ಹಲಸಿನ ಹಣ್ಣಿನ ಕಡುಬು (ಇಡ್ಲಿ) | Jack Fruit Kadubu (Idli)

Click here to read in English.


ಬೇಸಿಗೆ ಮುಗಿದು ಮಳೆಗಾಲ ಶುರುವಾಗುವ ಸಮಯ ಬಂದರೆ ಮಲೆನಾಡಿನಲ್ಲಿ ಹಲಸಿನ ಹಬ್ಬ. ಬೇಸಿಗೆಯಲ್ಲಿ ವರ್ಷಕ್ಕಾಗುವಷ್ಟು ಹಲಸಿನ ಕಾಯಿಯ ಚಿಪ್ಸ್, ಹಪ್ಪಳ ಇತ್ಯಾದಿಗಳನ್ನು ತಯಾರಿಸಿಟ್ಟುಕೊಳ್ಳುವ ಜನರು ಮಳೆಗಾಲದಲ್ಲಿ ಹಲಸಿನ ಹಣ್ಣಿನ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಕೆಲವರು  ಹಲಸಿನ ಪಲ್ಪ್ ನ್ನು ಶೇಖರಿಸಿ ಫ್ರಿಜ್ ನಲ್ಲಿಟ್ಟುಕೊಂಡು ತಮಗೆ ಬೇಕೆನಿಸಿದಾಗಲೆಲ್ಲ ಕಡುಬು, ಇತ್ಯಾದಿ ಖಾದ್ಯಗಳನ್ನು ತಯಾರಿಸುವುದೂ ಉಂಟು. ಮಳೆಗಾಲದ ಕೊನೆಯಲ್ಲಿ ಊರಿಗೆ ಬಂದು ನಾನು ಎರಡ್ಮೂರು ಕಡುಬಿನ ಸವಿ ನೋಡಿದ್ದಾಯಿತು.
ನಾನು ಬೆಂಗಳೂರಿನಲ್ಲಿ ಹಲಸಿನ ಕಡುಬು ಮಾಡಿದ್ದಾಗ ಬ್ಲಾಗ್ ನಲ್ಲಿ ಅದರ ರೆಸಿಪಿ ಹಾಕಬೇಕೆಂದು ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದೆ. ಆದರೆ ಕಡುಬು ತಯಾರಾದ ನಂತರ ಕಾರಣಾಂತರಗಳಿಂದ ಫೋಟೋ ತೆಗೆಯಲು ಸಾಧ್ಯವಾಗಿರಲಿಲ್ಲ. ಅಮ್ಮನ ಮನೆಯಲ್ಲಿ ಕಡುಬು ಮಾಡುವಾಗ ಈ ವಿಷಯ ಹೇಳಿದಾಗ ಅವರು ಇಲ್ಲಿ ಮಾಡುವ ಕಡುಬಿನ ಫೋಟೋ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಹೀಗಾಗಿ ಎರಡು ಬಾರಿ ಕಡುಬು ಮಾಡುವಾಗ ತೆಗೆದ ಫೋಟೋಗಳು ಇಲ್ಲಿ ಸೇರಿಕೊಂಡಿವೆ.
ಹಲಸಿನ ಕಡುಬನ್ನು ಇಡ್ಲಿಯಂತೆ ಹುಯಿದು ತಯಾರಿಸುವುದು ಈಗೆಲ್ಲ ಹೆಚ್ಚಾಗಿ ಬಳಕೆಯಲ್ಲಿರುವ ವಿಧಾನ. ಹಳ್ಳಿಗಳಲ್ಲಿ ಬಾಳೆ ಎಲೆಯ ಕೊಟ್ಟೆಗಳಲ್ಲಿ ಕಡುಬಿನ ಹಿಟ್ಟನ್ನು ತುಂಬಿ ಬಿಗಿಯಾಗಿ ಸೀಲ್ ಮಾಡಿ ದೊಡ್ಡ ಕಡಾಯಿಗಳಲ್ಲಿ ಬೇಯಿಸುತ್ತಾರೆ. ಇಡ್ಲಿಯಂತೆ ತಯಾರಿಸುವ ಕಡುಬಿಗಿಂತ ಬಾಳೆಯೆಲೆಯಲ್ಲಿ ಕಟ್ಟಿ ಬೇಯಿಸುವ ಕಡುಬು ಹೆಚ್ಚು ಹೆಚ್ಚು ರುಚಿ!
ಇನ್ನೊಂದು ವಿಷಯ, ನಾನು ಸದ್ಯಕ್ಕೆ ಅಮ್ಮನ ಮನೆಯಲ್ಲಿರುವುದರಿಂದ ಇಂಟರ್ನೆಟ್ ಬಳಕೆ ಮಾಡುವುದು ಕಡಿಮೆಯಾಗಿದೆ. ಹೀಗಾಗಿ ಇತರರ ಬ್ಲಾಗ್ ಗಳನ್ನು ವಿಸಿಟ್ ಮಾಡುವುದಕ್ಕಾಗಲೀ, ಕಾಮೆಂಟ್ ಹಾಕುವುದಕ್ಕಾಗಲೀ ಸಾಧ್ಯವಾಗುತ್ತಿಲ್ಲ. ಇನ್ನೂ ಕೆಲವು ತಿಂಗಳುಗಳ ಕಾಲ ಇದು ಹೀಗೇ ಮುಂದುವರೆಯಬಹುದೆನಿಸುತ್ತದೆ. ಆದರೆ ಸಾಧ್ಯವಾದಾಗಲೆಲ್ಲ ಹೊಸ ಅಡಿಗೆಗಳನ್ನು ಪೋಸ್ಟ್ ಮಾಡುತ್ತಿರುತ್ತೇನೆ. ಓದುಗರು ಸಹಕರಿಸಬೇಕಾಗಿ ವಿನಂತಿ. 
 
ಹಲಸಿನ ಹಣ್ಣಿನ ಕಡುಬು (ಇಡ್ಲಿ) ತಯಾರಿಸುವ ವಿಧಾನ ಇಂತಿದೆ:
 


ತಯಾರಿಸಲು ಬೇಕಾಗುವ ಸಮಯ: 45 ನಿಮಿಷಗಳು  
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ 
 

ಬೇಕಾಗುವ ಸಾಮಗ್ರಿಗಳು:
ಹಲಸಿನ ಹಣ್ಣಿನ ಪಲ್ಪ್ - 1 1/2 ಕಪ್ 
ಅಕ್ಕಿ ಕಡಿ - 3/4 ಕಪ್ (ಟಿಪ್ಸ್ ನೋಡಿ)
ಗಟ್ಟಿ ಬೆಲ್ಲ - 1/2 ಕಪ್ 
ಸಕ್ಕರೆ - 2 ಚಮಚ 
ಉಪ್ಪು - 1/2 ಚಮಚ 
ಏಲಕ್ಕಿಪುಡಿ - ದೊಡ್ಡ ಚಿಟಿಕೆ 
ಎಣ್ಣೆ (ತೆಂಗಿನೆಣ್ಣೆ ಆದರೆ ಒಳ್ಳೆಯದು) - 1 ಚಮಚ    
 



ಮಾಡುವ ವಿಧಾನ:
ಹಲಸಿನ ಪಲ್ಪ್ ಗೆ ಬೆಲ್ಲ, ಸಕ್ಕರೆ, ಉಪ್ಪು ಸೇರಿಸಿ ಕದಡಿ.
ಬೆಲ್ಲ ಚೆನ್ನಾಗಿ ಕರಗಿದ ನಂತರ ಇದಕ್ಕೆ ನೀರಿನಲ್ಲಿ ತೊಳೆದ ಅಕ್ಕಿ ಕಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಇದಕ್ಕೆ ಎಣ್ಣೆ, ಏಲಕ್ಕಿಪುಡಿ ಸೇರಿಸಿ ಕದಡಿ.
ಮಿಶ್ರಣ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗಿರಲಿ. ತುಂಬಾ ಗಟ್ಟಿ ಎನಿಸಿದರೆ ಸ್ವಲ್ಪ ನೀರು ಸೇರಿಸಿ ತೆಳ್ಳಗೆ ಮಾಡಿ.
ಕಡುಬಿನ ಹಿಟ್ಟನ್ನು ಇಡ್ಲಿಯಂತೆ ಮಾಡಿಯೂ ಬೇಯಿಸಬಹುದು ಇಲ್ಲವೇ ಬಾಳೆಯೆಲೆಯ ಕೊಟ್ಟೆಯಲ್ಲಿ ಕಟ್ಟಿಯೂ ಬೇಯಿಸಬಹುದು. ಇಡ್ಲಿಯಂತೆ ಮಾಡಿ ಬೇಯಿಸುವುದಾದರೆ ಸುಮಾರು ಅರ್ಧ ಘಂಟೆ ಬೇಯಿಸಬೇಕು. ಬಾಳೆ ಕೊಟ್ಟೆಯಲ್ಲಿ ಮಾಡಿದರೆ ಕನಿಷ್ಠ ಒಂದು ಘಂಟೆಯಾದರೂ ಬೇಯಿಸಬೇಕು.
ಚೆನ್ನಾಗಿ ಬೆಂದ ಕಡುಬನ್ನು ಬಿಸಿ ಇರುವಾಗಲೇ ತುಪ್ಪ ಹಾಕಿಕೊಂಡು ತಿನ್ನಿ.
 


ಈ ಕಡುಬು 2 - 3 ದಿನಗಳವರೆಗೆ ಚೆನ್ನಾಗಿರುತ್ತದೆ. ಕಡುಬಿನ ರುಚಿ ಹೆಚ್ಚಿಸಲು ಇನ್ನೊಂದು ವಿಧಾನವಿದೆ..ತಣ್ಣಗಾದ ಕಡುಬನ್ನು ಕೈಯಲ್ಲಿ ಹಿಸುಕಿ ಚೆನ್ನಾಗಿ ಪುಡಿಮಾಡಿಕೊಂಡು ಅದಕ್ಕೆ 4 - 5 ಚಮಚ ತುಪ್ಪ, 1 - 2 ಚಮಚ ಸಕ್ಕರೆ, ಬೇಕಿದ್ದರೆ ಕೆಲವು ಕೇಸರಿ ದಳಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷ ಕೈಯಾಡಿಸುತ್ತ ಬಿಸಿಮಾಡಿ ತಿಂದರೆ ಕಡುಬು ಇನ್ನೂ ರುಚಿ!


ಟಿಪ್ಸ್:
  • ಅಕ್ಕಿ ಕಡಿ ಎಂದರೆ ಇಡ್ಲಿ ರವೆಯಂತೆ ತರಿಯಾಗಿ ಪುಡಿಮಾಡಿದ ಅಕ್ಕಿ. ಇದರ ಬದಲು ಇಡ್ಲಿ ರವೆಯನ್ನೂ ಬಳಸಬಹುದು. ಇಡ್ಲಿ ರವೆಯಾದರೆ 1 1/2 ಕಪ್ ಪಲ್ಪ್ ಗೆ 1 ರಿಂದ 1 1/4 ಕಪ್ ನಷ್ಟು ಬೇಕು. ಇಡ್ಲಿ ರವೆಯನ್ನು ಸ್ವಲ್ಪ ಹುರಿದು ಬಳಸಿ.
  • ಎಣ್ಣೆ ಸೇರಿಸುವುದರಿಂದ ಕಡುಬು ಹಗುರಾಗುತ್ತದೆ. ತಿಂದ ಕಡುಬು ಜೀರ್ಣವಾಗುವುದಕ್ಕೂ ಇದು ಸಹಕಾರಿ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)