ಹಲಸಿನ ಹಣ್ಣಿನ ಪಾಯಸ | Jack Fruit Kheer | Jack Fruit Payasa

Click here for English version.

ಹಲಸಿನ ಹಣ್ಣಿನಿಂದ ತಯಾರಿಸುವ ಸಿಹಿ ತಿಂಡಿಗಳಲ್ಲಿ ಇದೂ ಒಂದು. ನಿಜ ಹೇಳಬೇಕೆಂದರೆ ನಾನು ಹಲಸಿನ ಸೀಜನ್ ನಲ್ಲೇ ಈ ರೆಸಿಪಿಯನ್ನು ಬರೆಯಬೇಕೆಂದುಕೊಂಡಿದ್ದೆ. ಆದರೆ ನನ್ನ ಪುಟ್ಟ ಮಗಳ ಲಾಲನೆ ಪಾಲನೆಯಲ್ಲಿ ನನಗೆ ಬ್ಲಾಗ್ ಕಡೆ ಗಮನ ಹರಿಸಲು ಸಮಯವೇ ಸಿಗಲಿಲ್ಲ. ಹೆಚ್ಚಿನ ಮಹಿಳಾ ಬ್ಲಾಗಿಗರು ಮಕ್ಕಳಾದ ನಂತರ ಬರವಣಿಗೆ ನಿಲ್ಲಿಸುವುದು ಇದೇ ಕಾರಣಕ್ಕೆ ಇರಬಹುದೆಂದು ನನಗೆ ಈಗ ಅನ್ನಿಸುತ್ತಿದೆ :)
ರುಚಿಕರವಾದ ಹಾಗೂ ಬಹಳ ಸುಲಭದಲ್ಲಿ ತಯಾರಿಸಬಹುದಾದ ಈ ಪಾಯಸವನ್ನು ಹಲಸಿನ ಹಣ್ಣು ಸಿಕ್ಕಾಗ ತಯಾರಿಸಿ ಸವಿಯಿರಿ! ಹಲಸಿನ ಹಣ್ಣಿನ ಪಾಯಸ ತಯಾರಿಸುವ ವಿಧಾನ ಹೀಗಿದೆ.. 


ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು 
ಸರ್ವಿಂಗ್ಸ್ : 4 - 5 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಮೀಡಿಯಮ್

ಬೇಕಾಗುವ ಸಾಮಗ್ರಿಗಳು:
  • ಮೀಡಿಯಮ್ ಸೈಜ್ ಗೆ ಹೆಚ್ಚಿದ ಹಲಸಿನ ಹಣ್ಣಿನ ತೊಳೆ - 2 ಕಪ್
  • ಹಾಲು - 2 ಕಪ್
  • ನೀರು - 2 ಕಪ್ 
  • ರುಚಿಗೆ ಉಪ್ಪು (ಒಂದು ಚಿಟಿಕೆ)
  • ಸಕ್ಕರೆ - 1 ಕಪ್ ಅಥವಾ ರುಚಿಗೆ ತಕ್ಕಷ್ಟು 
  • ಬೆಲ್ಲ - 2 ಚಮಚ (ಬೇಕಿದ್ದರೆ)
  • ಸೂಜಿ ರವಾ - 1/4 ಕಪ್
  • ಏಲಕ್ಕಿಪುಡಿ - 1/4 ಚಮಚ

ಮಾಡುವ ವಿಧಾನ:
  • ಸೂಜಿ ರವೆಯನ್ನು ಸ್ವಲ್ಪ ನೀರು ಸೇರಿಸಿ ಕೈಯಾಡಿಸಿ ನೀರನ್ನು ಬಸಿದು, 10 ನಿಮಿಷ ನೆನೆಯಲು ಬಿಡಿ.
  • ಒಂದು ಪಾತ್ರೆಯಲ್ಲಿ 2 ಕಪ್ ನಷ್ಟು ನೀರನ್ನು ಕಾಯಲಿಡಿ. ನೀರು ಬಿಸಿಯಾದಾಗ ಅದಕ್ಕೆ ಉಪ್ಪು ಮತ್ತು ಸಕ್ಕರೆ ಸೇರಿಸಿ ಎರಡು ನಿಮಿಷ ಕುದಿಸಿ. ನಂತರ ಇದಕ್ಕೆ ಹೆಚ್ಚಿದ ಹಲಸಿನ ಹಣ್ಣಿನ ತೊಳೆಗಳನ್ನು ಹಾಕಿ ಒಂದು ನಿಮಿಷ ಬೇಯಿಸಿ. 
  • ಹಲಸಿನ ತೊಳೆ ಬೇಯುತ್ತಿದ್ದಂತೆ ಇದಕ್ಕೆ ರವೆ ಸೇರಿಸಿ ಬಿಡದೆ ಕೈಯಾಡಿಸಿ. ಇಲ್ಲದಿದ್ದರೆ ರವೆ ಗಂಟಾಗಿಬಿಡುತ್ತದೆ. 
  • ರವೆ ಬೆಂದು ಮಿಶ್ರಣ ದಪ್ಪಗಾದಾಗ ಇದಕ್ಕೆ ಹಾಲು, ಏಲಕ್ಕಿಪುಡಿ ಸೇರಿಸಿ ಎರಡು ನಿಮಿಷ ಕುದಿಸಿದರೆ ಹಲಸಿನ ಹಣ್ಣಿನ ಪಾಯಸ ಸವಿಯಲು ಸಿದ್ಧ!   

 ಟಿಪ್ಸ್:
  • ಹಲಸಿನ ಹಣ್ಣಿನ ತೊಳೆ ಬೇಗ ಬೇಯುತ್ತದೆ. ಜಾಸ್ತಿ ಹೊತ್ತು ಬೇಯಿಸಿದರೆ ತೊಳೆ ಕರಗಿ ಮುದ್ದೆಯಾಗಿಬಿಡುತ್ತದೆ. 

ಕಾಮೆಂಟ್‌ಗಳು