ಬೇರು (ದೀವಿ) ಹಲಸಿನ ಚಕ್ಕೆ ಪಳದ್ಯ | Bread Fruit (Beru / Deevi Halasu) Chakke Paladya

Click here for English version.

ಬೇರು ಹಲಸು ಅಥವಾ ದೀವಿ ಹಲಸು ಮಲೆನಾಡ ಕಡೆ ಸಾಮಾನ್ಯವಾಗಿ ಸಿಗುವ ತರಕಾರಿಗಳಲ್ಲಿ ಒಂದು. ಈ ತರಕಾರಿಯಿಂದ ತಯಾರಿಸುವ ಸಾಂಬಾರ್ ಬಹಳ ರುಚಿ. ಮೇಲೋಗರಕ್ಕೊಂದೇ ಅಲ್ಲದೆ ಹಪ್ಪಳ, ಚಿಪ್ಸ್ ಇತ್ಯಾದಿಗಳ ತಯಾರಿಕೆಗೂ ಇದು ಚೆನ್ನಾಗಿರುತ್ತದೆ. ಬೇರು ಹಲಸಿನಿಂದ ತಯಾರಿಸುವ ಇತರ ಮೇಲೋಗರಗಳನ್ನು ಸವಿದಿದ್ದರೂ ಇದನ್ನು ಬಳಸಿ ಚಕ್ಕೆ ಪಳದ್ಯ ತಯಾರಿಸುವುದು ನನಗೆ ಗೊತ್ತಿರಲಿಲ್ಲ. ಅಮ್ಮನಿಂದ ಇತ್ತೀಚಿಗೆ ಕಲಿತ ಬೇರು ಹಲಸು ಅಥವಾ ದೀವಿ ಹಲಸಿನ ಚಕ್ಕೆ ಪಳದ್ಯದ ರೆಸಿಪಿ ಇಲ್ಲಿದೆ..


ತಯಾರಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು
ಸರ್ವಿಂಗ್ಸ್: 5 - 6 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಬೇರು ಹಲಸು (ದೀವಿ ಹಲಸು) - ಒಂದು ಕಾಯಿಯ ಅರ್ಧ ಭಾಗ
ನಿಂಬೆ ಹಣ್ಣು - 1 1/2 ಅಥವಾ ರುಚಿಗೆ ತಕ್ಕಷ್ಟು
ಹಸಿಮೆಣಸು - 3 (ಖಾರಕ್ಕೆ ತಕ್ಕಂತೆ)
ನೀರು - 4ರಿಂದ 5 ಕಪ್
ಎಣ್ಣೆ - 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ: ಎಣ್ಣೆ - 1 ಚಮಚ, ಸಾಸಿವೆ - 3/4 ಚಮಚ, ಚಿಟಿಕೆ ಇಂಗು, 1 ಎಸಳು ಕರಿಬೇವು


ಮಾಡುವ ವಿಧಾನ:
ಬೇರು ಹಲಸಿನ ಕಾಯಿಯ ಸಿಪ್ಪೆ ಮತ್ತು ಒಳಗಿನ ತಿರುಳನ್ನು ತೆಗೆದು ಮಧ್ಯಮ ಗಾತ್ರದ ಹೋಳುಗಳಾಗಿ ಹೆಚ್ಚಿಕೊಳ್ಳಿ.
ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಸೀಳಿದ ಹಸಿಮೆಣಸು ಸೇರಿಸಿ ಒಂದು ಪಾತ್ರೆಯಲ್ಲಿ ಬಿಸಿಗಿಡಿ. ಇದಕ್ಕೆ ಹೆಚ್ಚಿದ ಬೇರು ಹಲಸಿನ ಹೋಳುಗಳನ್ನು ಸೇರಿಸಿ. ಹೋಳು ಮೆತ್ತಗಾಗುವವರೆಗೆ ಬೇಯಿಸಿ.
ಬೆಂದ ಹೋಳುಗಳಲ್ಲಿ ಒಂದು ಕಪ್ ನಷ್ಟನ್ನು ತಣಿಸಿಕೊಂಡು, ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.
ರುಬ್ಬಿದ ಮಿಶ್ರಣವನ್ನು ಬೇಯಿಸಿದ ಹೋಳಿಗೆ ಸೇರಿಸಿ 5 ನಿಮಿಷ ಕುದಿಸಿ ಇಳಿಸಿ.
ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಮಾಡಿ ಪಳದ್ಯಕ್ಕೆ ಸೇರಿಸಿ.            
ಈ ಪಳದ್ಯ ಅನ್ನದೊಡನೆ ಬಿಸಿಯಾಗಿ ಉಣ್ಣಲು ಚೆನ್ನಾಗಿರುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)