ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ | Spinach Masala Roti

Click here for English version.

ನಮ್ಮ ಮನೆಯ ಹತ್ತಿರ ಒಂದು ತರಕಾರಿ ಅಂಗಡಿಯಿದೆ. ತರಕಾರಿಗಳು ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಬಗೆಬಗೆಯ ಸೊಪ್ಪುಗಳು ಬಹಳ ಫ್ರೆಶ್ ಆಗಿ ಸಿಗುತ್ತವೆ. ಸಂಜೆಯ ವೇಳೆಯಲ್ಲಿ ಹೋದರಂತೂ ಆಗ ತಾನೇ ಕಿತ್ತು ತಂದ ಸೊಪ್ಪಿನ ಕಟ್ಟುಗಳು ಮಾರಾಟಕ್ಕೆ ಸಿದ್ಧವಾಗಿರುತ್ತವೆ. ನಮ್ಮ ಮನೆಯಲ್ಲಿ ಇತ್ತೀಚಿಗೆ ವಾರಕ್ಕೆ 3 - 4 ದಿನ ಅಲ್ಲಿಂದ ಸೊಪ್ಪು ತರುವುದು ಅಭ್ಯಾಸವಾಗಿದೆ. ಅದರಲ್ಲೂ ನಮ್ಮವರು ಹೆಚ್ಚಾಗಿ ತರುವುದು ಪಾಲಕ್ ಸೊಪ್ಪು. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ಅದನ್ನು ವಾರದಲ್ಲಿ 3 ದಿನವಾದರೂ ತಿನ್ನಲೇಬೇಕೆಂಬುದು ಅವರ ನಿಯಮ. ಪಾಲಕ್ ಸೊಪ್ಪಿನ ಗ್ರೇವಿ, ಪಲ್ಯಗಳನ್ನು ತಿಂದು ಬೇಜಾರಾಗಿ ಬೇರೆ ಅಡಿಗೆಗಳನ್ನು ಹುಡುಕುತ್ತಿದ್ದಾಗ ಸಿಕ್ಕಿದ್ದು ಈ ರೊಟ್ಟಿಯ ರೆಸಿಪಿ! 
ಈ ರೊಟ್ಟಿಯನ್ನು ನಾನು ಹಳೆಯ ಕನ್ನಡ ಮ್ಯಾಗಜಿನ್ ಒಂದರಿಂದ ಕಲಿತದ್ದು. ನಮ್ಮ ಮನೆಯಲ್ಲಿ ಆಗಲೇ ಸುಮಾರು ಬಾರಿ ಈ ರೊಟ್ಟಿ ತಯಾರಿಸಿ ಸೈ ಅನ್ನಿಸಿಕೊಂಡಾಗಿದೆ :) ಈ ರೊಟ್ಟಿಗೆ ಪಾಲಕ್ ಸೊಪ್ಪಿನ ಬದಲು ಮೆಂತ್ಯ ಅಥವಾ ಸಬ್ಬಸಿಗೆ ಸೊಪ್ಪನ್ನು ಬಳಸಿದರೂ ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 30 - 35 ನಿಮಿಷಗಳು 
ಹಿಟ್ಟು ನೆನೆಯಲು ಬೇಕಾಗುವ ಸಮಯ: 30 ನಿಮಿಷಗಳು 
ಈ ಅಳತೆಯಿಂದ 8 ರೊಟ್ಟಿಗಳನ್ನು ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು:
ಪಾಲಕ್, ಮೆಂತ್ಯ ಅಥವಾ ಸಬ್ಬಸಿಗೆ ಸೊಪ್ಪು - 1 1/2 ಕಟ್ಟು 
ಗೋಧಿಹಿಟ್ಟು - 2 ಕಪ್ 
ಅಕ್ಕಿಹಿಟ್ಟು - 1/2 ಕಪ್ 
ಕಡಲೆಹಿಟ್ಟು - 1 ಕಪ್ 
ಬೇಕಿಂಗ್ ಪೌಡರ್ - 1 ಚಿಟಿಕೆ 
ಅರಿಶಿನ ಪುಡಿ - 1/4 ಚಮಚ 
ಹಸಿಮೆಣಸು ಶುಂಠಿ ಪೇಸ್ಟ್ - 1 ಚಮಚ 
ರುಚಿಗೆ ತಕ್ಕಷ್ಟು ಉಪ್ಪು 
ಎಣ್ಣೆ - ಸ್ವಲ್ಪ 


ಮಾಡುವ ವಿಧಾನ:
ಸೊಪ್ಪನ್ನು ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ.
ಗೋಧಿಹಿಟ್ಟು, ಅಕ್ಕಿಹಿಟ್ಟು, ಕಡ್ಲೆಹಿಟ್ಟು, ಬೇಕಿಂಗ್ ಪೌಡರ್, ಅರಿಶಿನ ಪುಡಿ ಇಷ್ಟನ್ನೂ ಮಿಕ್ಸ್ ಮಾಡಿಕೊಂಡು 2 ಚಮಚ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ.
ಹಿಟ್ಟಿನ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹಸಿಮೆಣಸು - ಶುಂಠಿ ಪೇಸ್ಟ್ ಸೇರಿಸಿ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳಿ.   
ಕಲಸಿದ ಹಿಟ್ಟನ್ನು ಮುಚ್ಚಿಟ್ಟು ಅರ್ಧ ಘಂಟೆ ನೆನೆಯಲು ಬಿಡಿ. ನಂತರ ಹಿಟ್ಟಿನಿಂದ ನಿಂಬೆಗಾತ್ರದ ಉಂಡೆಗಳನ್ನು ಮಾಡಿಕೊಂಡು ತೆಳ್ಳಗೆ ರೊಟ್ಟಿಯಂತೆ ಲಟ್ಟಿಸಿ. ಲಟ್ಟಿಸುವಾಗ ಸ್ವಲ್ಪ ಗೋಧಿಹಿಟ್ಟನ್ನು ಬಳಸಬಹುದು.
ಲಟ್ಟಿಸಿದ ರೊಟ್ಟಿಗಳನ್ನು ಕಾದ ತವಾದ ಮೇಲೆ ಎಣ್ಣೆ ಸವರಿ ಎರಡೂ ಕಡೆ ಬೇಯಿಸಿ. 
ಬಿಸಿಬಿಸಿ ರೊಟ್ಟಿಯನ್ನು ನಿಮ್ಮಿಷ್ಟದ ಸೈಡ್ ಡಿಶ್ ನೊಡನೆ ಸರ್ವ್ ಮಾಡಿ.
ಈ ರೊಟ್ಟಿ ತಣ್ಣಗಾದಮೇಲೆಯೂ ಮೆತ್ತಗಿರುವುದರಿಂದ ಟಿಫನ್ ಬಾಕ್ಸ್ ಗೆ ಒಯ್ಯಲೂ ಚೆನ್ನಾಗಿರುತ್ತದೆ.


ಕಾಮೆಂಟ್‌ಗಳು

  1. ಪಾಲಕ್ ರೊಟ್ಟಿ ನಮ್ಮ ಮನೆಯಲ್ಲಿ ಎಲ್ಲರಿಗೂ ತು೦ಬಾ ಇಷ್ಟ.ಕೆಲವೊಮ್ಮೆ ಹಿಟ್ಟು ಕಲೆಸುವಾಗ, ಜೊತೆ ಮೆತ್ತಗೆ ಬೇಯಿಸಿದ ಆಲೂಗಡ್ಡೆ ಹಾಕುತ್ತೇನೆ.ಅದೂ ಕೂಡಾ ತು೦ಬಾ ಚೆನ್ನಾಗಿರುತ್ತದೆ. :)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)