ನವಿಲುಕೋಸು ಪರೋಟ | ಟರ್ನಿಪ್ ಪರೋಟ | Turnip Paratha | Navilukosu Paratha

Click here for English version.

ನಾವು ಆಸ್ಟ್ರೇಲಿಯಾಕ್ಕೆ ಬಂದ ಹೊಸದರಲ್ಲಿ ಒಮ್ಮೆ ನಮ್ಮವರು ಇಲ್ಲಿ ಸಿಗುವ 'ಟರ್ನಿಪ್' ಎನ್ನುವ ತರಕಾರಿಯನ್ನು ತಂದಿದ್ದರು. ಅಡಿಗೆ ಮಾಡಲು ಅದನ್ನು ಕತ್ತರಿಸಿದಾಗ ನನಗೆ ಇದು ನಮ್ಮ ಕಡೆ ಸಿಗುವ ನವಿಲುಕೋಸಿನಂತೆ ಎನ್ನಿಸಿತು. ಆದರೆ ನವಿಲುಕೋಸಿನಂತೆ ತಿಳಿ ಹಸಿರು ಬಣ್ಣದ್ದಾಗಿರದೆ ಇದರ ಸಿಪ್ಪೆ ನೇರಳೆ ಮಿಶ್ರಿತ ಬಿಳಿ ಬಣ್ಣದ್ದಾಗಿತ್ತು. ಕೊನೆಗೆ ವಿಕಿಪೀಡಿಯಾ ನೋಡಿದಾಗ ಗೊತ್ತಾಯಿತು, ಇದು ನಮ್ಮಲ್ಲಿಯ ನವಿಲುಕೋಸಿನ ಇನ್ನೊಂದು ಬಗೆ ಎಂದು! ಈ ತರಕಾರಿ ಸಾಂಬಾರ್, ಹಶಿ, ಪರೋಟ, ಇತ್ಯಾದಿ ಭಾರತೀಯ ಅಡಿಗೆಗಳಿಗೆ ಬಹಳ ಚೆನ್ನಾಗಿರುತ್ತದೆ.
ನನ್ನ ಪುಟ್ಟ ಮಗಳಿಗೆ ರೊಟ್ಟಿ, ಚಪಾತಿ, ಪರೋಟ - ಇವೆಲ್ಲ ಪ್ರಿಯವಾದ ತಿಂಡಿಗಳು! ನಾವು ತಿಂಡಿಗೆ ಕುಳಿತರೆ ನಮ್ಮ ಜತೆ ಅವಳೂ ರೊಟ್ಟಿಯ ಪುಟ್ಟ ಪುಟ್ಟ ಚೂರುಗಳನ್ನು ನಿಧಾನವಾಗಿ ತಿನ್ನುತ್ತಾಳೆ. ಜೊತೆಗೆ ನಮ್ಮವರೂ ರೊಟ್ಟಿ ಪ್ರಿಯರು! ಹೀಗಾಗಿ ವಾರದ ಹೆಚ್ಚು ದಿನಗಳಲ್ಲಿ ನಮ್ಮ ಸಂಜೆ ಊಟಕ್ಕೆ ರೊಟ್ಟಿ ಅಥವಾ ಪರೋಟ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. 
ಪರೋಟ ತಯಾರಿಸಲು ನಾನು ಸಾಮಾನ್ಯವಾಗಿ ಬಳಸುವ ತರಕಾರಿಗಳಲ್ಲಿ 'ಟರ್ನಿಪ್' ಅಥವಾ 'ನವಿಲುಕೋಸು' ಕೂಡ ಒಂದು. ನವಿಲುಕೋಸು ಅಥವಾ ಟರ್ನಿಪ್ ಪರೋಟ ಮಾಡುವ ವಿಧಾನ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಕಠಿಣ

ಬೇಕಾಗುವ ಸಾಮಗ್ರಿಗಳು:
- ಹೂರಣಕ್ಕೆ:
  • ನವಿಲುಕೋಸು (ಟರ್ನಿಪ್) - 3 ದೊಡ್ಡ ಗಡ್ಡೆಗಳು
  • ಜೀರಿಗೆ - 1 1/2 ಟೀ ಚಮಚ
  • ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
  • ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - 1/2 ಕಪ್
  • ಉಪ್ಪು - 1 3/4 ಟೀ ಚಮಚ 

- ಕಣಕಕ್ಕೆ:
  • ಗೋಧಿ ಹಿಟ್ಟು - 5 ಕಪ್
  • ನೀರು - 2 1/2 ಕಪ್
  • ಉಪ್ಪು - 1 1/2 ಟೀ ಚಮಚ
  • ಎಣ್ಣೆ - 4ರಿಂದ 5 ಚಮಚ

ಮಾಡುವ ವಿಧಾನ:
  • ನವಿಲುಕೋಸನ್ನು ತುರಿದು ಅದಕ್ಕೆ ಜೀರಿಗೆ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಕಲಸಿ 10 ನಿಮಿಷ ಬಿಡಿ. ನಂತರ ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಕೈಯಲ್ಲಿ ಗಟ್ಟಿಯಾಗಿ ಹಿಂಡಿ ಅದರಲ್ಲಿರುವ ನೀರನ್ನು ಹೊರತೆಗೆಯಿರಿ. ಈ ನೀರನ್ನು ಹಾಗೇ ಇಟ್ಟುಕೊಂಡು ಕಣಕಕ್ಕೆ ಹಿಟ್ಟು ಕಲಸುವಾಗ ಬಳಸಬಹುದು. 
  • ನವಿಲುಕೋಸಿನ ಮಿಶ್ರಣಕ್ಕೆ ಜಜ್ಜಿದ ಹಸಿಮೆಣಸು ಸೇರಿಸಿ ಮಿಕ್ಸ್ ಮಾಡಿ. ರುಚಿ ನೋಡಿಕೊಂಡು ಉಪ್ಪು ಬೇಕಿದ್ದರೆ ಸ್ವಲ್ಪ ಸೇರಿಸಿ.   
  • ಗೋಧಿಹಿಟ್ಟಿಗೆ ಉಪ್ಪು, ಎಣ್ಣೆ ಸೇರಿಸಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿ ಮೆತ್ತಗಿನ ಹಿಟ್ಟನ್ನು ತಯಾರಿಸಿಕೊಳ್ಳಿ. ಬಳಸುವ ಮೊದಲು ಇದನ್ನು 10 ನಿಮಿಷ ಸೆಟ್ ಆಗಲು ಬಿಡಿ. 
  • ನವಿಲುಕೋಸಿನ ಮಿಶ್ರಣವನ್ನು 9 ಅಥವಾ 10 ಸಮಪಾಲುಗಳಾಗಿ ಮಾಡಿಕೊಳ್ಳಿ. ಹಿಟ್ಟನ್ನೂ ಅಷ್ಟೇ ಸಂಖ್ಯೆಯ ಸಮ ಭಾಗಳಾಗಿ ಮಾಡಿಕೊಂಡು ಉಂಡೆ ಮಾಡಿಕೊಳ್ಳಿ. 
  • ಗೋಧಿಹಿಟ್ಟಿನ ಉಂಡೆಯನ್ನು ಲಟ್ಟಿಸಿಕೊಂಡು ಅದರ ಮಧ್ಯೆ ಸ್ಟಫಿಂಗ್ ಮಿಶ್ರಣವನ್ನು ಇಟ್ಟು, ಸ್ಟಫಿಂಗ್ ಮಿಶ್ರಣ ಹೊರಗೆ ಬರದಂತೆ ಮುಚ್ಚಿ ಉಂಡೆ ತಯಾರಿಸಿ. ಉಂಡೆಯನ್ನು ಬೆರಳಿನಿಂದ ಸ್ವಲ್ಪ ಪ್ರೆಸ್ ಮಾಡಿ ಚಪ್ಪಟೆ ಮಾಡಿ, 2 ನಿಮಿಷ ಹಾಗೇ ಬಿಡಿ.
  • ಚಪ್ಪಟೆ ಮಾಡಿಟ್ಟ ಉಂಡೆಗಳನ್ನು ಒಣ ಹಿಟ್ಟಿನಲ್ಲಿ ಹೊರಳಿಸಿಕೊಂಡು ನಿಧಾನವಾಗಿ ವೃತ್ತಾಕಾರಕ್ಕೆ ಲಟ್ಟಿಸಿ. ಪರೋಟವನ್ನು ಚಪಾತಿಗಿಂತ ಸ್ವಲ್ಪ ದಪ್ಪಗೆ ಲಟ್ಟಿಸಬೇಕು; ಇಲ್ಲದಿದ್ದರೆ ಸ್ಟಫಿಂಗ್ ಹೊರಗೆ ಬಂದುಬಿಡುತ್ತದೆ. 
  • ಲಟ್ಟಿಸಿದ ಪರೋಟವನ್ನು ಹದವಾಗಿ ಕಾದ ಕಾವಲಿಯಮೇಲೆ ಎರಡೂ ಕಡೆ ಹೊಂಬಣ್ಣ ಬರುವವರೆಗೆ ಬೇಯಿಸಿ. ಬೇಯಿಸುವಾಗ ಎಣ್ಣೆ ಅಥವಾ ತುಪ್ಪ ಸೇರಿಸಿ. 
  • ಬಿಸಿ ಬಿಸಿ ಪರೋಟವನ್ನು ನಿಮ್ಮಿಷ್ಟದ ಸೈಡ್ ಡಿಶ್ ನೊಡನೆ ಸವಿಯಿರಿ!

ಟಿಪ್ಸ್:
  • ಪರೋಟವನ್ನು ಅರೆಬರೆ ಬೇಯಿಸಿ, ಪೂರ್ತಿ ತಣ್ಣಗಾದ ನಂತರ ಜಿಪ್ ಲಾಕ್ ಬ್ಯಾಗ್ ನಲ್ಲಿ ಹಾಕಿ ಫ್ರೀಜರ್ ನಲ್ಲಿ ಇಟ್ಟುಕೊಂಡರೆ ಬೇಕಾದಾಗ ಹೊರತೆಗೆದು ಪೂರ್ತಿ ಬೇಯಿಸಿ ಬಳಸಬಹುದು. ಮನೆಯವರ ಲಂಚ್ ಬಾಕ್ಸ್ ರೆಡಿ ಮಾಡಲು ಬೆಳಿಗ್ಗೆ ಬೇಗ ಎದ್ದು ಪರದಾಡುವ ತೊಂದರೆ ತಪ್ಪಿಸಿಕೊಳ್ಳಲು ಇದು ನಾನು ಕಂಡುಕೊಂಡ ಉಪಾಯ!

ಕಾಮೆಂಟ್‌ಗಳು