ಕಡಗ್ ಪುಳಿ / Kadag Puli

Click here for English version.

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು :) ಈ ಬಾರಿ ನಮ್ಮ ಹೊಸ ವರ್ಷದ ಆಚರಣೆ ಊರಿನಲ್ಲಿ. ಬೆಂಗಳೂರಿನ ಬ್ಯುಸಿ ಲೈಫ್ ಗೆ ವಿರಾಮ ಹೇಳಿ ಒಂದು ವಾರ ಊರು ಕಡೆ ಸುತ್ತಾಡಿ ಬಂದೆವು. ಹೊರಡುವಾಗ ಸುಮಾರು ಚಳಿ ಇದ್ದಿದ್ದರಿಂದ ಸ್ವೆಟರ್, ಶಾಲು ಇತ್ಯಾದಿಗಳನ್ನು ಜೊತೆಗೆ ಒಯ್ದಿದ್ದೆವು. ಆದರೆ ಅಲ್ಲಿ ನಾವು ಹೋದ ದಿನದಿಂದ ಬರೀ ಸೆಖೆ! ಅಲ್ಲಿಂದ ಬರುವಾಗ ಊರಿನ ತಿಂಡಿ ತಿನಿಸುಗಳ ಜೊತೆ ಇಲ್ಲಿಂದ ಒಯ್ದ ಚಳಿಗಾಲದ ಲಗೇಜ್ ಎಲ್ಲವನ್ನೂ ಹೊತ್ತುಕೊಂಡು ಭಾರದ ಬ್ಯಾಗ್ ಗಳೊಡನೆ ಮರಳಿದೆವು..ಊರಿಗೆ ಹೋಗಿ ಬಂದೆವೆಂದರೆ ಒಂದು ವಾರದತನಕ ಅಲ್ಲಿಯದೇ ನೆನಪು. ಮರಳಿ ಹೋಗಿಬಿಡಲೇ ಎನ್ನಿಸಿಬಿಡುತ್ತದೆ :) ಬಂದ ತಕ್ಷಣ ಆಫೀಸಿಗೆ ಹೋಗಬೇಕೆಂದರೆ ಇನ್ನೂ ಸಂಕಟ! ಆದರೆ ನನಗೀಗ ಆಫೀಸಿಗೆ ಹೋಗುವ ತಲೆಬಿಸಿ ಇಲ್ಲವಾದ್ದರಿಂದ ಕೊಂಚ ರಿಲೀಫ್ :)
ಕಡಗ್ ಪುಳಿ ಎಂದರೆ ಸಾಂಬಾರ್ ನ ಒಂದು ಬಗೆ. ಈ ಸಾರಿಗೆ ಬೇಳೆ ಹಾಕಬೇಕಿಲ್ಲ; ಹೀಗಾಗಿ ತಯಾರಿಸಲು ಬೇಕಾಗುವ ಸಮಯವೂ ಬಹಳ ಕಡಿಮೆ. ಸೌತೆಕಾಯಿ ಹಾಕಿ ಮಾಡಿದರೆ ಸೌತೆಕಾಯಿ ಮತ್ತು ಮಸಾಲೆ ಪರಿಮಳದೊಂದಿಗೆ ಈ ಸಾರು ಊಟಕ್ಕೆ ಒಳ್ಳೆಯ ರುಚಿ ಕೊಡುತ್ತದೆ.


ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
ಮೀಡಿಯಂ ಗಾತ್ರದ ಸೌತೆಕಾಯಿ - ಅರ್ಧ 
ತೆಂಗಿನತುರಿ - 1 1/2 ಕಪ್ 
ಸಾಸಿವೆ - 3/4 ಚಮಚ  
ಒಣಮೆಣಸು - 2 (ಖಾರಕ್ಕೆ ತಕ್ಕಂತೆ)
ಅರಿಶಿನ - 1/4 ಚಮಚ  
ಹುಣಸೆಹಣ್ಣು - 1 ಚಮಚ ಅಥವಾ ರುಚಿಗೆ ತಕ್ಕಷ್ಟು 
ಅಕ್ಕಿ - 1 ಚಮಚ 
ಚಿಟಿಕೆ ಇಂಗು  
ಸಕ್ಕರೆ ಅಥವಾ ಬೆಲ್ಲ - 1/2 ಚಮಚ   
ಉಪ್ಪು - ರುಚಿಗೆ ತಕ್ಕಷ್ಟು 
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು

ಮಾಡುವ ವಿಧಾನ:
ಸೌತೆಕಾಯಿಯ ಸಿಪ್ಪೆ ತೆಗೆದು ಸಣ್ಣ ಹೋಳುಗಳಾಗಿ ಹೆಚ್ಚಿಕೊಳ್ಳಿ. ಇದಕ್ಕೆ ಒಂದೂವರೆ ಕಪ್ ನಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ.
ತೆಂಗಿನತುರಿ, ಸಾಸಿವೆ, ಒಣಮೆಣಸು, ಅರಿಶಿನ, ಹುಣಸೆಹಣ್ಣು, ಇಂಗು, ತೊಳೆದ ಅಕ್ಕಿ, ಬೆಲ್ಲ, ಉಪ್ಪು ಎಲ್ಲವನ್ನೂ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. 
ರುಬ್ಬಿದ ಪೇಸ್ಟ್ ನ್ನು ಬೆಂದ ಸೌತೆಕಾಯಿಗೆ ಸೇರಿಸಿ 4 - 5 ನಿಮಿಷ ಚೆನ್ನಾಗಿ ಕುದಿಸಿ. ಬೇಕಿದ್ದರೆ ಕುದಿಸುವ ಮೊದಲು ಸ್ವಲ್ಪ ನೀರು ಸೇರಿಸಿ.
ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಕರಿಬೇವಿನ ಒಗ್ಗರಣೆ ಮಾಡಿ ಸಾರಿನ ಮಿಶ್ರಣಕ್ಕೆ ಸೇರಿಸಿ. 
ಸಾರಿನ ರುಚಿ ನೋಡಿಕೊಂಡು ಉಪ್ಪು ಅಥವಾ ಸಕ್ಕರೆ ಬೇಕಿದ್ದರೆ ಸೇರಿಸಿ. ಹುಳಿ ಕಡಿಮೆಯಾದರೆ ಸ್ವಲ್ಪ ನಿಂಬೆರಸ ಸೇರಿಸಿ.
ಬಿಸಿ ಬಿಸಿ ಅನ್ನದೊಡನೆ ಈ ಕಡಗ್ ಪುಳಿಯನ್ನು ಸರ್ವ್ ಮಾಡಿ.


ಟಿಪ್ಸ್:
  • ಕಡಗ್ ಪುಳಿಗೆ ಸೌತೆಕಾಯಿಯ ಬದಲು ಬೂದುಗುಂಬಳಕಾಯಿಯನ್ನೂ ಬಳಸಬಹುದು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)