ಹಾಲುಗುಂಬಳಕಾಯಿ (ಸೋರೆಕಾಯಿ) ಪಲ್ಯ | Bottle Gourd Palya (Spiced Bottlegourd)

Click here for English version.

ತರಕಾರಿ ಕೊಳ್ಳಲು ರಿಲೈಯನ್ಸ್ ಫ್ರೆಶ್ ಗೆ ಹೋದಾಗ ನಾನು ಸಾಮಾನ್ಯವಾಗಿ ಹಾಲುಗುಂಬಳ (ಸೋರೆ)ಕಾಯಿಯನ್ನು ತರುತ್ತಿರುತ್ತೇನೆ. ನಾವೆಲ್ಲ ಚಿಕ್ಕವರಿದ್ದಾಗ ವರ್ಷದ ಯಾವುದೋ ಒಂದು ಸೀಜನ್ ನಲ್ಲಿ ಮನೆಯ ಹಿತ್ತಿಲಲ್ಲಿ ಹಾಲುಗುಂಬಳವನ್ನು ಬೆಳೆಯುತ್ತಿದ್ದರು ಮತ್ತು ಆ ಸೀಜನ್ ನಲ್ಲಿ ಮಾತ್ರ ಹಾಲುಗುಂಬಳದ ಅಡಿಗೆ! ಆದರೆ ಈಗ ಮಾರ್ಕೆಟ್ ನಲ್ಲಿ ಎಲ್ಲಾ ಕಾಲದಲ್ಲೂ ಹಾಲುಗುಂಬಳಕಾಯಿ ಸಿಗುವುದರಿಂದ ಯಾವಾಗ ಬೇಕಿದ್ದರೂ ಹಾಲುಗುಂಬಳದ ಅಡಿಗೆಗಳನ್ನು ಸವಿಯಬಹುದು.
ಫ್ರಿಜ್ ನಲ್ಲಿ ಕಳೆದ ವಾರ ತಂದಿದ್ದ ಹಾಲುಗುಂಬಳಕಾಯಿ ಅರ್ಧ ಭಾಗ ಹಾಗೇ ಉಳಿದಿತ್ತು. ಅಮ್ಮನ ಬಳಿ ಏನು ಅಡಿಗೆ ಮಾಡಬಹುದೆಂದು ಕೇಳಿದಾಗ ಅವರು ಪಲ್ಯ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ಸ್ವಲ್ಪ ಖಾರ, ಸ್ವಲ್ಪ ಸಿಹಿಯಾಗಿರುವ ಈ ಪಲ್ಯ ಅನ್ನ, ರೊಟ್ಟಿ, ಚಪಾತಿ ಎಲ್ಲದರೊಡನೆಯೂ ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 30 - 35 ನಿಮಿಷಗಳು
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಅರ್ಧ ಹಾಲುಗುಂಬಳಕಾಯಿ (ಸೋರೆಕಾಯಿ)
ಎಣ್ಣೆ 4 - 5 ಚಮಚ
ಉದ್ದಿನಬೇಳೆ - 1 ಚಮಚ
ಸಾಸಿವೆ - 1 ಚಮಚ
ಇಂಗು - ಚಿಟಿಕೆ
ಅರಿಶಿನ - ಚಿಟಿಕೆ
ಕರಿಬೇವು - 1 ಎಸಳು 
ಸಾಂಬಾರ್ ಪುಡಿ - 1 1/4 ಚಮಚ
ಆಮ್ ಚೂರ್ ಪೌಡರ್ - 1/2 ಚಮಚ ಅಥವಾ ರುಚಿಗೆ ತಕ್ಕಷ್ಟು
ಸಕ್ಕರೆ - 1 1/2 ಚಮಚ ಅಥವಾ ರುಚಿಗೆ ತಕ್ಕಷ್ಟು
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
ಹಾಲುಗುಂಬಳಕಾಯಿಯ ಸಿಪ್ಪೆ ತೆಗೆದು, ಸಣ್ಣಗೆ ಹೆಚ್ಚಿಕೊಳ್ಳಿ.
ಬಾಣಲಿಯಲ್ಲಿ ಎಣ್ಣೆ ಕಾಯಿಸಿ ಉದ್ದಿನಬೇಳೆ, ಸಾಸಿವೆ, ಇಂಗು, ಅರಿಶಿನ ಹಾಕಿ ಒಗ್ಗರಣೆ ಮಾಡಿ ಕರಿಬೇವಿನ ಸೊಪ್ಪು, ಸಾಂಬಾರ್ ಪುಡಿ ಸೇರಿಸಿ ಕೈಯಾಡಿಸಿ.
ಇದಕ್ಕೆ ಹೆಚ್ಚಿದ ಹಾಲುಗುಂಬಳಕಾಯಿ ಹೋಳುಗಳನ್ನು ಸೇರಿಸಿ ಮಿಕ್ಸ್ ಮಾಡಿ, 3 ಕಪ್ ನಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ ಹೋಳುಗಳು ಮೆತ್ತಗಾಗುವವರೆಗೆ ಬೇಯಿಸಿ.
ಪಲ್ಯದ ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತಿರಿ. ಬೇಕಿದ್ದರೆ ಇನ್ನೂ ಸ್ವಲ್ಪ ನೀರು ಸೇರಿಸಿ.
ಹೋಳುಗಳು ಬೆಂದು ಮೆತ್ತಗಾದಾಗ ರುಚಿಗೆ ತಕ್ಕಷ್ಟು ಉಪ್ಪು, ಆಮ್ ಚೂರ್ ಪೌಡರ್, ಸಕ್ಕರೆ ಸೇರಿಸಿ ಕೈಯಾಡಿಸಿ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ ಇಳಿಸಿ.
ರುಚಿಕರವಾದ ಪಲ್ಯವನ್ನು ಅನ್ನ, ಚಪಾತಿ ಅಥವಾ ರೊಟ್ಟಿಯೊಡನೆ ಸರ್ವ್ ಮಾಡಿ.


ಟಿಪ್ಸ್:
  • ಪಲ್ಯಕ್ಕೆ ತೆಂಗಿನತುರಿ ಬೇಕಿದ್ದರೆ ಸೇರಿಸಬಹುದು. ತೆಂಗಿನತುರಿ ಸೇರಿಸುವುದಾದರೆ ಕೊನೆಯಲ್ಲಿ ಸೇರಿಸಿ 2 ನಿಮಿಷ ಬಿಸಿಮಾಡಿ ಉರಿ ಆಫ್ ಮಾಡಿ.
  • ನಾನು ಈ ಪಲ್ಯಕ್ಕೆ ಮನೆಯಲ್ಲೇ ತಯಾರಿಸಿದ ಸಾಂಬಾರ್ ಪೌಡರ್ ನ್ನು ಬಳಸಿದ್ದೇನೆ. ಇದರ ಬದಲು ನಿಮ್ಮಿಷ್ಟದ ಇತರ ಯಾವುದೇ ಸಾಂಬಾರ್ ಪುಡಿಯನ್ನು ಬಳಸಬಹುದು.

ಕಾಮೆಂಟ್‌ಗಳು