ಬಾಳೆಹಣ್ಣಿನ ಮಫಿನ್ಸ್ (ಕಪ್ ಕೇಕ್ಸ್) / Banana Muffins (Cupcakes)

Click here for English version.
   
ಕಪ್ ಕೇಕ್ ತಯಾರಿಸಬೇಕೆಂದು ಮೌಲ್ಡ್ ಗಳನ್ನು ತಂದಿಟ್ಟುಕೊಂಡು ತುಂಬಾ ದಿನಗಳಾಗಿತ್ತು. ಹೊಸ ಓವನ್ ನಲ್ಲಿ ಏನಾದರೂ ಟ್ರೈ ಮಾಡೋಣವೆಂದು ಯೋಚಿಸಿದಾಗ ಈ ಮಫಿನ್ ಮೌಲ್ಡ್ ಗಳ ನೆನಪಾಯಿತು. ನಂತರ ಬಾಳೆಹಣ್ಣು ಬಳಸಿ ಕಪ್ ಕೇಕ್ ಮಾಡಿದೆ. ಅಂತೂ ಕಪ್ ಕೇಕ್ ತಯಾರಿಸುವ ನನ್ನ ಮೊದಲ ಪ್ರಯತ್ನ ಸಫಲವಾಯಿತು! <:-P
ಬಾಳೆಹಣ್ಣಿನ ಪರಿಮಳದೊಂದಿಗೆ ಮೆತ್ತಗಿನ ಕಪ್ ಕೇಕ್ ಗಳು ತಿನ್ನಲು ಬಹಳ ಚೆನ್ನಾಗಿದ್ದವು. ನಾವು ಸಂಜೆಯ ಟೀಯೊಡನೆ ಈ ಕಪ್ ಕೇಕ್ ಗಳನ್ನು ಸವಿದೆವು. ಬಾಳೆಹಣ್ಣು ಮತ್ತು ಮೈದಾ ಹಿಟ್ಟು ಬಳಸುವುದರಿಂದ ಇವನ್ನು ತಿಂದರೆ ಚೆನ್ನಾಗಿ ಹೊಟ್ಟೆಯೂ ತುಂಬುತ್ತದೆ. ಹೀಗಾಗಿ ಬೆಳದಿನ ತಿಂಡಿ ಅಥವಾ ಮಕ್ಕಳ ಸ್ನ್ಯಾಕ್ಸ್ ಡಬ್ಬಕ್ಕೆ ಈ ಮಫಿನ್ ಗಳು ಚೆನ್ನಾಗಿರುತ್ತವೆ. ಕಡಿಮೆ ಸಾಮಗ್ರಿಗಳನ್ನು ಬಳಸಿ ಸುಲಭದಲ್ಲಿ ತಯಾರಿಸಬಹುದಾದ ಈ ಮಫಿನ್ ಗಳನ್ನು ನೀವೂ ಮಾಡಿನೋಡಿ!


ಹಿಟ್ಟನ್ನು ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು 
ಬೇಕಿಂಗ್ ಟೈಮ್: 23 - 25 ನಿಮಿಷಗಳು 
ಈ ಅಳತೆಯಿಂದ 5 ದೊಡ್ಡ ಕಪ್ ಕೇಕ್ ಗಳನ್ನು ತಯಾರಿಸಬಹುದು
 
ಬೇಕಾಗುವ ಸಾಮಗ್ರಿಗಳು:
ಬಾಳೆಹಣ್ಣು (ದೊಡ್ಡದು) - 2 
ಮೈದಾಹಿಟ್ಟು - 1 1/2 ಕಪ್  
ಸಕ್ಕರೆ - 3/4 ಕಪ್ 
ಅಡಿಗೆ ಎಣ್ಣೆ - 1/4 ಕಪ್  
ಅಡಿಗೆ ಸೋಡಾ - 3/4 ಚಮಚ  
ಬೇಕಿಂಗ್ ಪೌಡರ್ - 1/2 ಚಮಚ  
ಚಿಟಿಕೆ ಉಪ್ಪು 
ವೆನಿಲ್ಲಾ ಎಸೆನ್ಸ್ - 1 ಚಮಚ 
ಅಲಂಕಾರಕ್ಕೆ ಗೋಡಂಬಿ ಚೂರುಗಳು  


ಮಾಡುವ ವಿಧಾನ:
ಮೈದಾಹಿಟ್ಟು, ಉಪ್ಪು, ಬೇಕಿಂಗ್ ಪೌಡರ್ ಮತ್ತು ಅಡಿಗೆ ಸೋಡಾ ಇಷ್ಟನ್ನೂ ಒಟ್ಟಿಗೆ ಸೇರಿಸಿ ಜರಡಿಯಾಡಿಕೊಳ್ಳಿ.
ಸಕ್ಕರೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ  
ಓವನ್ ನ್ನು 190 °C / 380 °F ಗೆ ಪ್ರೀ ಹೀಟ್ ಮಾಡಿಕೊಳ್ಳಿ.
ಬಾಳೆಹಣ್ಣನ್ನು ಮಧ್ಯಮಗಾತ್ರದ ಚೂರುಗಳಾಗಿ ಹೆಚ್ಚಿಕೊಂಡು ಮಿಕ್ಸಿಯಲ್ಲಿ ನೀರು ಸೇರಿಸದೆ ರುಬ್ಬಿ, ನುಣ್ಣಗಿನ ಪೇಸ್ಟ್ ತಯಾರಿಸಿಕೊಳ್ಳಿ.
ಬಾಳೆಹಣ್ಣಿನ ಪೇಸ್ಟ್ ನ್ನು ಒಂದು ಮಿಕ್ಸಿಂಗ್ ಬೌಲ್ ಗೆ ಹಾಕಿಕೊಂಡು ಅದಕ್ಕೆ ಸಕ್ಕರೆಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಬೇಕಿಂಗ್ ಪೌಡರ್ ಮತ್ತು ಅಡಿಗೆ ಸೋಡಾ ಸೇರಿಸಿ ನಿಧಾನವಾಗಿ ಕಲಕಿ, 2 ನಿಮಿಷ ಬಿಡಿ. ಅಷ್ಟರಲ್ಲಿ ಈ ಮಿಶ್ರಣ ನೊರೆಯಂತಾಗಿ ಉಬ್ಬಿಬರುತ್ತದೆ.
ಇದಕ್ಕೆ ಅಡಿಗೆ ಎಣ್ಣೆ ಮತ್ತು ವೆನಿಲ್ಲಾ ಎಸ್ಸೆನ್ಸ್ ಸೇರಿಸಿ ಕಲಕಿಕೊಂಡು, ಜರಡಿಯಾಡಿದ ಮೈದಾಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ, ಗಂಟಿಲ್ಲದಂತೆ ಮಿಕ್ಸ್ ಮಾಡಿ. ಮಿಶ್ರಣವನ್ನು ತುಂಬಾ ಕಲಕಬೇಡಿ ಮತ್ತು ನಿಧಾನವಾಗಿ ಮಿಕ್ಸ್ ಮಾಡಿ.
ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪವಿರಲಿ. ತುಂಬಾ ದಪ್ಪವೆನಿಸಿದರೆ ಸ್ವಲ್ಪ ಹಾಲು ಸೇರಿಸಿ ಕಲಸಿ.
ಮಫಿನ್ ಮೌಲ್ಡ್ ಗಳ ಒಳಗೆ ಕಾಗದದ ಕಪ್ ಗಳನ್ನು ಜೋಡಿಸಿಕೊಳ್ಳಿ. ತಯಾರಿಸಿದ ಹಿಟ್ಟನ್ನು ಮಫಿನ್ ಕಪ್ ನ ಒಳಗೆ ಮುಕ್ಕಾಲು ಭಾಗದ ವರೆಗೆ ಹಾಕಿ. ಮಫಿನ್ ಗಳು ಉಬ್ಬಿ ಬರುವುದರಿಂದ ಮುಕ್ಕಾಲು ಭಾಗದ ತನಕ ಹಿಟ್ಟನ್ನು ಹಾಕಿದರೆ ಸಾಕು.
ಅಲಂಕಾರಕ್ಕೆ ಮೇಲಿನಿಂದ ಗೋಡಂಬಿ ಚೂರುಗಳನ್ನು ಉದುರಿಸಿ.
ಈ ಮಫಿನ್ ಗಳನ್ನು ಪ್ರೀ ಹೀಟ್ ಮಾಡಿದ ಓವನ್ ನಲ್ಲಿಟ್ಟು 20 - 25 ನಿಮಿಷ ಬೇಯಿಸಿ. ನಾನು ತಯಾರಿಸಿದ ಮಫಿನ್ ಗಳು ಸರಿಯಾಗಿ 23 ನಿಮಿಷಕ್ಕೆ ಚೆನ್ನಾಗಿ ಬೆಂದಿದ್ದವು.
ಮಫಿನ್ ಗಳು ಬೆಂದಿವೆಯೇ ಎಂದು ನೋಡಲು ಒಂದು ಚಾಕು ಅಥವಾ ಕಡ್ಡಿಯನ್ನು ಮಫಿನ್ ನ ಒಳತನಕ ಚುಚ್ಚಿನೋಡಿ. ಹಿಟ್ಟು ಕಡ್ಡಿಗೆ ಅಂಟಿಕೊಂಡಿಲ್ಲವಾದರೆ ಮಫಿನ್ ಗಳು ಬೆಂದಿವೆ ಎಂದರ್ಥ.      
ತಯಾರಾದ ಮಫಿನ್ ಗಳನ್ನು ಟೀ ಅಥವಾ ಕಾಫಿಯೊಡನೆ ಸವಿಯಿರಿ. ಬೆಳಗ್ಗಿನ ತಿಂಡಿ ಅಥವಾ ಮಕ್ಕಳ ಸ್ನ್ಯಾಕ್ಸ್ ಗೂ ಈ ಮಫಿನ್ ಗಳು ಚೆನ್ನಾಗಿರುತ್ತವೆ :)


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)