ಎಳ್ಳುಂಡೆ / Sesame Seeds Laddoo

Click here for English version.

ನೀವೆಲ್ಲರೂ ನನ್ನಂತೆಯೇ ಹಬ್ಬದ ತಯಾರಿಯಲ್ಲಿ ತೊಡಗಿರಬಹುದು.. ನಾಳೆಯೇ ಗಣೇಶ ಚತುರ್ಥಿ! ಹಬ್ಬದ ಗಡಿಬಿಡಿಯಲ್ಲಿ ಈ ಪೋಸ್ಟಿಂಗ್ ಏಕೆ ಗೊತ್ತಾ? ಇದೆ, ಇದೆ, ದೇರ್ ಈಸ್ ಸಂಥಿಂಗ್ ಸ್ಪೆಷಲ್! ;) ಅದೇನೆಂದರೆ ಕಳೆದ ಕೆಲವು ತಿಂಗಳುಗಳಿಂದ ಬ್ಲಾಗ್ ನಲ್ಲಿ ಪ್ರತಿ ತಿಂಗಳೂ 11 ಅಡಿಗೆಗಳನ್ನು ಹಾಕುತ್ತಾ ಬಂದಿದ್ದೇನೆ. ಈ ತಿಂಗಳ ಟಾರ್ಗೆಟ್ ಮುಗಿಸಲು ನನ್ನ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಈ ಪೋಸ್ಟಿಂಗ್ ಮಾಡಬೇಕಾಯಿತು :) 
ನಮ್ಮ ಮನೆಯಲ್ಲಿ ಹಬ್ಬದ ತಯಾರಿಗಳು ಇಂದೇ ಶುರುವಾಗಿವೆ. ನಾಳೆ ಒಬ್ಬಳೇ ಎಲ್ಲವನ್ನೂ ಮಾಡಲು ಕಷ್ಟ ಅಲ್ಲವೇ? ಅದಕ್ಕೆ! ಹಬ್ಬಕ್ಕೆಂದು ತಯಾರಿಸಿದ ಎಳ್ಳುಂಡೆಯ ರೆಸಿಪಿಯನ್ನು ನಿಮ್ಮೊಡನೆ ಈಗ ಹಂಚಿಕೊಳ್ಳಲಿದ್ದೇನೆ. ಊರಲ್ಲಿ ನನ್ನ ಅತ್ತೆ ಒಬ್ಬರಿದ್ದಾರೆ, ಅವರ ಮನೆಯಲ್ಲಿ ಪ್ರತಿ ತಿಂಗಳೂ ಸಂಕಷ್ಟಹರ ಚತುರ್ಥಿಯನ್ನು ಆಚರಣೆ ಮಾಡುತ್ತಾರೆ. ನಮಗೆಲ್ಲ ಅವರು ತಯಾರಿಸುವ ಎಳ್ಳುಂಡೆ ಬಹುದೊಡ್ಡ ಆಕರ್ಷಣೆ. ಅದರ ರುಚಿ ಎಷ್ಟೆಂದರೆ ನಾವೆಲ್ಲ ಪೂಜೆ ಮುಗಿಯುವುದನ್ನೇ ಕಾಯುತ್ತಿರುತ್ತಿದ್ದೆವು, ಎಳ್ಳುಂಡೆ ತಿನ್ನಬೇಕೆಂದು! ಅವರ ಕೆಲವು ಟಿಪ್ಸ್ ಗಳನ್ನು ನಾನೂ ಇಲ್ಲಿ ಅಳವಡಿಸಿಕೊಂಡಿದ್ದೇನೆ. ಆದರೆ ಊರಲ್ಲಿ ಸಿಗುವ ತೆಳ್ಳಗಿನ, ಆಲೆಮನೆ ಬೆಲ್ಲವನ್ನು ಬಳಸಿ ಮಾಡಿದರೆ ಎಳ್ಳುಂಡೆಯ ರುಚಿ ಇನ್ನೂ ಹೆಚ್ಚು!


ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು
ಇಲ್ಲಿ ಹೇಳಿದ ಅಳತೆಯಿಂದ ಸುಮಾರು 20 - 21 ಎಳ್ಳುಂಡೆಗಳನ್ನು ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:
ಪುಡಿ ಬೆಲ್ಲ - ಒಂದೂಕಾಲು ಕಪ್
ಎಳ್ಳು - ಒಂದೂಕಾಲು ಕಪ್
ಏಲಕ್ಕಿ - 1  
ಚಿಟಿಕೆ ಅಡಿಗೆ ಸೋಡಾ
ಸ್ವಲ್ಪ ನೀರು


ಮಾಡುವ ವಿಧಾನ:
ಬಾಣಲೆಯಲ್ಲಿ ಎಳ್ಳನ್ನು ಹಾಕಿಕೊಂಡು ಪರಿಮಳ ಬರುವಂತೆ ಸ್ವಲ್ಪ ಕೆಂಪಗೆ ಹುರಿದುಕೊಳ್ಳಿ.
ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಕುದಿಯಲಿಡಿ.
ಏಲಕ್ಕಿಯನ್ನು ನುಣ್ಣಗೆ ಪುಡಿಮಾಡಿಕೊಳ್ಳಿ.
ಹುರಿದ ಎಳ್ಳನ್ನು ಮಿಕ್ಸಿಯಲ್ಲಿ ಕೇವಲ 1 - 2 ಸೆಕೆಂಡುಗಳ ಕಾಲ ತಿರುವಿ, ಸ್ವಲ್ಪ ಪುಡಿಮಾಡಿಕೊಳ್ಳಿ.
ಬೆಲ್ಲ ದಪ್ಪಗೆ ಒಂದೆಳೆ ಪಾಕ ಬರುವತನಕ ಕುದಿಸಿ, ಅದಕ್ಕೆ ಅಡಿಗೆ ಸೋಡಾ, ಎಳ್ಳು, ಏಲಕ್ಕಿಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಮಿಶ್ರಣವನ್ನು ಉರಿಯಿಂದ ಇಳಿಸಿ, ಸ್ವಲ್ಪ ಬೆಚ್ಚಗಿರುವಾಗಲೇ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ.
ಗಣಪತಿಯ ನೈವೇದ್ಯಕ್ಕೆ ಇಡುವ ಮುಖ್ಯವಾದ ಪದಾರ್ಥಗಳಲ್ಲಿ ಈ ಎಳ್ಳುಂಡೆಯೂ ಒಂದು.
ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು :)


ಕಾಮೆಂಟ್‌ಗಳು