ಸಾಂಬಾರ್ ಅಪ್ಪೆಹುಳಿ / Sambar Appehuli

Click here for English version.

ಅಂತೂ ಇಂತೂ ಇಂದು ಪೋಸ್ಟಿಂಗ್ ಮಾಡಲು ಟೈಮ್ ಸಿಕ್ಕಿತು! ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಸ್ ಬಂದು ಇಲ್ಲಿ ಸೆಟ್ ಆಗುತ್ತಿರುವುದರಿಂದ ಅದೂ ಇದೂ ಕೆಲಸಗಳು..ಜೊತೆಗೆ ಊರಿನ ಪ್ರವಾಸದಿಂದ ನಮ್ಮ ಬ್ಯುಸಿ ಲೈಫ್ ಗೆ ಒಂದಿಷ್ಟು ವಿರಾಮ. ಇನ್ನುಮೇಲೆ ಶುರುವಾಗಬೇಕು ನನ್ನ ಅಡಿಗೆ ದಿನಚರಿ!
ಹವ್ಯಕರ ಅಡಿಗೆ ಎಂದ ತಕ್ಷಣ ನೆನಪಾಗುವುದು ತಂಬುಳಿ ಮತ್ತು ಅಪ್ಪೆಹುಳಿ. ಈ ತಂಬುಳಿ ಮತ್ತು ಅಪ್ಪೆಹುಳಿಯಲ್ಲೂ ಅನೇಕ ವಿಧಗಳಿವೆ. ಅಪ್ಪೆಹುಳಿಯನ್ನು ಮಾವಿನಕಾಯಿ, ನಿಂಬೆಕಾಯಿ, ಕಂಚಿಕಾಯಿ ಇತ್ಯಾದಿ ಹುಳಿ ಅಂಶ ಹೆಚ್ಚಾಗಿರುವ ಹಣ್ಣು / ತರಕಾರಿಗಳಿಂದ ತಯಾರಿಸುತ್ತಾರೆ. ಕಂಚಿಕಾಯಿ ಎಂದರೆ ನಿಂಬೆ ಹಣ್ಣಿನ ವರ್ಗದ, ಆದರೆ ನಿಂಬೆ ಹಣ್ಣಿಗಿಂತ ದೊಡ್ಡದಾದ ಒಂದು ಹುಳಿ ಹಣ್ಣು. ಮಲೆನಾಡ ಕಡೆ ಸಾಮಾನ್ಯವಾಗಿ ಎಲ್ಲರ ಮನೆಯ ಹಿತ್ತಿಲಲ್ಲೂ ಒಂದು ಕಂಚಿಗಿಡ ಇದ್ದೇ ಇರುತ್ತದೆ. ಊರಿಂದ ತಂದ ಕಂಚಿಕಾಯಿ ತುಂಬಾ ಇತ್ತು ಮನೆಯಲ್ಲಿ. ಅದನ್ನು ಬಳಸಿ ತಯಾರಿಸಿದ ಅಪ್ಪೆಹುಳಿ ಇದು. ಇದನ್ನು  ಚೆನ್ನಾಗಿ ಕುದಿಸಿಟ್ಟು ನಾಲ್ಕೈದು ದಿನಗಳವರೆಗೂ ಬಳಸಬಹುದು.



ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಸರ್ವಿಂಗ್ಸ್: 5 - 6 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಕಂಚಿಕಾಯಿ - 2 (ಅಥವಾ ಕಂಚಿಕಾಯಿಯ ರಸ - 1 ಕಪ್)
ಲವಂಗ - 3 
ಕೊತ್ತಂಬರಿ - 1 1/2 ಚಮಚ
ಸಾಸಿವೆ - 1/2 ಚಮಚ
ಒಣಮೆಣಸು - 3 (ಖಾರಕ್ಕೆ ತಕ್ಕಂತೆ)
ತೆಂಗಿನತುರಿ - 3 ರಿಂದ 4 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲ - 1 ನಿಂಬೆಗಾತ್ರದಷ್ಟು ಅಥವಾ ಸಿಹಿಯಾಗುವಷ್ಟು
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಇಂಗು, ಕರಿಬೇವು  

ಮಾಡುವ ವಿಧಾನ:
ಕಂಚಿಕಾಯಿಯ ಸಿಪ್ಪೆ ತೆಗೆದು, ಎರಡು ಭಾಗ ಮಾಡಿಕೊಳ್ಳಿ.
ಒಂದು ಬೌಲ್ ನಲ್ಲಿ ಒಂದು ಚಮಚದಷ್ಟು ಉಪ್ಪು ಹಾಕಿಕೊಂಡು, ಅದಕ್ಕೆ ಕಂಚಿಕಾಯಿಯ ರಸವನ್ನು ಹಿಂಡಿ. ಉಪ್ಪನ್ನು ಹಾಕಿಕೊಳ್ಳುವುದರಿಂದ ಕಂಚಿ ರಸ ಕಹಿಯಾಗುವುದಿಲ್ಲ.
ಬಾಣಲೆಯಲ್ಲಿ ಒಂದು ಚಮಚದಷ್ಟು ಎಣ್ಣೆ ಕಾಯಿಸಿ ಲವಂಗ, ಒಣಮೆಣಸು, ಸಾಸಿವೆ, ಕೊತ್ತಂಬರಿ ಹಾಕಿ ಪರಿಮಳ ಬರುವಂತೆ ಹುರಿದುಕೊಳ್ಳಿ.    
ಹುರಿದ ಸಾಮಗ್ರಿಗಳನ್ನು ಕಾಯಿತುರಿ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ರುಬ್ಬುವಾಗ ನೀರಿನ ಬದಲು ಕಂಚಿರಸವನ್ನೇ ಬಳಸಿ.
ರುಬ್ಬಿಕೊಂಡ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಸೇರಿಸಿ ಐದು ನಿಮಿಷ ಕುದಿಸಿ. ಅಪ್ಪೆಹುಳಿಯನ್ನು ತೆಳ್ಳಗೆ ಮಾಡಲು ಕುದಿಸುವ ಮುನ್ನ ಒಂದೂವರೆಯಿಂದ ಎರಡು ಕಪ್ ನಷ್ಟು ನೀರನ್ನು ಸೇರಿಸಿ.
ಅಪ್ಪೆಹುಳಿಯನ್ನು ಕುದಿಸಿ ಇಳಿಸಿದ ನಂತರ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಕೊಡಿ.
ಈ ಅಪ್ಪೆಹುಳಿ ಅನ್ನದೊಡನೆ ಹಾಕಿಕೊಳ್ಳಲು ಅಥವಾ ಹಾಗೇ ನೆಂಜಿಕೊಳ್ಳಲು ಚೆನ್ನಾಗಿರುತ್ತದೆ. ಚೆನ್ನಾಗಿ ಕುದಿಸಿ ನಾಲ್ಕೈದು ದಿನ ಇಟ್ಟುಕೊಂಡು ಬಳಸಬಹುದು.


ಟಿಪ್ಸ್:
  • ನಿಂಬೆ ಹಣ್ಣಿನಿಂದಲೂ ಈ ಅಪ್ಪೆಹುಳಿಯನ್ನು ತಯಾರಿಸಬಹುದು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)