ಸೌತೆಕಾಯಿ ಪುಳಿಶೇರಿ / Cucumber Pulisheri

Click here for English version.

ಕೇರಳದ ಅಡಿಗೆಗೂ ನಮ್ಮಲ್ಲಿಯ ಹವ್ಯಕರ ಅಡಿಗೆಗೂ ಸ್ವಲ್ಪ ಸಂಬಂಧವಿದೆಯೆಂದು ನಾನು ಯಾವಾಗಲೂ ಅಂದುಕೊಳ್ಳುತ್ತೇನೆ. ಏಕೆಂದರೆ ಕೇರಳದ ಅಡಿಗೆಯಂತೆಯೇ ಹವ್ಯಕರ ಅಡಿಗೆಯಲ್ಲೂ ತೆಂಗಿನಕಾಯಿ ಮತ್ತು ಕೊಬ್ಬರಿ ಎಣ್ಣೆಯ ಬಳಕೆ ಜಾಸ್ತಿ. ಕೊಲೆಸ್ಟರಾಲ್ ಭಯವುಳ್ಳವರು ಕೊಬ್ಬರಿ ಎಣ್ಣೆಯ ಬದಲು ಸನ್ ಫ್ಲವರ್ ಆಯಿಲ್ ಇತ್ಯಾದಿ ಎಣ್ಣೆಗಳನ್ನು ಬಳಸಬಹುದು, ಆದರೆ ಹವ್ಯಕ ಅಡಿಗೆಯ ನಿಜವಾದ ರುಚಿ ಬರುವುದು ಕೊಬ್ಬರಿ ಎಣ್ಣೆ ಬಳಸಿದಾಗಲೇ! :) ಕೊಬ್ಬರಿ ಎಣ್ಣೆಯ ಒಗ್ಗರಣೆ ಬಿದ್ದಾಗಲೇ ಹವ್ಯಕರ ಅಡಿಗೆ ಹೆಚ್ಚು ರುಚಿಕರವೆನ್ನಿಸುತ್ತದೆ. 
ಕೇರಳದ ಅಡಿಗೆಯ ಬಗ್ಗೆ ಹೇಳಿದ್ದು ಏಕೆಂದರೆ ಇಂದು ನಾನು ಬರೆಯುತ್ತಿರುವುದು ಕೇರಳದ ಸ್ಪೆಷಲ್ ಅಡಿಗೆ. ಬಹಳ ಕಡಿಮೆ ಸಾಮಗ್ರಿಗಳನ್ನು ಬಳಸಿ ಮಾಡುವ ಈ ಮೇಲೋಗರಕ್ಕೆ ತೆಂಗಿನಕಾಯಿ ಚೆನ್ನಾಗಿ ಬಿದ್ದರೆ ರುಚಿ ಹೆಚ್ಚು ;) ಸ್ವಲ್ಪ ಮಟ್ಟಿಗೆ ಹವ್ಯಕರ ಮೇಲೋಗರವಾದ ಪಳದ್ಯವನ್ನು ಹೋಲುವುದಾದರೂ ಇದು ಜೀರಿಗೆ ಮತ್ತು ಹಸಿಮೆಣಸಿನ ಪರಿಮಳದೊಂದಿಗೆ ಬೇರೆಯೇ ರುಚಿಯನ್ನು ಕೊಡುತ್ತದೆ.  


ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು 
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಮೀಡಿಯಂ ಗಾತ್ರದ ಸೌತೆಕಾಯಿ - ಅರ್ಧ  
ತೆಂಗಿನತುರಿ - 1 ಕಪ್ 
ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
ಜೀರಿಗೆ - 1/2 ಚಮಚ   
ಅರಿಶಿನ - 1/4 ಚಮಚ  
ದಪ್ಪ ಮಜ್ಜಿಗೆ ಅಥವಾ ಮೊಸರು - 1 ಕಪ್ 
ಕರಿಬೇವು 10 - 12 ಎಲೆಗಳು
ರುಚಿಗೆ ಉಪ್ಪು 
ಒಗ್ಗರಣೆಗೆ: ಎಣ್ಣೆ - 2 ಚಮಚ, ಮೆಂತ್ಯ - 1/4 ಚಮಚ, ಒಣಮೆಣಸು - 2 ಚೂರು, ಸಾಸಿವೆ - 1/2 ಚಮಚ  

ಮಾಡುವ ವಿಧಾನ:
ಸೌತೆಕಾಯಿಯ ಸಿಪ್ಪೆ ತಗೆದು ಮಧ್ಯಮಗಾತ್ರದ ಹೋಳುಗಳಾಗಿ ಹೆಚ್ಚಿಕೊಳ್ಳಿ. 
ಹೆಚ್ಚಿದ ಸೌತೆಕಾಯಿಗೆ ಬೇಯಿಸಲು ಬೇಕಾಗುವಷ್ಟು ನೀರು (ಸುಮಾರು 2 ಕಪ್ ನಷ್ಟು), ಉದ್ದಕ್ಕೆ ಸೀಳಿದ ಹಸಿಮೆಣಸು, ಒಂದು ದೊಡ್ಡ ಚಿಟಿಕೆ ಅರಿಶಿನ ಸೇರಿಸಿ ಬೇಯಿಸಿ. ಹೋಳು ಅರ್ಧ ಬೆಂದ ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ತೆಂಗಿನತುರಿ, ಜೀರಿಗೆ ಮತ್ತು ಉಳಿದ ಅರಿಶಿನವನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಸೌತೆಕಾಯಿ ಹೋಳುಗಳು ಪೂರ್ತಿ ಬೆಂದ ನಂತರ ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ 2 - 3 ನಿಮಿಷ ಕುದಿಸಿ. ಕೊನೆಯಲ್ಲಿ ಕರಿಬೇವಿನ ಎಸಳುಗಳನ್ನು ಸೇರಿಸಿ ಉರಿಯಿಂದ ಇಳಿಸಿ.
ಇದಕ್ಕೆ ಮೆಂತ್ಯ, ಒಣಮೆಣಸು, ಸಾಸಿವೆಯ ಒಗ್ಗರಣೆ ಮಾಡಿ ಹಾಕಿ. ಪುಳಿಶೇರಿ ಸ್ವಲ್ಪ ಬೆಚ್ಚಗಿರುವಾಗಲೇ ಮೊಸರು ಅಥವಾ ಮಜ್ಜಿಗೆ ಸೇರಿಸಿ ಅನ್ನದೊಡನೆ ಸರ್ವ್ ಮಾಡಿ.


ಟಿಪ್ಸ್:
  • ಪುಳಿಶೇರಿಯನ್ನು ಸಂಜೆಯ ಊಟ ಅಥವಾ ಮರುದಿನಕ್ಕೆ ಬಳಸುವುದಾದರೆ ಮಜ್ಜಿಗೆಯನ್ನು ಸೇರಿಸದೆ ಇಡಿ. ಬಳಸುವ ಮೊದಲು ಬಿಸಿ ಮಾಡಿಕೊಂಡು, ಸ್ವಲ್ಪ ತಣ್ಣಗಾದ ನಂತರ ಮಜ್ಜಿಗೆ ಸೇರಿಸಿ.

ಕಾಮೆಂಟ್‌ಗಳು