ಸಕ್ಕರೆ ಹೋಳಿಗೆ (ಒಬ್ಬಟ್ಟು) | Sakkare Holige (Obbattu)

Click here for English version.

ತುಂಬಾ ದಿನಗಳ ನಂತರ ಹೊಸ ರೆಸಿಪಿಯೊಡನೆ ನಾನು ಬ್ಲಾಗಿಂಗ್ ಗೆ ಮರಳುತ್ತಿದ್ದೇನೆ. ಹೊಸ ವರ್ಷದ ಮೊದಲ ಪೋಸ್ಟ್ ನ್ನು ಸಿಹಿಯೊಡನೆ ಪ್ರಾರಂಭ ಮಾಡೋಣ ಅಲ್ಲವೆ? ನಮ್ಮ ಪುಟ್ಟ ಕಂದಮ್ಮನ ಆರೈಕೆಯಲ್ಲಿ ನನಗೆ ಬ್ಲಾಗ್ ಕಡೆ ಗಮನ ಕೊಡಲು ಸಮಯವೇ ಸಿಗುತ್ತಿಲ್ಲ. ಹೀಗಾಗಿ ಅಡಿಗೆ ಮನೆಗೆ ಮರಳುವ ತನಕ ಅಮ್ಮನ ಪಾಕಶಾಲೆಯಿಂದ ಕೆಲವು ಅಡಿಗೆಗಳನ್ನು ನಿಮ್ಮ ಮುಂದಿರಿಸಲು ಪ್ರಯತ್ನಿಸುತ್ತೇನೆ.
ಬಿಡುವಾದಾಗ ಅಮ್ಮನ ಜೊತೆ ಸೇರಿಕೊಂಡು ಅವರು ಸಕ್ಕರೆ ಹೋಳಿಗೆ (ಒಬ್ಬಟ್ಟು) ಮಾಡುವಾಗ ಕೆಲವು ಫೊಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದೆ. ಅಮ್ಮ ಹೇಳಿಕೊಟ್ಟ ಸಕ್ಕರೆ ಹೋಳಿಗೆಯ ರೆಸಿಪಿ ಇಲ್ಲಿದೆ. ನಾವು ತಯಾರಿಸುವ ಇತರ ಹೋಳಿಗೆಗಳಂತಲ್ಲದೆ ಈ ಹೋಳಿಗೆ ಸ್ವಲ್ಪ ಗರಿಯಾಗಿರುತ್ತದೆ. ಅಲ್ಲದೆ ಈ ಹೋಳಿಗೆ ತಯಾರಿಸಿದ 15 ದಿನಗಳವರೆಗೂ ಕೆಡದೆ ಚೆನ್ನಾಗಿರುತ್ತದೆ!
ಸಕ್ಕರೆ ಹೋಳಿಗೆ ಊಟದೊಡನೆಯೂ ಚೆನ್ನಾಗಿರುತ್ತದೆ, ಅಲ್ಲದೆ ಯಾರಾದರೂ ಅತಿಥಿಗಳು ಬರುವವರಿದ್ದರೆ ಮೊದಲೇ ತಯಾರಿಸಿಟ್ಟುಕೊಂಡು ಟೀ ಅಥವಾ ಕಾಫಿಯೊಡನೆ ಸರ್ವ್ ಮಾಡಬಹುದು.


ತಯಾರಿಸಲು ಬೇಕಾಗುವ ಸಮಯ: 1 1/2 ಘಂಟೆ
ಹಿಟ್ಟನ್ನು ಕಲಸಿಡುವ ಸಮಯ: 1 ಘಂಟೆ
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಈ ಅಳತೆಯಿಂದ 40 ಹೋಳಿಗೆಗಳನ್ನು ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು:
ಹೂರಣಕ್ಕೆ:
  • ಸೂಜಿ ರವಾ - 2 1/4 ಕಪ್
  • ಸಕ್ಕರೆ - 2 3/4 ಕಪ್
  • ತೆಂಗಿನತುರಿ - 10 ಕಪ್
  • ಉಪ್ಪು - 1 1/2 ಟೀ ಸ್ಪೂನ್
  • ಏಲಕ್ಕಿಪುಡಿ - 1 ಟೀ ಸ್ಪೂನ್
  • ತುಪ್ಪ - 2 ಟೀ ಸ್ಪೂನ್

ಕಣಕಕ್ಕೆ:
  • ಗೋಧಿಹಿಟ್ಟು - 1 ಕಪ್
  • ಮೈದಾಹಿಟ್ಟು - 1 ಕಪ್
  • ಉಪ್ಪು - 1 ಟೀ ಸ್ಪೂನ್
  • ಅರಿಶಿನ - 1 ಟೀ ಸ್ಪೂನ್
  • ನೀರು - 1 ಕಪ್ (ಅಂದಾಜು)
  • ಎಣ್ಣೆ - 1 ಕಪ್ (ಅಂದಾಜು)


ತಯಾರಿಸುವ ವಿಧಾನ:
  • ಮೈದಾಹಿಟ್ಟು, ಗೋಧಿಹಿಟ್ಟು, ಅರಿಶಿನ ಇಷ್ಟನ್ನೂ ಒಂದು ಪಾತ್ರೆಯಲ್ಲಿ ಮಿಕ್ಸ್ ಮಾಡಿಕೊಳ್ಳಿ. 1 ಕಪ್ ನಷ್ಟು ನೀರಿಗೆ 1 ಟೀ ಸ್ಪೂನ್ ಉಪ್ಪು ಸೇರಿಸಿ ಕದಡಿ. ಉಪ್ಪುನೀರಿಗೆ ಹಿಟ್ಟಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ನಾದಿ. ಇದಕ್ಕೆ ಮುಕ್ಕಾಲು ಭಾಗ ಎಣ್ಣೆ ಸೇರಿಸಿ ಗಂಟಿಲ್ಲದಂತೆ ಚೆನ್ನಾಗಿ ನಾದಿ. ಇದರಮೇಲೆ ಉಳಿದ ಎಣ್ಣೆಯನ್ನು ಸುರುವಿ ಕೈಯಿಂದ ಸ್ವಲ್ಪ ಪ್ರೆಸ್ ಮಾಡಿ. ಕಣಕದ ಮಿಶ್ರಣಕ್ಕೆ ಒಂದು ಪ್ಲೇಟ್ ಮುಚ್ಚಿ ಒಂದು ಘಂಟೆ ನೆನೆಯಲು ಬಿಡಿ.
  • ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪವನ್ನು ಬಿಸಿಮಾಡಿಕೊಂಡು ಸೂಜಿ ರವೆಯನ್ನು ಸ್ವಲ್ಪ ಪರಿಮಳ ಬರುವವರೆಗೆ ಹುರಿಯಿರಿ. ಉರಿಯನ್ನು ಆಫ್ ಮಾಡಿದ ತಕ್ಷಣ ಇದಕ್ಕೆ ಸಕ್ಕರೆ, ತೆಂಗಿನತುರಿ, ಏಲಕ್ಕಿಪುಡಿ ಮತ್ತು ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ.
  • ರವಾ - ತೆಂಗಿನತುರಿ ಮಿಶ್ರಣವನ್ನು ನೀರು ಸೇರಿಸದೆ ಗಟ್ಟಿಯಾಗಿ ರುಬ್ಬಿ. ಕಡಿಮೆ ಪ್ರಮಾಣದಲ್ಲಿ ಮಾಡುವುದಾದರೆ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ರುಬ್ಬಿ. ಮಿಶ್ರಣ ಜಾಸ್ತಿ ಇದ್ದರೆ ಗ್ರೈಂಡರ್ ಬಳಸಬಹುದು. ಒರಳಿನಲ್ಲಿ ರುಬ್ಬಿ ಅಭ್ಯಾಸವಿದ್ದರೆ ಅದರಲ್ಲಿ ರುಬ್ಬುವುದು ಎಲ್ಲಕ್ಕಿಂತ ಉತ್ತಮ. ಮಿಶ್ರಣ ಸ್ವಲ್ಪ ಅಂಟಾಗುವುದರಿಂದ ಮಿಕ್ಸಿ ಅಥವಾ ಗ್ರೈಂಡರ್ ನಲ್ಲಿ ರುಬ್ಬುವುದು ಸ್ವಲ್ಪ ಕಷ್ಟ. ಮಿಶ್ರಣವನ್ನು ತುಂಬ ನುಣ್ಣಗೆ ರುಬ್ಬಬೇಡಿ; ಸೂಜಿ ರವೆಯ ಹದಕ್ಕೆ ರುಬ್ಬಿದರೆ ಚೆನ್ನಾಗಿರುತ್ತದೆ.
  • ರುಬ್ಬಿದ ಮಿಶ್ರಣದಿಂದ ನಿಂಬೆಗಾತ್ರದ ಉಂಡೆಗಳನ್ನು ಮಾಡಿ. ಕಣಕದಲ್ಲೂ ಅಷ್ಟೇ ಸಂಖ್ಯೆಯ, ಸ್ವಲ್ಪ ಚಿಕ್ಕದಾದ ಉಂಡೆಗಳನ್ನು ಮಾಡಿಕೊಳ್ಳಿ. ಕೈಗಳಿಗೆ ಚೆನ್ನಾಗಿ ಎಣ್ಣೆ ಸವರಿಕೊಂಡು ಕಣಕದೊಳಗೆ ಹೂರಣವನ್ನಿರಿಸಿ, ಹೂರಣ ಹೊರಬರದಂತೆ ಕವರ್ ಮಾಡಿ. 
  • ಎಣ್ಣೆ ಸವರಿದ ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯಮೇಲೆ ಉಂಡೆಯನ್ನು ವೃತ್ತಾಕಾರಕ್ಕೆ ಲಟ್ಟಿಸಿ. ಲಟ್ಟಿಸಿದ ಹೋಳಿಗೆಯನ್ನು ಕಾದ ಕಾವಲಿಯಮೇಲೆ ಎರಡೂ ಕಡೆ ಚೆನ್ನಾಗಿ ಬೇಯಿಸಿ ತೆಗೆಯಿರಿ. 
  • ರುಚಿಕರವಾದ ಸಕ್ಕರೆ ಹೋಳಿಗೆಯನ್ನು ತುಪ್ಪದೊಡನೆ ಸವಿಯಿರಿ. ಈ ಹೋಳಿಗೆ ತುಪ್ಪವಿಲ್ಲದೆ ಹಾಗೇ ತಿನ್ನಲೂ ಚೆನ್ನಾಗಿರುತ್ತದೆ. 
 

ಟಿಪ್ಸ್:
  • ಈ ಹೋಳಿಗೆಗೆ ತುಂಬಾ ಸಕ್ಕರೆ ಹಾಕಿ ಮಾಡಿದರೆ ಮಿಶ್ರಣ ತುಂಬಾ ಅಂಟಾಗಿ ಹೋಳಿಗೆ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಮೇಲೆ ಹೇಳಿದ ಅಳತೆಯಷ್ಟೇ ಸಕ್ಕರೆ ಹಾಕಿ. 

ಕಾಮೆಂಟ್‌ಗಳು