ರವಾ ಕೇಸರಿ (ಶಿರಾ) / Semolina Kesari (Shira)

Click here for English version.

ರವಾ ಕೇಸರಿ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇರುತ್ತದೆ. ಅರ್ಜೆಂಟಾಗಿ ಮನೆಗೆ ಯಾರಾದರೂ ಅತಿಥಿಗಳು ಬರುವರೆಂದರೆ ಬಹಳ ಸುಲಭದಲ್ಲಿ ತಯಾರಿಸಬಹುದಾದ ಸಿಹಿ ತಿಂಡಿ ಇದು. ಸೂಜಿ ರವೆಯ ಬದಲು ಗೋಧಿ ಹಿಟ್ಟಿನಿಂದಲೂ ಕೇಸರಿ ಅಥವಾ ಶಿರಾ ತಯಾರಿಸಬಹುದು. ರವೆಯಿಂದ ತಯಾರಿಸಿದ ಕೇಸರಿ ಎಂದರೆ ನಮ್ಮಿಬ್ಬರಿಗೂ ಬಹಳ ಇಷ್ಟ. ಹೀಗಾಗಿ ನಾನು ಹೆಚ್ಚಾಗಿ ತಯಾರಿಸುವುದು ಇದನ್ನೇ!


ತಯಾರಿಸಲು ಬೇಕಾಗುವ ಸಮಯ: 40 -  45 ನಿಮಿಷಗಳು
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಸೂಜಿ ರವಾ - 1 1/2 ಕಪ್   
ಸಕ್ಕರೆ - 3 ಕಪ್
ತುಪ್ಪ - 1 ಕಪ್ 
ಗೋಡಂಬಿ, ದ್ರಾಕ್ಷಿ - ಸ್ವಲ್ಪ
ಏಲಕ್ಕಿ ಪುಡಿ - 1/2 ಚಮಚ  
ಹಾಲು - 1/4 ಕಪ್ 
ಕೇಸರಿ ದಳಗಳು (ಬೇಕಿದ್ದರೆ) - ಸ್ವಲ್ಪ
ನೀರು - 3 3/4 ಕಪ್ (1 ಕಪ್ ರವೆಗೆ 2 1/2 ಕಪ್ ನಂತೆ)
ಚಿಟಿಕೆ ಉಪ್ಪು 

ಮಾಡುವ ವಿಧಾನ:
ಬಾಣಲೆ ಕಾಯಲಿಟ್ಟು ಅದಕ್ಕೆ ಅರ್ಧದಷ್ಟು ತುಪ್ಪವನ್ನು ಹಾಕಿ. ರವೆಯನ್ನು ಇದಕ್ಕೆ ಸೇರಿಸಿ, ಪರಿಮಳ ಬರುವಂತೆ ಕೆಂಪಗೆ ಹುರಿಯಿರಿ.
ಒಂದು ಪಾತ್ರೆಯಲ್ಲಿ ನೀರನ್ನು ಕುದಿಯಲಿಡಿ. ರವೆ ಹುರಿಯುವಷ್ಟರಲ್ಲಿ ನೀರು ಕಾದಿರಲಿ.
ಹುರಿದ ರವೆಗೆ ನೀರನ್ನು ಸೇರಿಸಿ ಕೈಯಾಡಿಸಿ, ಮುಚ್ಚಳ ಮುಚ್ಚಿ ಬೇಯಿಸಿ. ಜೊತೆಗೆ ಚಿಟಿಕೆ ಉಪ್ಪನ್ನೂ ಹಾಕಿ. 
5 - 6 ನಿಮಿಷಗಳ ನಂತರ ಮುಚ್ಚಳ ತೆಗೆದು ರವೆ ಬೆಂದಿದೆಯೇ ಎಂದು ನೋಡಿ. ಬೆಂದಿಲ್ಲವಾದರೆ ಇನ್ನೂ ಸ್ವಲ್ಪ ನೀರು ಸೇರಿಸಿ ಬೇಯಿಸಿ.
ರವೆ ಬೆಂದಿದೆಯೇ ಎಂದು ನೋಡಲು ಬೆರಳಿನಿಂದ ಒತ್ತಿ ಪರೀಕ್ಷಿಸಿ. ಚೆನ್ನಾಗಿ ಮೆತ್ತಗಾಗಿದ್ದರೆ ರವೆ ಬೆಂದಿದೆ ಎಂದರ್ಥ.  
ರವೆ ಬೆಂದು, ನೀರು ಆರುತ್ತಿದ್ದಂತೆ ಸಕ್ಕರೆ ಸೇರಿಸಿ. ಸಕ್ಕರೆ ಸೇರಿಸಿದಾಗ ಮಿಶ್ರಣ ಸ್ವಲ್ಪ ತೆಳ್ಳಗಾಗುತ್ತದೆ. ಇದಕ್ಕೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 7 - 8 ನಿಮಿಷ ಬೇಯಿಸಿ. ರುಚಿ ನೋಡಿಕೊಂಡು ಸಕ್ಕರೆ ಬೇಕಿದ್ದರೆ ಸೇರಿಸಿ. 
ಕೇಸರಿ ದಳ ಅಥವಾ ಫುಡ್ ಕಲರ್ ಸೇರಿಸುವುದಾದರೆ ಸೇರಿಸಿ. ಗೋಡಂಬಿ, ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಸೇರಿಸಿ.
ಮಿಶ್ರಣಕ್ಕೆ ಹಾಲು, ಸ್ವಲ್ಪ ತುಪ್ಪ, ಸೇರಿಸಿ ಸಣ್ಣ ಉರಿಯಲ್ಲಿ 8 - 10 ನಿಮಿಷ ಬೇಯಿಸಿ. 
ಚೆನ್ನಾಗಿ ಹದ ಬಂದಾಗ ಮಿಶ್ರಣದಿಂದ ತುಪ್ಪ ಬೇರ್ಪಡತೊಡಗುತ್ತದೆ. ಆಗ ಇದಕ್ಕೆ ಏಲಕ್ಕಿಪುಡಿ ಸೇರಿಸಿ ಕೆಳಗಿಳಿಸಿ. 
ತಯಾರಾದ ರವಾ ಕೇಸರಿಯನ್ನು ಏನಾದರೂ ಕುರುಕಲು ತಿಂಡಿಯೊಡನೆ ಹಾಕಿಕೊಡಿ.


ಕಾಮೆಂಟ್‌ಗಳು