Click here for English version.
ಮಲೆನಾಡಿನ ಕಡೆ ತಯಾರಿಸುವ ವಿವಿಧ ಪಲ್ಯಗಳಲ್ಲಿ ಇದೂ ಒಂದು. ಮಾಡರ್ನ್ ಅಡಿಗೆಗಳ ನಡುವೆ ಮರೆತೇ ಹೋಗುತ್ತಿರುವ ಈ ಪಲ್ಯದ ಸಾಂಪ್ರದಾಯಿಕ ಹೆಸರು 'ಕೊಚ್ಚುಳಿ'. ನನ್ನ ಅಮ್ಮನ ತವರುಮನೆಯಲ್ಲಿ ಇಂಥ ಹಲವು ಹಳೆಯ ಅಡಿಗೆಗಳು ಇನ್ನೂ ಚಾಲ್ತಿಯಲ್ಲಿವೆ. ಅಮ್ಮ ಈ ಬಾರಿ ನಮ್ಮ ಮನೆಗೆ ಬಂದಾಗ ಈ ಪಲ್ಯ ತಯಾರಿಸಿದ್ದರು. ರುಚಿ ನೋಡಿದ ತಕ್ಷಣವೇ ಅದರ ಫೊಟೋ ಕ್ಲಿಕ್ಕಿಸಿಕೊಂಡೆ ನಾನು! ಹಾಗೂ ಪಲ್ಯ ತಯಾರಿಸುವ ವಿಧಾನವನ್ನು ನೋಟ್ ಮಾಡಿಕೊಂಡೆ.
ಈ ಪಲ್ಯಕ್ಕೆ ಸಾಂಬಾರ್ ಸೌತೆಕಾಯಿಯ ಬದಲು ಸಾದಾ ಸೌತೆಕಾಯಿಯನ್ನೂ ಬಳಸಬಹುದು. ಸೌತೆಕಾಯಿ ತುಂಬಾ ಎಳಸಾಗಿದ್ದರೆ ಈ ಪಲ್ಯಕ್ಕೆ ಚೆನ್ನಾಗಿರುವುದಿಲ್ಲ. ಹಳ್ಳಿಗಳ ಕಡೆ ಸಿಗುವ ಮೊಗೆಕಾಯಿ (ಮಗೆಕಾಯಿ) ಹಾಗೂ ಚೆನ್ನಾಗಿ ಬಲಿತ ಉದ್ದದ ಸೌತೆಕಾಯಿ ಈ ಪಲ್ಯ ತಯಾರಿಸಲು ಬಹಳ ಚೆನ್ನಾಗಿರುತ್ತದೆ.
ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
ಸಾಂಬಾರ್ ಸೌತೆ ಅಥವಾ ಮದ್ರಾಸ್ ಸೌತೆ - ಮೀಡಿಯಂ ಗಾತ್ರದ ಸೌತೆಕಾಯಿಯ ಅರ್ಧಭಾಗ
ಒಣ ಮೆಣಸು - 1
ಹಸಿಮೆಣಸು - 2
ನಿಂಬೆಹಣ್ಣು - ಅರ್ಧಭಾಗ
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ: ಎಣ್ಣೆ - 3 ಚಮಚ, ಉದ್ದಿನಬೇಳೆ - 1/2 ಚಮಚ, ಸಾಸಿವೆ - 1/2 ಚಮಚ, ಒಂದು ದೊಡ್ಡ ಚಿಟಿಕೆ ಇಂಗು, ಕರಿಬೇವು - 1 ಎಸಳು
ಮಾಡುವ ವಿಧಾನ:
ಸೌತೆಕಾಯಿಯ ಬೀಜ ಮತ್ತು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸನ್ನು ಹೆಚ್ಚಿಟ್ಟುಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಇಂಗು ಹಾಕಿ ಚಟಪಟ ಎಂದಮೇಲೆ ಹಸಿಮೆಣಸು, ಕರಿಬೇವು ಸೇರಿಸಿ ಕೈಯಾಡಿಸಿ.
ನಂತರ ಇದಕ್ಕೆ ಹೆಚ್ಚಿದ ಸೌತೆಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆರಸ ಸೇರಿಸಿ ಕೈಯಾಡಿಸಿ 3 - 4 ನಿಮಿಷ ಮುಚ್ಚಳ ಮುಚ್ಚದೆ ಬೇಯಿಸಿ, ಉರಿಯನ್ನು ಆಫ್ ಮಾಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)