ಸ್ವೀಟ್ ಬ್ರೆಡ್ / Sweet Bread

Click here for English version.

ಮನೆಯಲ್ಲೇ ಇಷ್ಟು ಒಳ್ಳೆಯ ಬ್ರೆಡ್ ತಯಾರಿಸಬಹುದೆಂದು ಇತ್ತೀಚಿನವರೆಗೂ ಯೋಚಿಸಿರಲಿಲ್ಲ ನಾನು. ತುಂಬಾ ದಿನಗಳ ಹಿಂದೆ ಕೊಂಡಿದ್ದ ಬ್ರೆಡ್ ಮೌಲ್ಡ್ ನ್ನು ಒಂದೆರಡು ಬಾರಿ ಮಾತ್ರ ಬಳಸಿ ಹಾಗೇ ಇಟ್ಟುಬಿಟ್ಟಿದ್ದೆ. ಈಗ ನಮ್ಮ ಮನೆಯ ಹತ್ತಿರ ಇರುವ ಬೇಕರಿಯ ಬ್ರೆಡ್ ಏಕೋ ಅಷ್ಟು ಇಷ್ಟವಾಗದ ಕಾರಣ ಪುನಃ ಬ್ರೆಡ್ ಮಾಡುವ ನೆನಪಾಯಿತು!
ಒಳ್ಳೆಯ ಬ್ರೆಡ್, ಅದರಲ್ಲೂ ನನ್ನಿಷ್ಟದ ಸ್ವೀಟ್ ಬ್ರೆಡ್ ಇಲ್ಲಿ ಚೆನ್ನಾಗಿರುವುದೇ ಇಲ್ಲ :( ನಿಜ ಹೇಳಬೇಕೆಂದರೆ ಆಸ್ಟ್ರೇಲಿಯಾದಲ್ಲಿದ್ದಾಗ ಸ್ವೀಟ್ ಬ್ರೆಡ್ ತಯಾರಿಸಲೆಂದೇ ಮೌಲ್ಡ್ ಕೊಂಡಿದ್ದು ನಾನು! ಮೊದಲು ತಯಾರಿಸಿದ ಬ್ರೆಡ್ ಅಷ್ಟೇನೂ ಚೆನ್ನಾಗಿ ಬಂದಿರಲಿಲ್ಲ; ನಂತರ ನಿಧಾನವಾಗಿ ಒಂದಿಷ್ಟು ಬದಲಾವಣೆಗಳನ್ನು ಮಾಡಿ ತಯಾರಿಸಿದಾಗ ಬ್ರೆಡ್ ತುಂಬ ಚೆನ್ನಾಗಿ ಬಂತು. ಈಗೀಗ ಅಂಗಡಿಯ ಬ್ರೆಡ್ ಗಿಂತ ಮನೆಯಲ್ಲಿ ತಯಾರಿಸುವ ಬ್ರೆಡ್ ನಮಗೆ ಹೆಚ್ಚು ಇಷ್ಟವಾಗತೊಡಗಿದೆ!


ತಯಾರಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು
ಬೇಯಿಸಲು ಬೇಕಾಗುವ ಸಮಯ: 30 ನಿಮಿಷಗಳು
ಈ ಅಳತೆಯಿಂದ 1 ಬ್ರೆಡ್ ಲೋಫ್ ತಯಾರಿಸಬಹುದು
ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು - 3 ಕಪ್ 
ಉಗುರುಬೆಚ್ಚಗಿನ ಹಾಲು - 1 1/2 ಕಪ್ 
ಆಕ್ಟಿವ್ ಡ್ರೈ ಯೀಸ್ಟ್ - 1 1/2 ಚಮಚ 
ಸಕ್ಕರೆ - 7 1/2 ಚಮಚ (1 ಕಪ್ ಮೈದಾಹಿಟ್ಟಿಗೆ 2 1/2 ಚಮಚದಂತೆ) 
ರುಚಿಗೆ ತಕ್ಕಷ್ಟು ಉಪ್ಪು 
ಕರಗಿಸಿದ ಬೆಣ್ಣೆ ಅಥವಾ ಎಣ್ಣೆ 6 - 7 ಚಮಚ 


ಮಾಡುವ ವಿಧಾನ:
ಉಗುರುಬೆಚ್ಚಗಿನ ಹಾಲಿಗೆ ಸಕ್ಕರೆ ಸೇರಿಸಿ ಕದಡಿಕೊಂಡು, ಯೀಸ್ಟ್ ಸೇರಿಸಿ ಕಲಕಿ. ಇದನ್ನು 10 ನಿಮಿಷಕಾಲ ಅಥವಾ ಯೀಸ್ಟ್ ಬೆಳೆದು ಬುರುಗುಬರುವವರೆಗೆ ಬೆಚ್ಚಗಿನ ಸ್ಥಳದಲ್ಲಿ ಮುಚ್ಚಿಡಿ.
ಮೈದಾಹಿಟ್ಟು ಮತ್ತು ಉಪ್ಪನ್ನು ಮಿಕ್ಸ್ ಮಾಡಿಕೊಂಡಿರಿ. ಇದನ್ನು ಯೀಸ್ಟ್ ಮಿಶ್ರಣಕ್ಕೆ ಸೇರಿಸಿ ಕೈಗಳಿಂದ ಚೆನ್ನಾಗಿ ನಾದಿ. ಬ್ರೆಡ್ ಚೆನ್ನಾಗಿ ಆಗಬೇಕೆಂದರೆ ಕನಿಷ್ಠ 10 ರಿಂದ 15 ನಿಮಿಷ ಹಿಟ್ಟನ್ನು ಚೆನ್ನಾಗಿ ನಾದಬೇಕು.
ಹಿಟ್ಟನ್ನು ಚೆನ್ನಾಗಿ ನಾದಿದ ನಂತರ ಕೊನೆಯಲ್ಲಿ ಇದಕ್ಕೆ 5 - 6 ಚಮಚದಷ್ಟು ಕರಗಿಸಿದ ಬೆಣ್ಣೆ ಇಲ್ಲವೇ ಎಣ್ಣೆ ಸೇರಿಸಿ ಒಂದೆರಡು ನಿಮಿಷ ನಾದಿ, ಹಿಟ್ಟನ್ನು ಒದ್ದೆ ಬಟ್ಟೆಯಿಂದ ಮುಚ್ಚಿ 1 ಘಂಟೆ ಇಡಿ. ಅಷ್ಟರಲ್ಲಿ ಹಿಟ್ಟು ಉಬ್ಬಿ ಬಂದು ಎರಡರಷ್ಟಾಗಿರುತ್ತದೆ.
ಒಂದು ಘಂಟೆಯ ನಂತರ ಹಿಟ್ಟನ್ನು ತೆಗೆದು, ಅದರಲ್ಲಿರುವ ಗಾಳಿಯೆಲ್ಲ ಹೋಗುವಂತೆ ಸ್ವಲ್ಪ ನಾದಿ. ನಂತರ ಇದನ್ನು ಜಿಡ್ಡು ಸವರಿದ ಬ್ರೆಡ್ ಮೌಲ್ಡ್ ನಲ್ಲಿ ಹಾಕಿ, ಒದ್ದೆ ಬಟ್ಟೆ ಮುಚ್ಚಿ ಅರ್ಧ ಘಂಟೆ ಬಿಡಿ.
ಓವನ್ ನ್ನು 180°C ಗೆ ಪ್ರೀ ಹೀಟ್ ಮಾಡಿಕೊಂಡು ಬ್ರೆಡ್ ನ್ನು 30 ನಿಮಿಷ ಬೇಯಿಸಿ. ನಂತರ ಓವನ್ ನಿಂದ ಹೊರತೆಗೆದು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಸ್ಲೈಸ್ ಗಳಾಗಿ ಕಟ್ ಮಾಡಿ.
ಬ್ರೆಡ್ ನ್ನು ತಯಾರಿಸಿದ ತಕ್ಷಣ ಬಳಸುವುದಕ್ಕಿಂತ ಮರುದಿನ ಬಳಸಿದರೆ ಇನ್ನೂ ಚೆನ್ನಾಗಿರುತ್ತದೆ.


ಕಾಮೆಂಟ್‌ಗಳು