿನಕಾಯಿಯನ್ನು ಬೇಯಿಸಿ ಗೊಜ್ಜು ಮಾಡಿದೆ. ತೋತಾಪುರಿ ಮಾವಿನಕಾಯಿ ಇಷ್ಟೊಂದು ಹುಳಿ ಇರುವುದೆಂದು ಗೊತ್ತೇ ಇರಲಿಲ್ಲ.
ಗೊಜ್ಜು ಮಾಡಲು ಮಾವಿನಕಾಯಿ ಹುಳಿ ಇದ್ದಷ್ಟೂ ಒಳ್ಳೆಯದು. ಚೆನ್ನಾಗಿ ಕುದಿಸಿಟ್ಟರೆ ಈ ಗೊಜ್ಜು ನಾಲ್ಕೈದು ದಿನಗಳವರೆಗೂ ಚೆನ್ನಾಗಿರುತ್ತದೆ. ಇದಕ್ಕೆ ಫ್ರೆಶ್ ಮಾವಿನಕಾಯಿಯೇ ಬೇಕೆಂದಿಲ್ಲ, ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿಯಿಂದಲೂ ಈ ಗೊಜ್ಜನ್ನು ತಯಾರಿಸಬಹುದು. ಇದು ಅನ್ನದೊಡನೆ ಒಳ್ಳೆಯ ಕಾಂಬಿನೇಶನ್.
ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು
ಬೇಕಾಗುವ ಸಾಮಗ್ರಿಗಳು:
ಚೆನ್ನಾಗಿ ಹುಳಿ ಇರುವ ಮಾವಿನಕಾಯಿ - 1 ದೊಡ್ಡದು
ಒಣಮೆಣಸು - 2
ಹಸಿಮೆಣಸು - 6 (ಖಾರಕ್ಕೆ ತಕ್ಕಂತೆ)
ಉದ್ದಿನಬೇಳೆ - 1 / 2 ಚಮಚ
ಸಾಸಿವೆ - 1 / 2 ಚಮಚ
ಇಂಗು
ಕರಿಬೇವು
ಚಿಟಿಕೆ ಅರಿಶಿನ
ಸಕ್ಕರೆ - 1 / 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಬೆಳ್ಳುಳ್ಳಿ 8 - 10 ಎಸಳು (ಜಜ್ಜಿದ್ದು)
ಎಣ್ಣೆ - 3 ಚಮಚ
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಮಾವಿನಕಾಯಿಯನ್ನು ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ.
ಬೆಂದ ನಂತರ ಮಾವಿನಕಾಯಿಯನ್ನು ನೀರಿನಿಂದ ತೆಗೆದು ತಣ್ಣಗಾಗಲು ಬಿಡಿ.
ಮಾವಿನಕಾಯಿಯ ಪಲ್ಪ್ ತೆಗೆದು, ಸಿಪ್ಪೆ ಮತ್ತು ಓಟೆಯನ್ನು ಎಸೆದುಬಿಡಿ. ಪಲ್ಪ್ ತೆಗೆಯುವಾಗ ಬೇಕಿದ್ದರೆ ಸ್ವಲ್ಪ ನೀರನ್ನೂ ಸೇರಿಸಬಹುದು.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ ಕಾದ ನಂತರ ಉದ್ದಿನಬೇಳೆ, ಒಣಮೆಣಸಿನ ಚೂರುಗಳು, ಸಾಸಿವೆ, ಇಂಗು, ಅರಿಶಿನ ಸೇರಿಸಿ ಚಟಗುಟ್ಟಿದ ನಂತರ ಕರಿಬೇವು, ಹಸಿಮೆಣಸಿನ ಚೂರುಗಳನ್ನು ಸೇರಿಸಿ.
ಇದಕ್ಕೆ ಜಜ್ಜಿದ ಬೆಳ್ಳುಳ್ಳಿಯನ್ನು ಸೇರಿಸಿ ಹಸಿ ವಾಸನೆ ಹೋಗುವಂತೆ ಹುರಿಯಿರಿ.
ನಂತರ ಇದಕ್ಕೆ ಮಾವಿನ ಪಲ್ಪ್, ಉಪ್ಪು ಮತ್ತು ಸಕ್ಕರೆ ಸೇರಿಸಿ ಕುದಿಯಲಿಡಿ. ಮಿಶ್ರಣ ತುಂಬ ಗಟ್ಟಿ ಎನಿಸಿದರೆ ಸ್ವಲ್ಪ ನೀರು ಸೇರಿಸಿಕೊಳ್ಳಿ.
ಗೊಜ್ಜು 8 - 10 ನಿಮಿಷ ಚೆನ್ನಾಗಿ ಕುದಿದ ನಂತರ ಉರಿಯಿಂದ ಇಳಿಸಿ. ತಣ್ಣಗಾದನಂತರ ಗಾಳಿಯಾಡದ ಬಾಟಲ್ ನಲ್ಲಿ ತುಂಬಿಸಿಡಿ.
ಹುಳಿ, ಖಾರ ಹದವಾಗಿರುವ ಈ ಗೊಜ್ಜು ಊಟಕ್ಕೆ ಹಾಕಿಕೊಳ್ಳಲು ಹಿತವಾಗಿರುತ್ತದೆ. ಚೆನ್ನಾಗಿ ಕುದಿಸಿಕೊಂಡರೆ 4 - 5 ದಿನವಾದರೂ ಹಾಳಾಗುವುದಿಲ್ಲ.
ಟಿಪ್ಸ್:
- ಬೆಳ್ಳುಳ್ಳಿಯ ಪರಿಮಳ ಜಾಸ್ತಿ ಬೇಕೆಂದರೆ ಬೆಳ್ಳುಳ್ಳಿಯನ್ನು ಮೊದಲು ಸೇರಿಸದೆ, ಗೊಜ್ಜು ತಯಾರಾದ ನಂತರ ಎಣ್ಣೆಯಲ್ಲಿ ಒಗ್ಗರಣೆ ಮಾಡಿ ಹಾಕಿ.
- ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿಯನ್ನು ಬಳಸುವುದಾದರೆ ಅದನ್ನು ಪುನಃ ಬೇಯಿಸುವ ಅಗತ್ಯವಿಲ್ಲ. ಏಕೆಂದರೆ ಅದನ್ನು ಬೇಯಿಸಿಯೇ ಉಪ್ಪಿನಲ್ಲಿ ಹಾಕಿರುತ್ತಾರೆ. ಹಾಗೇ ಇನ್ ಸ್ಟಂಟ್ ಆಗಿ ಇದರ ಪಲ್ಪ್ ತೆಗೆದುಕೊಂಡು ಬಳಸಬಹುದು!
MandaNa Gojjane :)
ಪ್ರತ್ಯುತ್ತರಅಳಿಸಿHmm, houde :)
ಪ್ರತ್ಯುತ್ತರಅಳಿಸಿpicture nodine baayiyalli neeru baruttide
ಪ್ರತ್ಯುತ್ತರಅಳಿಸಿ