ಅನ್ನದ ಕೇಸರಿಬಾತ್ / Rice Kesaribath

Click here for English version.

ನಮ್ಮೂರ ಕಡೆ ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಸಾಮಾನ್ಯವಾಗಿ ತಯಾರಿಸುವ ಸಿಹಿ ಇದು. ಅನ್ನಕ್ಕೆ ತುಪ್ಪ, ಸಕ್ಕರೆ, ಕೇಸರಿ ದಳಗಳು ಮುಂತಾದ ಸಾಮಗ್ರಿಗಳನ್ನು ಸೇರಿಸಿ ತಯಾರಿಸುವ ಈ ಕೇಸರಿ ಬಾತ್ ಬಹಳ ರುಚಿ! ದೊಡ್ಡ ಪ್ರಮಾಣದಲ್ಲಿ ಕೇಸರಿ ತಯಾರಿಸಲು ನುರಿತ ಜನರಿಂದ ಮಾತ್ರ ಸಾಧ್ಯ. ಆದರೆ ಸಣ್ಣ ಪ್ರಮಾಣದಲ್ಲಿ ತಯಾರಿಸುವುದಾದರೆ ಆರಾಮಾಗಿ ಯಾರು ಬೇಕಿದ್ದರೂ ತಯಾರಿಸಬಹುದು!
ಅಕ್ಕ ಮಾಡಿದ ಕೇಸರಿಬಾತ್ ನ್ನು ಅನೇಕ ಬಾರಿ ಸವಿದಿದ್ದರೂ ನಾನೆಂದೂ ಕೇಸರಿ ತಯಾರಿಸುವ ಸಾಹಸಕ್ಕೆ ಹೋಗಿರಲಿಲ್ಲ! ಊರಿಂದ ತಂದ ಫ್ರೆಶ್ ತುಪ್ಪ ಹಾಗೇ ಇತ್ತು, ಜೊತೆಗೆ ಕೇಸರಿ ದಳದ ಪ್ಯಾಕೆಟ್ ಕೂಡ ಮನೆಯಲ್ಲಿತ್ತು. ನಮ್ಮವರಿಗೆ ಕೇಸರಿಬಾತ್ ಎಂದರೆ ಬಹಳ ಇಷ್ಟ! ಹೀಗಾಗಿ ಅಮ್ಮನ ಮುಂದಾಳುತ್ವದಲ್ಲಿ ಕೇಸರಿಬಾತ್ ತಯಾರಿಸಿದೆವು. ಅಮ್ಮನಿಗೆ ಅನೇಕ ಬಾರಿ ಕೇಸರಿಬಾತ್ ತಯಾರಿಸಿ ಅಭ್ಯಾಸವಿರುವುದರಿಂದ ನಮ್ಮ ಪ್ರಯೋಗ ಫೇಲ್ ಆಗುವುದಿಲ್ಲವೆಂಬ ನಂಬಿಕೆಯಿತ್ತು. ನಾವಂದುಕೊಂಡಂತೆ ಕೇಸರಿಬಾತ್ ಬಹಳ ಚೆನ್ನಾಗಿಯೇ ಬಂತು.
ಕೇಸರಿ ಅಥವಾ ಕೇಸರಿಬಾತ್ ತಯಾರಿಸಲು ಸುವಾಸಿತ ಅಕ್ಕಿಯೇ ಬೇಕು. 'ಸಣ್ಣಕ್ಕಿ' ಅಥವಾ 'ಜೀರಾ ರೈಸ್'ನ್ನು ಬಳಸಿದರೆ ಉತ್ತಮ, ಅದು ಸಿಗದಿದ್ದರೆ ಬಾಸ್ಮತಿ ಅಕ್ಕಿಯನ್ನು ಬಳಸಬಹುದು. ಕೇಸರಿಬಾತ್ ತಯಾರಿಸುವ ವಿಧಾನ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 45 ನಿಮಿಷಗಳು
ಸರ್ವಿಂಗ್ಸ್: 5 - 6 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಜೀರಾ ರೈಸ್ (ಅಥವಾ ಬಾಸ್ಮತಿ ರೈಸ್) - 250 ಗ್ರಾಂ
ಕೇಸರಿ ದಳ - 3/4 ಗ್ರಾಂ  
ಸಕ್ಕರೆ - 375 ಗ್ರಾಂ
ಶುದ್ಧ ತುಪ್ಪ - 250 ಗ್ರಾಂ (ಸ್ವಲ್ಪ ಕಡಿಮೆ ಬಳಸಿದರೂ ಆಗುತ್ತದೆ)
ಲವಂಗ - 2
ಹಾಲು 5 - 6 ಚಮಚ
ನಿಂಬೆರಸ - 4 1/2 ಚಮಚ
ಉಪ್ಪು - 1 ಚಮಚ 
ಗೋಡಂಬಿ - 10
ಒಣದ್ರಾಕ್ಷಿ 25 - 30


ಮಾಡುವ ವಿಧಾನ:
ಉದುರಾಗಿ ಅನ್ನ ಮಾಡಿಕೊಳ್ಳಿ. ಅಕ್ಕಿ ಬೇಯಿಸುವಾಗ 1 ಚಮಚ ತುಪ್ಪ ಸೇರಿಸಿ ಬೇಯಿಸಿ. ಅನ್ನದ ಅಗುಳು ಚೆನ್ನಾಗಿ ಬೆಂದಿರಬೇಕು, ಆದರೆ ಅನ್ನ ಮುದ್ದೆಯಾಗಂತೆ ಎಚ್ಚರವಹಿಸಿ.
ಬೇಯಿಸಿದ ಅನ್ನದಲ್ಲಿ ಹೆಚ್ಚಿನ ನೀರು ಏನಾದರೂ ಉಳಿದಿದ್ದರೆ ನೀರನ್ನು ತೆಗೆದುಬಿಡಿ. ಅನ್ನವನ್ನು ಒಂದು ಪ್ಲೇಟ್ ನಲ್ಲಿ ಹರವಿ 5 ನಿಮಿಷ ಆರಲು ಬಿಡಿ.
ಹಾಲನ್ನು ಚೆನ್ನಾಗಿ ಕಾಯಿಸಿಕೊಂಡು ಅದರಲ್ಲಿ ಕೇಸರಿ ದಳಗಳನ್ನು ನೆನೆಸಿ 10 ನಿಮಿಷ ಇಡಿ.
ಲವಂಗವನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಗೋಡಂಬಿಯನ್ನು ಚೂರುಮಾಡಿಕೊಳ್ಳಿ.
ನಿಂಬೆರಸ ಮತ್ತು ಉಪ್ಪನ್ನು ಮಿಕ್ಸ್ ಮಾಡಿಟ್ಟುಕೊಳ್ಳಿ.
ಒಂದು ಹರವಾದ ಪಾತ್ರೆಯಲ್ಲಿ ಅನ್ನ, ಸಕ್ಕರೆ, ತುಪ್ಪ ಇಷ್ಟನ್ನೂ ಹಾಕಿಕೊಂಡು ಸ್ವಲ್ಪ ದೊಡ್ಡ ಉರಿಯಲ್ಲಿ ತಳಹತ್ತದಂತೆ ಕೈಯಾಡಿಸುತ್ತಿರಿ.
ಮಿಶ್ರಣ ಕುದಿಯತೊಡಗಿದಾಗ ಹಾಲಿನಲ್ಲಿ ನೆನೆಸಿದ ಕೇಸರಿ, ಉಪ್ಪು, ನಿಂಬೆರಸ ಸೇರಿಸಿ ಬಿಡದೆ ಕೈಯಾಡಿಸಿ.
ಮಿಶ್ರಣ ತುಪ್ಪವನ್ನೆಲ್ಲ ಹೀರಿಕೊಳ್ಳತೊಡಗಿದಾಗ ಉರಿಯನ್ನು ಕಡಿಮೆಮಾಡಿ ಮೀಡಿಯಮ್ ಗೆ ತನ್ನಿ.
ಈಗ ಕೇಸರಿ ಮಿಶ್ರಣಕ್ಕೆ ದ್ರಾಕ್ಷಿ, ಪುಡಿಮಾಡಿದ ಲವಂಗ ಸೇರಿಸಿ ಕೈಯಾಡಿಸಿ.
ಮಿಶ್ರಣ ತುಪ್ಪವನ್ನು ಉಗುಳತೊಡಗಿದಾಗ ಉರಿ ಆಫ್ ಮಾಡಿ ಗೇರುಬೀಜದ ಚೂರುಗಳನ್ನು ಸೇರಿಸಿ ಕೈಯಾಡಿಸಿ, ಮುಚ್ಚಿಡಿ.
10 ನಿಮಿಷ ಸೆಟ್ ಆಗಲು ಬಿಟ್ಟು, ಬಿಸಿ ಬಿಸಿ ಕೇಸರಿಯನ್ನು ಸವಿದುನೋಡಿ!


ಟಿಪ್ಸ್:
  • ಕೇಸರಿಬಾತ್ ತಯಾರಿಸಲು ಕೇಸರಿ ದಳವನ್ನೇ ಬಳಸಿ. ಕೃತಕ ಬಣ್ಣಗಳನ್ನು ಬಳಸಿದರೆ ನಿಜವಾದ ಕೇಸರಿಬಾತ್ ನ ರುಚಿ ಬರುವುದಿಲ್ಲ. ಕೇಸರಿ ದಳಗಳನ್ನು ಸೇರಿಸುವುದರಿಂದ ಇದಕ್ಕೆ ಬಣ್ಣದ ಜೊತೆಗೆ ಒಂದು ವಿಶೇಷ ಪರಿಮಳವೂ ಬರುತ್ತದೆ.
  • ಕೇಸರಿಬಾತ್ ಗೆ ಫ್ರೆಶ್ ಹಾಗೂ ಶುದ್ಧ ತುಪ್ಪವನ್ನೇ ಬಳಸಿ. ತುಪ್ಪ ಸ್ವಲ್ಪ ವಾಸನೆ ಇದ್ದರೂ ಇದರ ರುಚಿ ಕೆಟ್ಟುಹೋಗುತ್ತದೆ.
  • ಕೇಸರಿಬಾತ್ ಮಿಶ್ರಣ ಕುದಿಯತೊಡಗುವವರೆಗೆ ದೊಡ್ಡ ಉರಿಯಲ್ಲಿ ಬಿಸಿಮಾಡುವುದು ಅತ್ಯವಶ್ಯ. ಕಡಿಮೆ ಉರಿಯಲ್ಲಿ ಬಿಸಿಮಾಡಿದರೆ ಕೇಸರಿಬಾತ್ ಮೇಣದಂತಾಗುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)