ಹಸಿ ಅರಿಶಿನದ ಗೊಜ್ಜು / Raw Turmeric Gojju

Click here for English version.

ಅನಾದಿಕಾಲದಿಂದಲೂ ಅರಿಶಿನ ಅರೋಗ್ಯ ಮತ್ತು ಸೌಂದರ್ಯದ ದೃಷ್ಟಿಯಿಂದ ತನ್ನದೇ ಆದ ಮಹತ್ವವನ್ನು ಹೊಂದಿದೆ. ಇದು ಹೊಂದಿರುವ ಔಷಧೀಯ ಗುಣಗಳಿಂದಾಗಿ ನಮ್ಮ ದಿನನಿತ್ಯದ ಅಡಿಗೆಯಲ್ಲಿ ಅರಿಶಿನವನ್ನು ಸಾಮಾನ್ಯವಾಗಿ ಬಳಸುತ್ತೇವೆ. ಇನ್ನು ಸೌಂದರ್ಯ ಸಾಧನಗಳಾದ ಕ್ರೀಮ್, ಲೋಶನ್, ಫೇಸ್ ಪ್ಯಾಕ್ ಇತ್ಯಾದಿಗಳ ತಯಾರಿಕೆಯಲ್ಲಿ ಅರಿಶಿನ ಎಷ್ಟು ಬಳಕೆಯಾಗುವುದೆಂದು ನಮಗೆಲ್ಲ ಗೊತ್ತೇ ಇದೆ. ಔಷಧೀಯ ದೃಷ್ಟಿಯಿಂದ ಹೇಳುವುದಾದರೆ ಅರಿಶಿನ ನಂಜು ನಿವಾರಕ ಮತ್ತು ಕಫ ನಿವಾರಕ. ಹೀಗಾಗಿ ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ. ಅರಿಶಿನದ ಉಪಯೋಗಗಳನ್ನು ಪಟ್ಟಿ ಮಾಡುತ್ತ ಹೋದರೆ ಎಷ್ಟು ದೊಡ್ಡ ಲಿಸ್ಟ್ ತಯಾರಾಗುವುದೋ ಗೊತ್ತಿಲ್ಲ!
ಈಗ ಗೊಜ್ಜಿನ ವಿಷಯಕ್ಕೆ ಬರೋಣ.. ಅಮ್ಮ ಊರಿನಿಂದ ಬರುವಾಗ ಅವರ ಹಿತ್ತಲಿನಲ್ಲಿ ಬೆಳೆದ ಹಸಿ ಅರಿಶಿನದ ಬೇರುಗಳನ್ನು ನಮಗೆಂದು ತಂದಿದ್ದರು. ಅವರಿಂದ ಕಲಿತು ನಾನು ತಯಾರಿಸಿದ ಗೊಜ್ಜು ಇದು. ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಮತ್ತು ನಾಲಿಗೆಗೂ ಬಹಳ ರುಚಿ! ಫ್ರಿಜ್ ನಲ್ಲಿ ಇಟ್ಟುಕೊಂಡು ಒಂದು ವಾರದವರೆಗೂ ಬಳಸಬಹುದು.
 

ತಯಾರಿಸಲು ಬೇಕಾಗುವ ಸಮಯ: 25 - 30 ನಿಮಿಷಗಳು
ಸರ್ವಿಂಗ್ಸ್: 10 - 12 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಹಸಿ ಅರಿಶಿನ - 2 ಇಂಚಿನ 3 ಚೂರುಗಳು 
ಕಾಳುಮೆಣಸು 7 - 8 
ಉದ್ದಿನಬೇಳೆ - 1 ಚಮಚ 
ಸಾಸಿವೆ - 1/2 ಚಮಚ 
ಎಳ್ಳು - 1 ಚಮಚ


ಎಣ್ಣೆ - 2 ಚಮಚ
ತೆಂಗಿನತುರಿ - 1 ಕಪ್
ಹುಣಸೆಹಣ್ಣು - 1 - 1 1/2 ಚಮಚ (ರುಚಿಗೆ ತಕ್ಕಷ್ಟು)
ಬೆಲ್ಲ - ಸಿಹಿಯಾಗುವಷ್ಟು (ನಾನು 4 ಚಮಚ ಬೆಲ್ಲ ಮತ್ತು 3 ಚಮಚ ಸಕ್ಕರೆ ಬಳಸಿದ್ದೇನೆ)
ರುಚಿಗೆ ತಕ್ಕಷ್ಟು ಉಪ್ಪು   

ಮಾಡುವ ವಿಧಾನ:
ಅರಿಶಿನವನ್ನು ಸ್ವಚ್ಛವಾಗಿ ತೊಳೆದುಕೊಂಡು, ಒಂದು ಫೋರ್ಕ್ ನಿಂದ ಚುಚ್ಚಿ ತೂತುಗಳನ್ನು ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಬೇಯಿಸುವುದಕ್ಕೆ ಅನುಕೂಲವಾಗುತ್ತದೆ.
ಅರಿಶಿನದ ಚೂರುಗಳನ್ನು ಬೆಂಕಿಗೆ ಹಿಡಿದು 4 - 5 ನಿಮಿಷ ಅಥವಾ ಸ್ವಲ್ಪ ಮೆತ್ತಗಾಗುವವರೆಗೆ ಸುಡಿ. ಇಲ್ಲವೇ ಇವನ್ನು ಸ್ವಲ್ಪ ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.
ಸುಟ್ಟ ಅರಿಶಿನವನ್ನು ಒಮ್ಮೆ ತೊಳೆದುಕೊಂಡು, ಕಪ್ಪಗಾದ ತೆಳ್ಳಗಿನ ಸಿಪ್ಪೆಯನ್ನು ತೆಗೆದುಬಿಡಿ. ನಂತರ ಇವನ್ನು ಚಿಕ್ಕ ಚೂರುಗಳಾಗಿ ಹೆಚ್ಚಿಕೊಳ್ಳಿ.


ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿಕೊಂಡು ಕಾಳುಮೆಣಸು ಹಾಕಿ ಚಟಪಟ ಎನ್ನುವವರೆಗೆ ಹುರಿಯಿರಿ. ನಂತರ ಇದಕ್ಕೆ ಉದ್ದಿನಬೇಳೆ, ಸಾಸಿವೆ ಮತ್ತು ಎಳ್ಳು ಸೇರಿಸಿ ಹುರಿದು ಇಳಿಸಿ.
ಹುರಿದ ಮಿಶ್ರಣ, ತೆಂಗಿನತುರಿ, ಅರಿಶಿನದ ಚೂರುಗಳು ಮತ್ತು ಹುಣಸೆಹಣ್ಣು ಇಷ್ಟನ್ನೂ ಮಿಕ್ಸಿಯಲ್ಲಿ ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಸೇರಿಸಿ ಐದು ನಿಮಿಷ ಕುದಿಸಿ, ಮಿಶ್ರಣ ದಪ್ಪಗಾದ ನಂತರ ಇಳಿಸಿ.
ಸ್ವಲ್ಪ ಸಿಹಿ ಮಿಶ್ರಿತವಾದ ಈ ಗೊಜ್ಜು ಅನ್ನದೊಡನೆ ಹಾಕಿಕೊಳ್ಳಲು ಚೆನ್ನಾಗಿರುತ್ತದೆ.
ಈ ಗೊಜ್ಜು ಹೊರಗಡೆ ಇಟ್ಟರೆ 2 - 3 ದಿನ ಚೆನ್ನಾಗಿರುತ್ತದೆ. ಫ್ರಿಜ್ ನಲ್ಲಿ ಇಟ್ಟುಕೊಂಡು ವಾರದವರೆಗೂ ಬಳಸಬಹುದು.


ಕಾಮೆಂಟ್‌ಗಳು