Click here for English version.
ಎಂದಿನಂತೆ ಈ ಬಾರಿಯೂ ಊರಿನ ಪ್ರವಾಸ ಮುಗಿಸಿ ಬರುವಾಗ ನಮ್ಮ ಜೊತೆ ಒಂದಿಷ್ಟು ಸೊಪ್ಪು, ತರಕಾರಿಗಳನ್ನು ತಂದೆವು. ಹಳ್ಳಿಗಳ ಕಡೆ ಸಿಗುವ ಹೆಚ್ಚಿನ ಬಗೆಯ ಸೊಪ್ಪುಗಳು ಔಷಧೀಯ ಗುಣಗಳನ್ನು ಹೊಂದಿದ್ದು, ಅಡಿಗೆಗೆ ಉಪಯುಕ್ತವಾಗಿರುತ್ತವೆ. ಈ ಬಾರಿ ಊರಿಗೆ ಹೋದಾಗ ಮನೆಯಲ್ಲಿ ಊಟಕ್ಕೆ ಮಜ್ಜಿಗೆ ಹುಲ್ಲಿನ ತಂಬ್ಳಿ ಮಾಡಿದ್ದರು. ನಾನೂ ಅಲ್ಲಿಂದ ವಾಪಸ್ ಬರುವಾಗ ಮಜ್ಜಿಗೆ ಹುಲ್ಲನ್ನು ತಂದಿದ್ದೆ. ಮಜ್ಜಿಗೆ ಹುಲ್ಲು ನಿಂಬೆಯ ಪರಿಮಳವನ್ನು ಹೊಂದಿದ್ದು, ಇದನ್ನು ಸೂಪ್ ಮತ್ತಿತರ ಅನೇಕ ಅಡಿಗೆಗಳಲ್ಲಿ ಫ್ಲೇವರ್ ಗೆಂದು ಬಳಸುತ್ತಾರೆ. ಹುಲ್ಲಿನಂತೆಯೇ ತೋರುವ ಈ ಗಿಡವನ್ನು ಪಾಟ್ ನಲ್ಲಿಯೂ ಆರಾಮಾಗಿ ಬೆಳೆಸಬಹುದು.
ಬೇಸಿಗೆಯಲ್ಲಿ ಊಟಕ್ಕೆ ಹಿತವಾದ ಮಜ್ಜಿಗೆ ಹುಲ್ಲಿನ ತಂಬ್ಳಿಯನ್ನು ನೀವೂ ತಯಾರಿಸಿ ನೋಡಿ!
ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
ಮಜ್ಜಿಗೆ ಹುಲ್ಲು - 2 ಎಸಳು ( ಅಥವಾ ಚಿಕ್ಕದಾಗಿ ಕತ್ತರಿಸಿದ ಮಜ್ಜಿಗೆ ಹುಲ್ಲು - 1/4 ಕಪ್)
ಕಾಳುಮೆಣಸು - 2
ಜೀರಿಗೆ - 1/2 ಚಮಚ
ಎಣ್ಣೆ - 1/4 ಚಮಚ
ತೆಂಗಿನತುರಿ - 3/4 ಕಪ್
ಮಜ್ಜಿಗೆ - 3/4 ಕಪ್
ನೀರು - ಅಂದಾಜು 2 ಕಪ್
ರುಚಿಗೆ ಉಪ್ಪು
ಒಗ್ಗರಣೆಗೆ: ಬೆಣ್ಣೆ (ಅಥವಾ ಎಣ್ಣೆ) - 1 ಚಮಚ, ಜೀರಿಗೆ - 1/4 ಚಮಚ, ಸಾಸಿವೆ - 1/2 ಚಮಚ
ಮಾಡುವ ವಿಧಾನ:
ಮಜ್ಜಿಗೆ ಹುಲ್ಲನ್ನು ಒಂದು ಇಂಚಿನ ಚೂರುಗಳಾಗಿ ಹೆಚ್ಚಿಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಂಡು ಸೋಸಿ 1 ಕಪ್ ನಷ್ಟು ರಸ ತೆಗೆಯಿರಿ.
ಕಾಳುಮೆಣಸು ಮತ್ತು ಜೀರಿಗೆಯನ್ನು ಎಣ್ಣೆಯಲ್ಲಿ ಹುರಿದುಕೊಳ್ಳಿ. ಇವನ್ನು ತೆಂಗಿನತುರಿಯೊಡನೆ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವುದಕ್ಕೆ ಮಜ್ಜಿಗೆ ಹುಲ್ಲಿನ ರಸವನ್ನೇ ಬಳಸಿ.
ಈ ಮಿಶ್ರಣಕ್ಕೆ ಮಜ್ಜಿಗೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕದಡಿ. ಮಿಶ್ರಣ ದಪ್ಪಗೆನಿಸಿದರೆ ಇನ್ನೂ ಸ್ವಲ್ಪ ನೀರು ಸೇರಿಸಿ ತೆಳ್ಳಗೆ ಮಾಡಿ.
ಒಗ್ಗರಣೆ ಸೌಟಿನಲ್ಲಿ ಬೆಣ್ಣೆ (ಅಥವಾ ಎಣ್ಣೆ) ಯನ್ನು ಕಾಯಿಸಿಕೊಂಡು ಸಾಸಿವೆ, ಜೀರಿಗೆ ಹಾಕಿ ಒಗ್ಗರಣೆ ಮಾಡಿ ಚಟಪಟ ಎಂದ ನಂತರ ತಂಬ್ಳಿ ಮಿಶ್ರಣಕ್ಕೆ ಸೇರಿಸಿ.
ತಯಾರಾದ ತಂಬ್ಳಿಯನ್ನು ಅನ್ನದೊಡನೆ ಸರ್ವ್ ಮಾಡಿ. ಹವ್ಯಕರ ಊಟದಲ್ಲಿ ತಂಬ್ಳಿಯೇ ಮೊದಲ ಮೇಲೋಗರ. ತಂಬ್ಳಿ ಊಟದ ನಂತರವೇ ಸಾರು, ಇತ್ಯಾದಿ ಮೇಲೋಗರಗಳನ್ನು ಹಾಕಿಕೊಳ್ಳುತ್ತಾರೆ.
ಟಿಪ್ಸ್:
- ತಂಬ್ಳಿಗೆ ಮಜ್ಜಿಗೆ ಮತ್ತು ತೆಂಗಿನತುರಿ ಸೇರಿಸುವುದರಿಂದ ಹೆಚ್ಚು ಸಮಯ ಇಟ್ಟರೆ ಕೆಟ್ಟುಹೋಗುತ್ತದೆ. ಹಾಗಾಗಿ ತಂಬ್ಳಿ ಮಿಕ್ಕಿದ್ದರೆ ಫ್ರಿಜ್ ನಲ್ಲಿಟ್ಟು ಬಳಸಿ.
ವಾಣಿ, ನಿನ್ನ ಈ ಪೋಸ್ಟ್ ನೋಡ್ಕ್ಯಂಡು, ಆನೂ ಇಲ್ಲಿನ ನರ್ಸರಿಯಿಂದ ಮಜ್ಜಿಗೆ ಹುಲ್ಲು ತಂದು ನೆಟ್ಟಿದ್ದಿ, ಅದು ಬದುಕಿದ್ದು. ಸದ್ಯದಲ್ಲೇ ತಂಬ್ಳಿ ಮಾಡ್ತಿ :) ನೆನಪು ಮಾಡಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಕೂಸೇ :)
ಪ್ರತ್ಯುತ್ತರಅಳಿಸಿThanks a lot Pratimakka :)
ಪ್ರತ್ಯುತ್ತರಅಳಿಸಿನಮ್ಮನೆದೇ ಸೊಪ್ಪು, ತರಕಾರಿ ಹಾಕಿ ಮಾಡ ಅಡ್ಗೆ ರುಚಿನೇ ಬೇರೆ ಅಲ್ದ?