ಸೌತೆಕಾಯಿ ಇಡ್ಲಿ / Cucumber Idli

Click here for English version.

ನನಗೆ ಹೊಸ ಅಡಿಗೆಗಳನ್ನು ಕಲಿಯುವುದೆಂದರೆ ತುಂಬ ಇಷ್ಟ. ಇದಕ್ಕೆ ನನ್ನ ಅಮ್ಮನ ಸಹಕಾರವೂ ತುಂಬ ಇದೆ. ಅವರು ಪುಸ್ತಕದಲ್ಲಿ ಎಲ್ಲಾದರೂ ಹೊಸ ಬಗೆಯ ಅಡಿಗೆ ಕಂಡರೆ, ಅಥವಾ ನೆಂಟರ ಮನೆಗೆ ಹೋದಾಗ ಏನಾದರೂ ಹೊಸ ಬಗೆಯ ತಿಂಡಿಗಳನ್ನು ಮಾಡಿದ್ದರೆ ಅದರ ವಿಧಾನವನ್ನು ತಿಳಿದುಕೊಂಡು ಬರೆದಿಟ್ಟಿರುತ್ತಾರೆ. ಅಲ್ಲದೆ ಅಡಿಗೆಯ ರುಚಿ ಹೆಚ್ಚಿಸಲು ಹೊಸ ಹೊಸ ಟಿಪ್ಸ್ ಗಳಿದ್ದರೆ ಅದನ್ನೂ ನೆನಪಿಟ್ಟುಕೊಂಡು ನಮಗೆಲ್ಲ ಹೇಳುತ್ತಾರೆ. 
ಅಮ್ಮನ ಕಲೆಕ್ಷನ್ ನಿಂದ ಕಲಿತ ಇಡ್ಲಿ ರೆಸಿಪಿ ಇಲ್ಲಿದೆ. ಇದು ಅಕ್ಕಿ ಹಾಗೂ ಸೌತೆಕಾಯಿ ಬಳಸಿ ಮಾಡುವ ಇಡ್ಲಿ. ಬೆಳಗಿನ ತಿಂಡಿಗೆ ತುಂಬ ಚೆನ್ನಾಗಿರುತ್ತದೆ. ಅಕ್ಕಿ ಹಾಕಿ ಮಾಡಿರುವುದರಿಂದ ಈ ಇಡ್ಲಿ ತಿಂದರೆ ಬೇಗ ಹಸಿವೆಯೂ ಆಗುವುದಿಲ್ಲ. ಈ ಇಡ್ಲಿಗೆ ಹಿಟ್ಟು ಹುದುಗುಬರುವ ಅಗತ್ಯವಿಲ್ಲ. ಹೀಗಾಗಿ ಆಗಿಂದಾಗ್ಗೆ ಹಿಟ್ಟನ್ನು ತಯಾರಿಸಿ ಇಡ್ಲಿ ಮಾಡಬಹುದು!


ತಯಾರಿಸಲು ಬೇಕಾಗುವ ಸಮಯ: 35 ನಿಮಿಷಗಳು 
ಬೇಯಿಸಲು ಬೇಕಾಗುವ ಸಮಯ: 25 - 30 ನಿಮಿಷಗಳು 
ಸರ್ವಿಂಗ್ಸ್ : ಇಬ್ಬರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಅಕ್ಕಿ - 1 1/2 ಕಪ್ 
1 ಮಧ್ಯಮಗಾತ್ರದ ಸೌತೆಕಾಯಿ 
ತೆಂಗಿನತುರಿ - 3/4 ಕಪ್ 
ಹಸಿಮೆಣಸು - 1 (ಖಾರಕ್ಕೆ ತಕ್ಕಂತೆ)
ಶುಂಠಿ - 1/2 ಇಂಚು 
ಹೆಚ್ಚಿದ ಕೊತ್ತಂಬರಿ ಸೊಪ್ಪು - 1/4 ಕಪ್   
ಜೀರಿಗೆ - 1/4 ಚಮಚ  
ಮೆಂತ್ಯ - 1/4 ಚಮಚ
ಓಮ (ಅಜವಾನ) - 1/4 ಚಮಚ
ರುಚಿಗೆ ತಕ್ಕಷ್ಟು ಉಪ್ಪು 


ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು ನೀರನ್ನೆಲ್ಲ ಬಸಿದು ಒಂದು ಕಾಟನ್ ಬಟ್ಟೆಯಮೇಲೆ 10 - 15 ನಿಮಿಷ ಹರವಿ. ನಂತರ ಇದನ್ನು ಮಿಕ್ಸಿಯಲ್ಲಿ ಇಡ್ಲಿ ರವೆಯ ಹದಕ್ಕೆ ಪುಡಿಮಾಡಿಕೊಳ್ಳಿ. ಈ ಅಕ್ಕಿತರಿಯನ್ನು ಹಿಂದಿನ ರಾತ್ರಿಯೇ ಮಾಡಿಟ್ಟುಕೊಂಡರೂ ಆಗುತ್ತದೆ.
ಜೀರಿಗೆ, ಮೆಂತ್ಯ, ಓಮ ಇಷ್ಟನ್ನೂ ಎಣ್ಣೆ ಹಾಕದೆ ಹುರಿದು, ನುಣ್ಣಗೆ ಪುಡಿಮಾಡಿಕೊಳ್ಳಿ. ಮೂರು ಸಾಮಗ್ರಿಗಳನ್ನೂ ತಲಾ ಕಾಲು ಚಮಚ ಹಾಕಿ ಪುಡಿ ತಯಾರಿಸಿಕೊಂಡರೆ ಅದನ್ನು 2 ಸಲ ಇಡ್ಲಿ ಮಾಡಲು ಬಳಸಬಹುದು.   
ಸೌತೆಕಾಯಿಯನ್ನು ಸಿಪ್ಪೆ ತೆಗೆದು ತುರಿದುಕೊಳ್ಳಿ. ಹಸಿಮೆಣಸನ್ನು ಹೆಚ್ಚಿಕೊಳ್ಳಿ. ಶುಂಠಿ ಜಜ್ಜಿಕೊಳ್ಳಿ. 
ತುರಿದ ಸೌತೆಕಾಯಿಗೆ ಅಕ್ಕಿ ತರಿ, ತೆಂಗಿನತುರಿ, ಹೆಚ್ಚಿದ ಹಸಿಮೆಣಸು, ಜಜ್ಜಿದ ಶುಂಠಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮೆಂತ್ಯ, ಜೀರಿಗೆ, ಓಮ ಪುಡಿಯನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇಡ್ಲಿ ಪ್ಲೇಟ್ ನ್ನು ನೀರಿನಲ್ಲಿ ತೊಳೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಸವರಿಕೊಂಡು ಕಲಸಿದ ಇಡ್ಲಿ ಹಿಟ್ಟನ್ನು ಹಾಕಿ 25 - 30 ನಿಮಿಷ ಬೇಯಿಸಿ. ನನ್ನ ಇಡ್ಲಿ ಕಡಾಯಿಯಲ್ಲಿ 25 ನಿಮಿಷಕ್ಕೆ ಇಡ್ಲಿ ಚೆನ್ನಾಗಿ ಬೆಂದಿರುತ್ತದೆ.
ಬಿಸಿ ಬಿಸಿ ಇಡ್ಲಿಯನ್ನು ತೆಂಗಿನತುರಿ ಚಟ್ನಿಯೊಡನೆ ತಿನ್ನಿ.
  
  

ಕಾಮೆಂಟ್‌ಗಳು