ಮಾವಿನಹಣ್ಣಿನ ಸ್ಮೂತಿ / Mango Smoothie

Click here for English version.

ಮಾವು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಹಣ್ಣು. ಈ ವರ್ಷವಂತೂ ನಾವು ಮಾವಿನ ಸೀಜನ್ ನ ಸಂಪೂರ್ಣ ಉಪಯೋಗ ಪಡೆದುಕೊಳ್ಳುತ್ತಿದ್ದೇವೆಂದರೆ ಉತ್ಪ್ರೇಕ್ಷೆಯೇನಿಲ್ಲ! ಮನೆಯ ಬಳಿ ಅಂಗಡಿ, ಸುಪರ್ ಮಾರ್ಕೆಟ್ ಗಳಲ್ಲಿ ಸಿಗುವ ಹಣ್ಣುಗಳಷ್ಟೇ ಅಲ್ಲದೆ, ನಮ್ಮವರು ಮಾವು ಮೇಳಕ್ಕೆ ಹೋಗಿ, ಅಲ್ಲಿಂದ ಅನೇಕ ಬಗೆಯ ಮಾವಿನಹಣ್ಣುಗಳನ್ನು ತಂದಿದ್ದರು. ಹೀಗಾಗಿ ದಿನವೂ ಮನೆಯಲ್ಲಿ ಮಾವಿನ ಸೀಕರಣೆ, ಜ್ಯೂಸ್, ಮಿಲ್ಕ್ ಶೇಕ್, ಇತ್ಯಾದಿಗಳನ್ನು ತಯಾರಿಸಿ ಸವಿದೆವು.
ಕೆಲದಿನಗಳ ಹಿಂದೆ ಟಿವಿ ಅಡಿಗೆ ಷೋ ಒಂದರಲ್ಲಿ ಮಾವಿನಹಣ್ಣಿನ ಸ್ಮೂತಿ ತಯಾರಿಸುವುದನ್ನು ನೋಡಿದ್ದೆ. ಅದರಿಂದ ಪ್ರೇರಿತಳಾಗಿ ನಾನು ತಯಾರಿಸಿದ ಸ್ಮೂತಿ ರೆಸಿಪಿ ಇಲ್ಲಿದೆ..


ತಯಾರಿಸಲು ಬೇಕಾಗುವ ಸಮಯ: 10 - 15 ನಿಮಿಷಗಳು 
ಸ್ಮೂತಿ ತಣ್ಣಗಾಗಲು ಬೇಕಾಗುವ ಸಮಯ: 1 ಘಂಟೆ 
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಚೆನ್ನಾಗಿ ಕಳಿತ 1 ದೊಡ್ಡ ಮಾವಿನಹಣ್ಣು 
ಗಟ್ಟಿ ಮೊಸರು - 200 ml
ಹಾಲು - 50 ml (ಟಿಪ್ಸ್ ನೋಡಿ)
ನೀರು - 50ರಿಂದ 100 ml
ಸಕ್ಕರೆ - 8ರಿಂದ 10 ಚಮಚ (ರುಚಿಗೆ ತಕ್ಕಷ್ಟು)
ಚಿಟಿಕೆ ಉಪ್ಪು 

ಮಾಡುವ ವಿಧಾನ:
ಮಾವಿನಹಣ್ಣನ್ನು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಹೆಚ್ಚಿದ ಹಣ್ಣಿನ ಕಾಲುಭಾಗದಷ್ಟನ್ನು ಅಲಂಕಾರಕ್ಕೆ ತೆಗೆದಿಟ್ಟುಕೊಳ್ಳಿ.
ಉಳಿದ ಮುಕ್ಕಾಲುಭಾಗ ಮಾವಿನ ಹೋಳುಗಳನ್ನು ಮೊಸರು, ಸಕ್ಕರೆಯೊಡನೆ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ.
ಇದಕ್ಕೆ ಹಾಲು, ಚಿಟಿಕೆ ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಇನ್ನೊಂದು ಕಾಲು ನಿಮಿಷ ತಿರುವಿ, ಚೆನ್ನಾಗಿ ಮಿಕ್ಸ್ ಆಗುವಂತೆ ಮಾಡಿ. ರುಚಿ ನೋಡಿಕೊಂಡು ಸಿಹಿ ಬೇಕಿದ್ದರೆ ಹಾಕಿಕೊಳ್ಳಿ. 
ತಯಾರಾದ ಸ್ಮೂತಿಯನ್ನು ಫ್ರಿಜ್ ನಲ್ಲಿ 1 ಘಂಟೆ ಇಟ್ಟು ತಣ್ಣಗಾಗಲು ಬಿಡಿ.
ಸರ್ವಿಂಗ್ ಗ್ಲಾಸ್ ನ ತಳದಲ್ಲಿ ಸ್ವಲ್ಪ ಮಾವಿನ ಹೋಳುಗಳನ್ನು ಹರಡಿಕೊಂಡು, ಮೇಲಿನಿಂದ ನಿಧಾನವಾಗಿ ಸ್ಮೂತಿ ಮಿಶ್ರಣವನ್ನು ಗ್ಲಾಸ್ ನ ಮುಕ್ಕಾಲು ಭಾಗದವರೆಗೆ ಸುರಿಯಿರಿ.
ಮೇಲಿನಿಂದ ಒಂದು ಪದರು ಹೆಚ್ಚಿದ ಮಾವಿನ ಚೂರುಗಳನ್ನು ಸೇರಿಸಿ ಅಲಂಕರಿಸಿ ಸವಿಯಲು ಕೊಡಿ.


ಟಿಪ್ಸ್:
  • ಈ ಸ್ಮೂತಿಗೆ ಹಾಲು ಸೇರಿಸದೆಯೂ ಮಾಡಬಹುದು. ಮೊಸರು ಸ್ವಲ್ಪ ಹುಳಿ ಇದ್ದರೆ ಹಾಲು ಸೇರಿಸಿ ಮಾಡುವುದರಿಂದ ಹುಳಿ ಅಂಶ ಕಡಿಮೆಯಾಗುತ್ತದೆ.
  • ಸ್ಮೂತಿ ತಯಾರಿಸಲು ಮೊದಲೇ ಫ್ರಿಜ್ ನಲ್ಲಿಟ್ಟು ತಣ್ಣಗೆ ಮಾಡಿದ ಮಾವಿನಹಣ್ಣು ಮತ್ತು ಮೊಸರನ್ನು ಬಳಸಿದರೆ, ತಯಾರಿಸಿದ ತಕ್ಷಣ ಸವಿಯಬಹುದು.

ಕಾಮೆಂಟ್‌ಗಳು