ಹೀರೆಕಾಯಿ ತಂಬ್ಳಿ / Ridge Gourd Tambli

Click here for English version.

ನಮ್ಮ ಮನೆಯಲ್ಲಿ ತಯಾರಿಸುವ ತಂಬ್ಳಿಗಳಲ್ಲಿ ಇದೂ ಒಂದು. ಹೀರೆಕಾಯಿ ಸಾಮಾನ್ಯವಾಗಿ ಎಲ್ಲಾ ಸೀಜನ್ ನಲ್ಲೂ ದೊರೆಯುವ ತರಕಾರಿ. ಇದನ್ನು ಬಳಸಿ ಸಿಹಿ ತಂಬ್ಳಿ ಮತ್ತು ಸಪ್ಪೆ ತಂಬ್ಳಿ ಎರಡನ್ನೂ ತಯಾರಿಸಬಹುದು. ನಾನು ಸಿಹಿ ಪ್ರಿಯಳಾದ್ದರಿಂದ ಹೆಚ್ಚಾಗಿ ತಯಾರಿಸುವುದು ಸಿಹಿ ತಂಬ್ಳಿಯನ್ನೇ!
ಅಮ್ಮನಿಂದ ಕಲಿತ ಹೀರೆಕಾಯಿ ಸಪ್ಪೆ ತಂಬ್ಳಿ ರೆಸಿಪಿ ಇಲ್ಲಿದೆ. ಸಿಹಿ ತಂಬ್ಳಿ ತಯಾರಿಸುವ ವಿಧಾನವನ್ನು ಇನ್ಯಾವಾಗಲಾದರೂ ನೋಡೋಣ!


ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಸರ್ವಿಂಗ್ಸ್: 5 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಹೀರೆಕಾಯಿ - ಮೀಡಿಯಂ ಹೀರೆಕಾಯಿಯ ಅರ್ಧ ಭಾಗ
ಹಸಿಮೆಣಸು - ಒಂದು ಚಿಕ್ಕ ಚೂರು
ಎಳ್ಳು - 1 ಚಮಚ
ಜೀರಿಗೆ - 1/2 ಚಮಚ
ತೆಂಗಿನತುರಿ - 1 ಕಪ್
ಮಜ್ಜಿಗೆ - 1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಸಕ್ಕರೆ - 1/2 ಚಮಚ
ನೀರು - 2 ಕಪ್
ಒಗ್ಗರಣೆಗೆ: ಎಣ್ಣೆ - 1 ಚಮಚ, ಸಾಸಿವೆ - 1 ಚಮಚ

ಮಾಡುವ ವಿಧಾನ:
ಹೀರೆಕಾಯಿಯ ಸಿಪ್ಪೆ ತೆಗೆದು, ಸಣ್ಣಗೆ ಹೆಚ್ಚಿಕೊಳ್ಳಿ. ಇದಕ್ಕೆ 1 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಸೇರಿಸಿ 10 ನಿಮಿಷ ಅಥವಾ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ.
ಬೇಯಿಸಿಕೊಂಡ ಹೀರೆ ಹೋಳುಗಳನ್ನು ನೀರಿನಿಂದ ಬೇರ್ಪಡಿಸಿ. ಆ ನೀರನ್ನು ಹಾಗೇ ಇಟ್ಟುಕೊಂಡು ರುಬ್ಬುವಾಗ ಬಳಸಿ.
ಒಗ್ಗರಣೆ ಸೌಟಿನಲ್ಲಿ ಅರ್ಧ ಚಮಚ ಎಣ್ಣೆ ಕಾಯಿಸಿ, ಎಳ್ಳು ಮತ್ತು ಜೀರಿಗೆ ಮತ್ತು ಹಸಿಮೆಣಸನ್ನು ಹುರಿದುಕೊಳ್ಳಿ.
ಹುರಿದ ಸಾಮಗ್ರಿಗಳನ್ನು ಬೇಯಿಸಿದ ಹೀರೆ ಮತ್ತು ತೆಂಗಿನತುರಿಯೊಡನೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಹೀರೆಕಾಯಿ ಬೇಯಿಸಿದ ನೀರನ್ನು ಬಳಸಿ.
ರುಬ್ಬಿದ ಮಿಶ್ರಣವನ್ನು ಸರ್ವಿಂಗ್ ಬೌಲ್ ಗೆ ಹಾಕಿ ಮಜ್ಜಿಗೆ ಸೇರಿಸಿ ಹದಮಾಡಿ. ತಂಬ್ಳಿ ದಪ್ಪಗೆನಿಸಿದರೆ ಸ್ವಲ್ಪ ನೀರು ಸೇರಿಸಿ ತೆಳ್ಳಗೆ ಮಾಡಿ.
ತಯಾರಾದ ತಂಬ್ಳಿಗೆ ಎಣ್ಣೆ, ಸಾಸಿವೆಯ ಒಗ್ಗರಣೆ ಮಾಡಿ ಅನ್ನದೊಡನೆ ಸರ್ವ್ ಮಾಡಿ.

ಕಾಮೆಂಟ್‌ಗಳು