ಗಿರ್ಮಿಟ್ / Girmit

Click here for English version.

ಗಿರ್ಮಿಟ್ ಎನ್ನುವುದು ಉತ್ತರ ಕರ್ನಾಟಕದ ಒಂದು ಸ್ಪೆಷಲ್ ತಿಂಡಿ ಅಥವಾ ಚಾಟ್ಸ್. ತಯಾರಿಕಾ ವಿಧಾನ ಭೇಲ್ ಪುರಿಯಂತೆ ತೋರಿದರೂ ಇದಕ್ಕೆ ಬಳಸುವ ಸಾಮಗ್ರಿಗಳೇ ಬೇರೆ. ಹುರಿಗಡಲೆ ಅಥವಾ ಪುಟಾಣಿಯ ಪುಡಿಯನ್ನು ಇದಕ್ಕೆ ಸೇರಿಸುವುದರಿಂದ ಒಂದು ವಿಶೇಷ ರುಚಿ ಬರುತ್ತದೆ. ನಾವು ಊರಿಗೆ ಹೋಗುವಾಗ ಅಪರೂಪಕ್ಕೆ ಒಮ್ಮೆ ಟ್ರೈನ್ ನಲ್ಲಿ ಪ್ರಯಾಣಿಸುತ್ತೇವೆ. ಟ್ರೈನ್ ನಲ್ಲಿ ಇಂಥ ಗಿರ್ಮಿಟ್ ಅಥವಾ ಚುರುಮುರಿಯನ್ನು ಮಾರಲು ಬರುತ್ತಾರೆ. ನಮಗಂತೂ ಪ್ರಯಾಣದ ವೇಳೆ ಈ ಗಿರ್ಮಿಟ್ ಸವಿಯುವುದೆಂದರೆ ಬಹಳ ಇಷ್ಟ! ಸಾಯಂಕಾಲದ ಹೊತ್ತಿಗೆ ಟೀಯೊಡನೆ ಈ ತಿಂಡಿ ಬಹಳ ಚೆನ್ನಾಗಿರುತ್ತದೆ.



ತಯಾರಿಸಲು ಬೇಕಾಗುವ ಸಮಯ: 10 - 15 ನಿಮಿಷಗಳು 
ಸರ್ವಿಂಗ್ಸ್: ಇಬ್ಬರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಕಡಲೆಪುರಿ ಅಥವಾ ಮಂಡಕ್ಕಿ - 1 1/2 ಬೌಲ್  
ಎಣ್ಣೆ - 3 ಚಮಚ
ಕಡಲೇಕಾಯಿ (ಶೇಂಗಾ) - 4 ಚಮಚ 
ಸಾಸಿವೆ - 1 ಚಮಚ
ಜೀರಿಗೆ - 1/2 ಚಮಚ
ಕರಿಬೇವು 8 - 10 ಎಲೆಗಳು
ಅರಿಶಿನ - 1/4 ಚಮಚ
ಹಸಿಮೆಣಸಿನ ಪೇಸ್ಟ್ - 1 ಚಮಚ ಅಥವಾ ರುಚಿಗೆ ತಕ್ಕಷ್ಟು
ಈರುಳ್ಳಿ - ಅರ್ಧ 
ಸಕ್ಕರೆ - 1/2 ಚಮಚ
ನಿಂಬೆರಸ - 2 ಚಮಚ ಅಥವಾ ರುಚಿಗೆ ತಕ್ಕಷ್ಟು
ರುಚಿಗೆ ಉಪ್ಪು 
ಹೆಚ್ಚಿದ ಕೊತ್ತಂಬರಿ ಸೊಪ್ಪು (ಬೇಕಿದ್ದರೆ) - 2 ಚಮಚ 
ಹುರಿಗಡಲೆ (ಪುಟಾಣಿ)ಪುಡಿ - 1 1/2 ಚಮಚ

ಮಾಡುವ ವಿಧಾನ:
ಈರುಳ್ಳಿಯನ್ನು ಸ್ವಲ್ಪ ತೆಳ್ಳಗೆ ಹೆಚ್ಚಿಕೊಳ್ಳಿ. ಕಡ್ಲೆಪುರಿಯನ್ನು ಬಾಣಲೆಯಲ್ಲಿ 4 - 5 ನಿಮಿಷ ಬಿಸಿಮಾಡಿ ಗರಿಗರಿಯಾಗಿ ಮಾಡಿಕೊಳ್ಳಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಕಡಲೇಕಾಯಿ, ಸಾಸಿವೆ, ಜೀರಿಗೆ, ಅರಿಶಿನ, ಕರಿಬೇವು, ಹಸಿಮೆಣಸಿನ ಪೇಸ್ಟ್ ಹಾಕಿ ಒಗ್ಗರಣೆ ಮಾಡಿಕೊಂಡು ಹೆಚ್ಚಿದ ಈರುಳ್ಳಿ ಹಾಕಿ ಎರಡು ನಿಮಿಷ ಬಾಡಿಸಿ ಉರಿಯನ್ನು ಆಫ್ ಮಾಡಿ.
ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ.
ಈ ಮಿಶ್ರಣಕ್ಕೆ ಹಿಡಿಸುವಷ್ಟು ಕಡಲೆಪುರಿ ಸೇರಿಸಿ ಕೈಯಲ್ಲಿ ಕಲಸಿ. ರುಚಿ ನೋಡಿಕೊಂಡು ಉಪ್ಪು ಅಥವಾ ಹುಳಿ ಬೇಕಿದ್ದರೆ ಸೇರಿಸಿ.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಹುರಿಗಡಲೆ ಪುಡಿ ಸೇರಿಸಿ ಚೆನ್ನಾಗಿ ಕೈಯಾಡಿಸಿ ಸರ್ವಿಂಗ್ ಬೌಲ್ ಗೆ ಹಾಕಿಕೊಡಿ. 


ಟಿಪ್ಸ್:
  • ಗಿರ್ಮಿಟ್ ಗೆ ಉಪ್ಪು ಅಥವಾ ಹುಳಿ ಹೆಚ್ಚಾಗಿದ್ದರೆ ಇನ್ನೂ ಸ್ವಲ್ಪ ಹುರಿಗಡಲೆ ಪುಡಿ ಸೇರಿಸಿ ಕಲಸಿದರೆ ಸರಿಹೋಗುತ್ತದೆ.
  • ಒಗ್ಗರಣೆ ಮಿಶ್ರಣವನ್ನು ಮೊದಲೇ ತಯಾರಿಸಿಟ್ಟು, ಸರ್ವ್ ಮಾಡುವ ಮೊದಲು ಕಡಲೆಪುರಿ ಸೇರಿಸಿ ಕಲಸಿಕೊಳ್ಳಬಹುದು.
  • ಗಿರ್ಮಿಟ್ ನ್ನು ತಯಾರಿಸಿದ ಸ್ವಲ್ಪ ಹೊತ್ತಿನಲ್ಲೇ ಖಾಲಿ ಮಾಡುವುದು ಒಳ್ಳೆಯದು. ಇಲ್ಲದಿದ್ದರೆ ಇದು ಮೆತ್ತಗಾಗಿ ರುಚಿ ಕಳೆದುಕೊಳ್ಳುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)