ಒಗ್ಗರಣೆ ಅವಲಕ್ಕಿ / Poha Seasoning

Click here for English version.
 
ಈ ಅವಲಕ್ಕಿ ಮಾಡಿದಾಗಲೆಲ್ಲ ನನಗೆ ಚಿಕ್ಕಂದಿನ ದಿನಗಳ ನೆನಪಾಗುತ್ತದೆ. ನಾವೆಲ್ಲ ಸ್ಕೂಲಿಗೆ ಹೋಗುವಾಗಿನ ದಿನಗಳಲ್ಲಿ ಸಂಜೆ ಮನೆಗೆ ಬಂದ ತಕ್ಷಣ ಏನಾದರೂ ತಿಂಡಿ ಮಾಡಿಕೊಡಬೇಕಿತ್ತು. ಮನೆಯಲ್ಲಿ ನಾವು 3 - 4 ಮಕ್ಕಳು; ಎಲ್ಲರಿಗೂ ಒಗ್ಗರಣೆ ಅವಲಕ್ಕಿ ಎಂದರೆ ಇಷ್ಟ :) ಹೀಗಾಗಿ ಹೆಚ್ಚಿನ ದಿನಗಳಲ್ಲಿ ಈ ಅವಲಕ್ಕಿಯೇ ನಮ್ಮ ಸ್ನ್ಯಾಕ್ಸ್! 
ನಾನು ಆಫೀಸ್ ಗೆ ಹೋಗುವಾಗಲೂ ಮದ್ಯಾಹ್ನದ ಲಂಚ್ ಬಾಕ್ಸ್ ಗೆ ಒಮ್ಮೊಮ್ಮೆ ಒಗ್ಗರಣೆ ಅವಲಕ್ಕಿಯನ್ನು ಒಯ್ಯುತ್ತಿದ್ದೆ. ಅಲ್ಲಿ ಎಲ್ಲರಿಗೂ ಈ ಅವಲಕ್ಕಿ ಇಷ್ಟವಾಗಿಬಿಟ್ಟಿತ್ತು. ಅವಲಕ್ಕಿ ಒಯ್ದ ದಿನ ನನಗೆ ಉಳಿದವರ ಬಾಕ್ಸ್ ನ ತಿಂಡಿಯೇ ಗತಿ! ಹಾಗಂತ ಇದೇನೂ ಊಟದಂತೆ ಹೊಟ್ಟೆ ತುಂಬುವ ತಿಂಡಿಯಲ್ಲ; ನನಗೆ ಲಂಚ್ ಬಾಕ್ಸ್ ಗೆ ಏನಾದರೂ ಮಾಡಲು ಬೇಜಾರಾದಾಗ ಅವಲಕ್ಕಿ ಮಾಡಿಕೊಂಡು ಹೋಗುತ್ತಿದ್ದೆ ಅಷ್ಟೆ! ಸಂಜೆಯ ಸ್ನ್ಯಾಕ್ಸ್ ಟೈಮ್ ಗೆ ಟೀ ಅಥವಾ ಕಾಫಿಯೊಡನೆ ಈ ಅವಲಕ್ಕಿ ಸೊಗಸಾಗಿರುತ್ತದೆ. ಜೊತೆಗೆ ಏನಾದರೂ ಖಾರದ ಕುರುಕಲು ತಿಂಡಿ ಇದ್ದರೆ ಇನ್ನೂ ಚೆನ್ನ :)


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು
ಸರ್ವಿಂಗ್ಸ್: ಇಬ್ಬರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಪೇಪರ್ ಅವಲಕ್ಕಿ - 2 1/2 ಬೌಲ್ ನಷ್ಟು 
ನೆಲಗಡಲೆ - 3 ಚಮಚ 
ಉದ್ದಿನಬೇಳೆ - 1/2 ಚಮಚ  
ಒಣಮೆಣಸು - 2 ಚೂರು 
ಸಾಸಿವೆ - 1/2 ಚಮಚ    
ಕೊತ್ತಂಬರಿ - 1 1/4 ಚಮಚ  
ಅರಿಶಿನ - ಒಂದು ದೊಡ್ಡ ಚಿಟಿಕೆ 
ಹಸಿಮೆಣಸು - 1 (ಖಾರಕ್ಕೆ ತಕ್ಕಂತೆ)
ಕರಿಬೇವಿನ ಎಲೆಗಳು 8 - 10 
ತುಚಿಗೆ ತಕ್ಕಷ್ಟು ಉಪ್ಪು 
ಸಕ್ಕರೆ - 2 ಚಮಚ (ರುಚಿಗೆ ತಕ್ಕಷ್ಟು)
ಎಣ್ಣೆ  - 4 ಚಮಚ (ಕೊಬ್ಬರಿ ಎಣ್ಣೆ ಬಳಸಿದರೆ ರುಚಿ ಹೆಚ್ಚು)
ತೆಂಗಿನ ತುರಿ - ಅರ್ಧ ಅಥವಾ ಮುಕ್ಕಾಲು ಕಪ್  
ಮಧ್ಯಮಗಾತ್ರದ ಈರುಳ್ಳಿ - 1 
ನೀರು - ಅರ್ಧ ಕಪ್

ಮಾಡುವ ವಿಧಾನ:
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸನ್ನೂ ಹೆಚ್ಚಿಕೊಳ್ಳಿ.   
ಒಂದು ಪಾತ್ರೆಯಲ್ಲಿ ಅವಲಕ್ಕಿ ಹಾಕಿಕೊಂಡು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಹಾಕಿಡಿ.
ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ನೆಲಗಡಲೆ, ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಕೊತ್ತಂಬರಿ, ಅರಿಶಿನ, ಹಸಿಮೆಣಸು, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ಈ ಒಗ್ಗರಣೆಯನ್ನು ಅವಲಕ್ಕಿಗೆ ಸೇರಿಸಿ. ಒಗ್ಗರಣೆ ಸೌಟಿಗೆ ಕಾಲು ಲೋಟದಷ್ಟು ನೀರು ಹಾಕಿ, ಅದನ್ನು ಅವಲಕ್ಕಿಗೆ ಮೇಲಿನಿಂದ ಚಿಮುಕಿಸಿ.
ತೆಂಗಿನತುರಿ, ಈರುಳ್ಳಿಯನ್ನು ಸೇರಿಸಿ ಅವಲಕ್ಕಿಯನ್ನು ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಿದ್ದರೆ ಇನ್ನೂ ಸ್ವಲ್ಪ ನೀರು ಚಿಮುಕಿಸಿಕೊಂಡು ಕಲಸಿ. ಅವಲಕ್ಕಿಯನ್ನು ತುಂಬಾ ಮುದ್ದೆ ಮಾಡಬೇಡಿ.
ಒಮ್ಮೆ ರುಚಿ ನೋಡಿಕೊಂಡು ಉಪ್ಪು, ಸಕ್ಕರೆ ಏನಾದರೂ ಬೇಕಿದ್ದರೆ ಸೇರಿಸಿ.
ತಯಾರಾದ ಅವಲಕ್ಕಿಯನ್ನು ಏನಾದರೂ ಕುರುಕಲು ತಿಂಡಿ ಮತ್ತು ಮೊಸರಿನೊಡನೆ ಸರ್ವ್ ಮಾಡಿ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)