ಹಾಗಲಕಾಯಿ ಪಲ್ಯ / Bitter Gourd Palya

Click here for English version.

ಕಳೆದ ವಾರ ತರಕಾರಿ ಕೊಳ್ಳಲು ಹೋದಾಗ ಅಂಗಡಿಯಲ್ಲಿ ಆಗ ತಾನೇ ತಂದ ಹಾಗಲಕಾಯಿಗಳನ್ನು ಜೋಡಿಸಿಡುತ್ತಿದ್ದರು. ನಾನು ತಕ್ಷಣ ಹೋಗಿ ಹಾಗಲಕಾಯಿಗಳನ್ನು ಎತ್ತಿ ಬಾಸ್ಕೆಟ್ ಗೆ ಹಾಕಿಕೊಂಡೆ. ಹಾಗಲಕಾಯಿ ಪಲ್ಯ ಮಾಡದೆ ತುಂಬಾ ದಿನಗಳಾಗಿಬಿಟ್ಟಿದ್ದವು. ಆಸ್ಟ್ರೇಲಿಯಾ ಕ್ಕೆ ಹೋದ ಹೊಸದರಲ್ಲಿ ಒಮ್ಮೆ ವೀಕೆಂಡ್ ಮಾರ್ಕೆಟ್ ನಲ್ಲಿ ಹಾಗಲಕಾಯಿ ತಂದು ಪಲ್ಯ ಮಾಡಿದ್ದೆ ನಾನು. ಅಲ್ಲಿ ಸಿಗುವ ತರಕಾರಿಗಳಲ್ಲಿ ನೀರಿನಂಶ ಜಾಸ್ತಿ! ಎರಡು - ಮೂರು ಹಾಗಲಕಾಯಿ ಹೆಚ್ಚಿ ಮಾಡಿದ ಪಲ್ಯ ಪೂರ್ತಿ ಹುರಿದು ನೀರಿನಂಶವೆಲ್ಲ ಇಂಗಿದ ನಂತರ ಉಳಿದದ್ದು ಕೆಲವೇ ಚಮಚಗಳಷ್ಟು! :D ನಂತರ ಅಲ್ಲಿದ್ದಷ್ಟು ದಿನ ಎಂದೂ ಹಾಗಲಕಾಯಿ ಪಲ್ಯ ಮಾಡುವ ಗೋಜಿಗೇ ಹೋಗಲಿಲ್ಲ ನಾನು!!
ಈ ಪಲ್ಯದ ವಿಧಾನವನ್ನು ನಾನು ಕಲಿತದ್ದು ಬೆಂಗಳೂರಿನಲ್ಲಿರುವ ನಮ್ಮ ಪರಿಚಯದವರೊಬ್ಬರಿಂದ. ನಮ್ಮ ಮನೆಯಲ್ಲಿ ಈ ಪಲ್ಯವನ್ನು ಸ್ವಲ್ಪ ಬೇರೆ ವಿಧಾನದಲ್ಲಿ ತಯಾರಿಸುತ್ತಾರೆ. ಹಾಗಲಕಾಯಿ ಪಲ್ಯವನ್ನು ಚೆನ್ನಾಗಿ ಹುರಿದು ಮಾಡುವುದರಿಂದ 10 - 12 ದಿನಗಳವರೆಗೆ ಕೆಡದೆ ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 1 1/2 ಘಂಟೆ
ಸರ್ವಿಂಗ್ಸ್: 8 - 9
  
ಬೇಕಾಗುವ ಸಾಮಗ್ರಿಗಳು:
ಹಾಗಲಕಾಯಿ - 2 
ಅರಿಶಿನ - 1/2 ಚಮಚ 
ರುಚಿಗೆ ತಕ್ಕಷ್ಟು ಉಪ್ಪು
ಆಮ್ ಚೂರ್ ಪೌಡರ್ ಅಥವಾ ಹುಳಿಪುಡಿ - ರುಚಿಗೆ ತಕ್ಕಷ್ಟು
ಬೆಲ್ಲ 2 - 3 ಚಮಚ ಅಥವಾ ರುಚಿಗೆ ತಕ್ಕಷ್ಟು

- ಒಗ್ಗರಣೆಗೆ: ಎಣ್ಣೆ 2 - 3 ಚಮಚ, ಒಣಮೆಣಸು - 1, ಉದ್ದಿನಬೇಳೆ - 1 ಚಮಚ, ಸಾಸಿವೆ - 1/4 ಚಮಚ, ಹಸಿಮೆಣಸು - 2, ಅರಿಶಿನ - ಚಿಟಿಕೆ, ಕರಿಬೇವು (ಬೇಕಿದ್ದರೆ) - ಐದಾರು ಎಲೆಗಳು  
- ಮಸಾಲೆ ಪುಡಿಗೆ: ಎಣ್ಣೆ - 1 / 2 ಚಮಚ, ಒಣಮೆಣಸು - 3, ಕಡಲೆಬೇಳೆ - 2 1/2 ಟೇಬಲ್ ಚಮಚ, ಉದ್ದಿನಬೇಳೆ - 1 1/2 ಟೇಬಲ್ ಚಮಚ, ಸೋಂಪು - 1 ಚಮಚ

ಮಾಡುವ ವಿಧಾನ:
ಹಾಗಲಕಾಯಿಯ ಬೀಜ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಇದಕ್ಕೆ 3 - 4 ಚಮಚ ಉಪ್ಪು, ಅರ್ಧ ಚಮಚ ಅರಿಶಿನ ಸೇರಿಸಿ ಕಲಸಿ ಅರ್ಧ ಘಂಟೆ ಇಡಿ.
ಹೆಚ್ಚಿದ ಹಾಗಲಕಾಯಿಯನ್ನು ನೀರಿನಂಶ ಹೋಗುವಂತೆ ಗಟ್ಟಿಯಾಗಿ ಹಿಂಡಿ, ಒಂದು ಬೌಲ್ ನಲ್ಲಿ ಹಾಕಿಟ್ಟುಕೊಳ್ಳಿ.
ಒಂದು ಅಗಲವಾದ ಬಾಣಲೆಯಲ್ಲಿ ಒಗ್ಗರಣೆಗಿಟ್ಟು 2 - 3 ಚಮಚ ಎಣ್ಣೆ ಬಿಸಿಮಾಡಿಕೊಳ್ಳಿ. ನಂತರ ಒಣಮೆಣಸಿನ ಚೂರುಗಳು, ಉದ್ದಿನಬೇಳೆ, ಸಾಸಿವೆ, ಅರಿಶಿನ, ಹಸಿಮೆಣಸು, ಕರಿಬೇವು ಹಾಕಿ ಚಟಪಟ ಎಂದಮೇಲೆ ಹಿಂಡಿದ ಹಾಗಲಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಆಮ್ ಚೂರ್ ಪೌಡರ್, ಬೆಲ್ಲ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತ, ಸಣ್ಣ ಉರಿಯಲ್ಲಿ ಮುಕ್ಕಾಲು ಘಂಟೆ ಚೆನ್ನಾಗಿ ಹುರಿಯಿರಿ.
ಪಲ್ಯ ಹುರಿಯುವಷ್ಟರಲ್ಲಿ ಮಸಾಲೆ ಪುಡಿ ತಯಾರಿಸಿಕೊಳ್ಳಬಹುದು: ಮಸಾಲೆ ಪುಡಿಗೆ ಮೇಲೆ ಹೇಳಿದ ಸಾಮಗ್ರಿಗಳನ್ನು ಎಣ್ಣೆಯಲ್ಲಿ ಹುರಿದುಕೊಂಡು ಮಿಕ್ಸಿಯಲ್ಲಿ ಸ್ವಲ್ಪ ತರಿಯಾಗಿ ಪುಡಿಮಾಡಿಕೊಳ್ಳಿ.
ಪಲ್ಯ ಚೆನ್ನಾಗಿ ಹುರಿದ ನಂತರ ಮಸಾಲೆ ಪುಡಿ ಸೇರಿಸಿ ಚೆನ್ನಾಗಿ ಕೈಯಾಡಿಸಿ. 4 - 5 ನಿಮಿಷ ಹುರಿದು ಉರಿಯಿಂದ ಇಳಿಸಿದರೆ ಹಾಗಲಕಾಯಿ ಪಲ್ಯ ಅನ್ನದೊಡನೆ ಸವಿಯಲು ಸಿದ್ಧ!


ಟಿಪ್ಸ್:
  • ಹಾಗಲಕಾಯಿ ಹೆಚ್ಚಿಕೊಂಡು ಉಪ್ಪು, ಅರಿಶಿನ ಹಾಕಿಟ್ಟು ನಂತರ ನೀರಿನಂಶವನ್ನು ಹಿಂಡಿ ತೆಗೆದರೆ ಹಾಗಲಕಾಯಿಯ ಕಹಿ ಅಂಶವೆಲ್ಲ ಹೋಗುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)