ಫ್ಲಾಕ್ಸ್ ಸೀಡ್ಸ್ ಪುಡಿ | Flax Seeds Powder (Podi)

Click here for English version.

ನಾನು ಎಗ್ ಲೆಸ್ ಕೇಕ್ ತಯಾರಿಸುವುದಕ್ಕೆ ಫ್ಲಾಕ್ಸ್ ಸೀಡ್ಸ್ ಬಳಸಬಹುದೆಂದು ಅನೇಕ ಕಡೆ ಓದಿದ್ದೆ. ಆದರೆ ಫ್ಲಾಕ್ಸ್ ಸೀಡ್ಸ್ ಕೊಳ್ಳಲು ಹೋದರೆ ಇಲ್ಲಿ ಎಲ್ಲೂ ಸಿಕ್ಕಿರಲಿಲ್ಲ. ನಮ್ಮೂರು ಶಿರಸಿಗೆ ಹೋದಾಗ ಅಲ್ಲಿ ಒಂದು ಅಂಗಡಿಯಲ್ಲಿ ಫ್ಲಾಕ್ಸ್ ಸೀಡ್ಸ್ ಕೊಂಡೆವು. ಕೊನೆಗೆ ಕೇಳಿದರೆ, ಅಲ್ಲೆಲ್ಲಾ ಫ್ಲಾಕ್ಸ್ ಸೀಡ್ಸ್ ಆರಾಮಾಗಿ ಸಿಗುವುದಂತೆ! ಫ್ಲಾಕ್ಸ್ ಸೀಡ್ಸ್ ಗೆ ಕನ್ನಡದಲ್ಲಿ ಅಗಸೆ ಬೀಜವೆಂದು ಹೇಳುತ್ತಾರೆ. ಸಸ್ಯಾಹಾರಿಗಳಿಗೆ ಆಹಾರದಲ್ಲಿ ದೊರೆಯದ, ಆದರೆ ನಮ್ಮ ದೇಹಕ್ಕೆ ಅತ್ಯವಶ್ಯವಾದ ಒಮೆಗಾ - 3 ಫ್ಯಾಟಿ ಆಸಿಡ್ಸ್ ಇದರಲ್ಲಿ ಹೇರಳವಾಗಿರುತ್ತದೆ. ಅಲ್ಲದೆ ಫ್ಲಾಕ್ಸ್ ಸೀಡ್ಸ್ ಕೊಲೆಸ್ಟರಾಲ್ ನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ. ಹೀಗಾಗಿ ಇದರ ಸೇವನೆ ಅತ್ಯವಶ್ಯ.
ನಾವು ಫ್ಲಾಕ್ಸ್ ಸೀಡ್ಸ್ ನ ಪುಡಿ ಮಾಡಿಟ್ಟುಕೊಂಡು ದಿನವೂ ಊಟದೊಡನೆ ಬಳಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ಫ್ಲಾಕ್ಸ್ ಸೀಡ್ಸ್ ನ್ನು ಹುರಿದುಕೊಂಡು ಅದಕ್ಕೆ ಉಪ್ಪು, ಖಾರ ಇತ್ಯಾದಿ ಸೇರಿಸಿ ಪುಡಿಮಾಡಿಕೊಂಡರೆ ನಾಲಿಗೆಗೂ ರುಚಿ ಎನ್ನಿಸುತ್ತದೆ. ಅಲ್ಲದೆ ಈ ಪುಡಿಯನ್ನು ಮೊಸರಿನೊಡನೆ ಮಿಕ್ಸ್ ಮಾಡಿಕೊಂಡು ರೊಟ್ಟಿ, ಚಪಾತಿಯೊಡನೆ ಸೈಡ್ ಡಿಶ್ ಆಗಿಯೂ ಬಳಸಬಹುದು..


ತಯಾರಿಸಲು ಬೇಕಾಗುವ ಸಮಯ: 15 - 20 ನಿಮಿಷಗಳು  
ಈ ಅಳತೆಯಿಂದ ಸುಮಾರು 1 1/4 ಕಪ್ ನಷ್ಟು ಪುಡಿ ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು:
ಫ್ಲಾಕ್ಸ್ ಸೀಡ್ಸ್ (ಅಗಸೆ ಬೀಜ) - 3/4 ಕಪ್ 
ಒಣಮೆಣಸು 1 - 2 (ಖಾರಕ್ಕೆ ತಕ್ಕಂತೆ)
ಬೆಳ್ಳುಳ್ಳಿ - 1 ಅಥವಾ 2
ರುಚಿಗೆ ತಕ್ಕಷ್ಟು ಉಪ್ಪು 


ಮಾಡುವ ವಿಧಾನ:
ಒಂದು ದಪ್ಪ ತಳದ ಬಾಣಲೆಯಲ್ಲಿ ಫ್ಲಾಕ್ಸ್ ಸೀಡ್ಸ್, ಬೆಳ್ಳುಳ್ಳಿ ಮತ್ತು ಒಣಮೆಣಸನ್ನು ಒಟ್ಟಿಗೆ ಹುರಿಯಲಿಡಿ.
ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತ ಫ್ಲಾಕ್ಸ್ ಸೀಡ್ಸ್ ಚಟಪಟ ಎಂದು ಸಿಡಿಯುವವರೆಗೆ ಹುರಿಯಿರಿ.
ತಣ್ಣಗಾದ ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ.
ತಯಾರಾದ ಫ್ಲಾಕ್ಸ್ ಸೀಡ್ಸ್ ಪುಡಿಯನ್ನು ಗಾಳಿಯಾಡದಂತೆ ಶೇಖರಿಸಿಟ್ಟು ಬಳಸಿ.
1 ಚಮಚದಷ್ಟು ಫ್ಲಾಕ್ಸ್ ಸೀಡ್ಸ್ ಪುಡಿಯನ್ನು ಊಟಕ್ಕೆ ಹಾಕಿಕೊಂಡು ಅನ್ನದೊಡನೆ ಮಿಕ್ಸ್ ಮಾಡಿ ತಿನ್ನಬಹುದು. ಅಥವಾ ಸ್ವಲ್ಪ ಮೊಸರಿನೊಡನೆ ಮಿಕ್ಸ್ ಮಾಡಿಕೊಂಡು ರೊಟ್ಟಿ, ಚಪಾತಿಯೊಡನೆ ಸೈಡ್ ಡಿಶ್ ನಂತೆ ಬಳಸಬಹುದು.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)