ಚಿಪ್ಸ್ ಮಸಾಲಾ | Masala Powder for Chips

Click here for English version.

ಕಳೆದ ವಾರ ಗೆಣಸಿನ ಚಿಪ್ಸ್ ತಯಾರಿಸಲು ಮಸಾಲಾ ಪೌಡರ್ ಮಾಡಬೇಕಿತ್ತು. ನನಗೆ ಯಾವಾಗಲೂ ಸಾಮಗ್ರಿಗಳನ್ನು ಅಳತೆ ಮಾಡುವ ಅಭ್ಯಾಸವೇ ಇಲ್ಲ! ಆದರೆ ಅಡಿಗೆ ವಿಧಾನಗಳನ್ನು ಇತರರಿಗೆ ತಿಳಿಸಿಕೊಡಬೇಕೆಂದರೆ ಸರಿಯಾದ ಅಳತೆಗಳು ಬೇಕೇ ಬೇಕು. ಅದಕ್ಕೇ ಈ ಬಾರಿ ಅಳತೆಗಳನ್ನು ನೋಟ್ ಮಾಡಿಕೊಂಡೇ ಸಾಂಬಾರ್ ಪುಡಿಯನ್ನು ತಯಾರಿಸಿದೆ. ಇಲ್ಲಿ ನಾನು ಬಳಸಿದ ಸಾಮಗ್ರಿಗಳನ್ನು ಸ್ವಲ್ಪ ಹೆಚ್ಚು - ಕಡಿಮೆ ಬಳಸಿ ನಿಮ್ಮ ಅಭಿರುಚಿಗೆ ತಕ್ಕಂತೆ ಚಿಪ್ಸ್ ಮಸಾಲಾ ತಯಾರಿಸಬಹುದು.    


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಈಸಿ 

ಬೇಕಾಗುವ ಸಾಮಗ್ರಿಗಳು:
  • ಕಡಲೆಬೇಳೆ - 2 ಟೇಬಲ್ ಸ್ಪೂನ್
  • 5 ಲವಂಗ
  • 2 ಚೂರು ಚಕ್ಕೆ
  • 1 ಟೀ ಚಮಚ ಕೊತ್ತಂಬರಿ
  • 1/4 ಟೀ ಚಮಚ ಜೀರಿಗೆ     
  • 1/4 ಟೀ ಚಮಚ ಓಮ (ಅಜವಾನ) 
  • 1 ಟೀ ಚಮಚ ಸ್ಪೂನ್ ಸಾಸಿವೆ
  • 1/4 ಟೀ ಚಮಚ ಮೆಂತ್ಯ
  • ಒಂದು ದೊಡ್ಡ ಚಿಟಿಕೆ ಇಂಗು
  • ಅರಿಶಿನ - 1/4 ಟೀ ಚಮಚ  
  • ಮೆಣಸಿನಪುಡಿ - ಖಾರಕ್ಕೆ ತಕ್ಕಷ್ಟು 
  • ಆಮ್ ಚೂರ್ ಪೌಡರ್ - 1/2ಟೀ ಚಮಚ ಅಥವಾ ರುಚಿಗೆ ತಕ್ಕಷ್ಟು 
  • ಉಪ್ಪು - (ಟಿಪ್ಸ್ ನೋಡಿ)
ಮಾಡುವ ವಿಧಾನ:
  • ಮೆಣಸಿನಪುಡಿ, ಆಮ್ ಚೂರ್ ಪೌಡರ್ ಹೊರತಾಗಿ ಉಳಿದೆಲ್ಲ ಸಾಮಗ್ರಿಗಳನ್ನೂ ಬಾಣಲೆಯಲ್ಲಿ ಹುರಿದುಕೊಂಡು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ.
  • ಇದಕ್ಕೆ ರುಚಿಗೆ ತಕ್ಕಷ್ಟು ಮೆಣಸಿನಪುಡಿ ಮತ್ತು ಆಮ್ ಚೂರ್ ಪೌಡರ್ ಸೇರಿಸಿ ಮಿಕ್ಸ್ ಮಾಡಿ. 
  • ತಯಾರಾದ ಮಸಾಲಾ ಪುಡಿಯನ್ನು ಗಾಳಿಯಾಡದ ಬಾಟಲ್ ನಲ್ಲಿ ಹಾಕಿಟ್ಟು, ಚಿಪ್ಸ್ ತಯಾರಿಸುವಾಗ ಬಳಸಿ.
  • ಇದನ್ನು ಫ್ರೆಶ್ ಆಗಿ ತಯಾರಿಸಿಕೊಂಡು ಬಳಸಿದರೆ ಹೆಚ್ಚು ಚೆನ್ನ.

ಟಿಪ್ಸ್:
  • ನಾನು ಇಲ್ಲಿ ಮಸಾಲೆ ಪುಡಿ ತಯಾರಿಸುವಾಗ ಉಪ್ಪು ಸೇರಿಸಿಲ್ಲ. ಉಪ್ಪನ್ನು ಮಸಾಲೆ ಪುಡಿ ತಯಾರಿಸುವಾಗ ಸೇರಿಸಬಹುದು ಅಥವಾ ಚಿಪ್ಸ್ ಗೆ ಮಸಾಲೆ ಪುಡಿ ಸೇರಿಸುವಾಗ ಸೇರಿಸಿ ಮಿಕ್ಸ್ ಮಾಡಬಹುದು. 
  • ಹೆಚ್ಚಿಗೆ ಉಳಿದ ಮಸಾಲೆ ಪುಡಿಯನ್ನು ಪಲ್ಯ ಇತ್ಯಾದಿ ಅಡಿಗೆಗಳಿಗೆ ಬಳಸಬಹುದು. 

    ಕಾಮೆಂಟ್‌ಗಳು