ಡೊಳ್ಳು ಮೆಣಸಿನಕಾಯಿ ಪಲ್ಯ । ಕ್ಯಾಪ್ಸಿಕಂ ಪಲ್ಯ | Capsicum Palya | Capsicum Stir Fry

Click here for English version.

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು! ನಮಗಂತೂ ಊರಿನ ಪ್ರವಾಸದಲ್ಲಿ ರಜಾ ದಿನಗಳು ಹೇಗೆ ಕಳೆದವೋ ಗೊತ್ತೇ ಆಗಲಿಲ್ಲ. ಊರಲ್ಲಿ ಎಲ್ಲರೂ ನಮಗಿಂತ ಹೆಚ್ಚಾಗಿ ಜೊತೆಗೆ ಬರುವ ನಮ್ಮ ಮಗಳನ್ನು ನೋಡಲು ಕಾತುರರಾಗಿರುತ್ತಾರೆ. ಅವಳಿಗೂ ಅಷ್ಟೇ, ಎಲ್ಲರ ಜೊತೆ ಆಟ ಆಡುವುದು, ನಾಯಿ, ದನ - ಕರುಗಳನ್ನು ನೋಡುವುದೆಂದರೆ ಖುಷಿಯೋ ಖುಷಿ! ಇತ್ತೀಚೆಗಷ್ಟೇ ನಡೆಯಲು ಪ್ರಾರಂಭಿಸಿರುವ ಅವಳ ಹೆಜ್ಜೆಗಳು ಊರಿನ ಪ್ರವಾಸದಿಂದ ಇನ್ನೂ ಧೃಢವಾಗಿವೆ.
ಇನ್ನು ಅಡಿಗೆಯ ವಿಷಯಕ್ಕೆ ಬರೋಣ! ಎಲ್ಲ ಸೀಜನ್ ನಲ್ಲೂ ಸಿಗುವ ತರಕಾರಿಗಳಲ್ಲಿ ಡೊಳ್ಳು ಮೆಣಸಿನಕಾಯಿ ಕೂಡ ಒಂದೆನಿಸುತ್ತದೆ. ಮನೆಗೆ ಈ ತರಕಾರಿಯನ್ನು ತಂದಾಗ ಹೆಚ್ಚಿನ ಸಲ ನಾನು ತಯಾರಿಸುವುದು ಸ್ಟಫ್ಡ್ ಕ್ಯಾಪ್ಸಿಕಂ. ಆದರೆ ಅಮ್ಮ ತಯಾರಿಸುವ ಬಾಯಲ್ಲಿ ನೀರೂರಿಸುವ ಡೊಳ್ಳು ಮೆಣಸಿನಕಾಯಿ (ಕ್ಯಾಪ್ಸಿಕಂ) ಪಲ್ಯ ನಮ್ಮ ಮನೆಯಲ್ಲೂ ಒಮ್ಮೊಮ್ಮೆ ತಯಾರಾಗುತ್ತದೆ. ಮಸಾಲೆ ಪದಾರ್ಥಗಳನ್ನು ಕುಟ್ಟಿ ಹಾಕಿ ಮಾಡುವ ಈ ಪಲ್ಯ ಅನ್ನ ಹಾಗೂ ಚಪಾತಿಯೊಡನೆ ಒಳ್ಳೆಯ ಕಾಂಬಿನೇಶನ್!   
 

ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು
ಸರ್ವಿಂಗ್ಸ್: 4 - 5 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಮಧ್ಯಮ

ಬೇಕಾಗುವ ಸಾಮಗ್ರಿಗಳು:
 • ಮೀಡಿಯಮ್ ಸೈಜ್ ನ ಡೊಳ್ಳು ಮೆಣಸಿನಕಾಯಿ - 2   
 • ರುಚಿಗೆ ತಕ್ಕಷ್ಟು ಉಪ್ಪು 
 • ಆಮ್ ಚೂರ್ ಪೌಡರ್ - 1 1/2 ಟೀ ಚಮಚ
 • ಸಕ್ಕರೆ - 1 ಟೀ ಚಮಚ

- ಮಸಾಲಾ ಪುಡಿಗೆ:
 • ಚಕ್ಕೆ - 1 ಇಂಚಿನ ಚೂರು
 • ಲವಂಗ - 4
 • ಒಣಮೆಣಸು - 10 ರಿಂದ 12
 • ಒಣ ಕೊಬ್ಬರಿ ತುರಿ - 1 ಕಪ್ 
 • ಕಡಲೆಬೇಳೆ - 4 ಟೇಬಲ್ ಚಮಚ 
 • ಉದ್ದಿನಬೇಳೆ - 2 ಟೀ ಚಮಚ 
 • ಮೆಂತ್ಯ - 3/4 ಟೀ ಚಮಚ
 • ಕೊತ್ತಂಬರಿ - 1 1/2 ಟೀ ಚಮಚ
 • ಜೀರಿಗೆ - 3/4 ಟೀ ಚಮಚ
 • ಸಾಸಿವೆ - 1/2 ಟೀ ಚಮಚ
 • ಒಂದು ದೊಡ್ಡ ಚಿಟಿಕೆ ಇಂಗು 
 • ಅರಿಶಿನ - 1/2 ಟೀ ಚಮಚ
 • ಎಣ್ಣೆ - 1 1/2 ಟೀ ಚಮಚ

- ಒಗ್ಗರಣೆಗೆ:
 • ಎಣ್ಣೆ - 4 ಟೇಬಲ್ ಚಮಚ 
 • ಉದ್ದಿನಬೇಳೆ - 1 1/2 ಟೀ ಚಮಚ
 • ಸಾಸಿವೆ - 1 ಟೀ ಚಮಚ
 • ಅರಿಶಿನ - 1/4 ಟೀ ಚಮಚ


ಮಾಡುವ ವಿಧಾನ: 
 • ಡೊಳ್ಳು ಮೆಣಸಿನಕಾಯಿಯನ್ನು ಮಧ್ಯಮ ಗಾತ್ರದ ಚೂರುಗಳಾಗಿ ಹೆಚ್ಚಿಕೊಳ್ಳಿ. 
 • ಮಸಾಲಾ ಪುಡಿಗೆ ಒಣಕೊಬ್ಬರಿ ತುರಿ ಹೊರತಾಗಿ ಉಳಿದೆಲ್ಲ ಸಾಮಗ್ರಿಗಳನ್ನು ಎಣ್ಣೆಯಲ್ಲಿ ಹುರಿದುಕೊಂಡು ಮಿಕ್ಸಿಯಲ್ಲಿ ತರಿಯಾಗಿ ಪುಡಿಮಾಡಿಕೊಳ್ಳಿ. ಕೊನೆಯಲ್ಲಿ ಒಣಕೊಬ್ಬರಿ ತುರಿ ಸೇರಿಸಿ 4 - 5 ಸೆಕೆಂಡ್ ಕಾಲ ಮಿಕ್ಸಿಯಲ್ಲಿ ತರಿಯಾಗಿ ಪುಡಿಮಾಡಿ.
 • ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಒಗ್ಗರಣೆಗೆ ಮೇಲೆ ಹೇಳಿದ ಸಾಮಗ್ರಿಗಳನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಇದಕ್ಕೆ ಹೆಚ್ಚಿದ ಡೊಳ್ಳು ಮೆಣಸಿನಕಾಯಿ ಚೂರುಗಳನ್ನು ಸೇರಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಆಮ್ ಚೂರ್ ಪೌಡರ್ ಸೇರಿಸಿ ಕೈಯಾಡಿಸಿ. 
 • ಬಾಣಲೆಗೆ ಒಂದು ಪ್ಲೇಟ್ ನ್ನು ಅರೆಬರೆ ಮುಚ್ಚಿ ಮೆಣಸಿನಕಾಯಿ ಚೂರುಗಳು ಮೆತ್ತಗಾಗುವವರೆಗೆ ಬೇಯಿಸಿ. ಪಲ್ಯದ ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತಿರಿ. 
 • ಪಲ್ಯದ ಮಿಶ್ರಣ ಚೆನ್ನಾಗಿ ಬೆಂದ ನಂತರ ಮೊದಲೇ ತಯಾರಿಸಿಟ್ಟ ಮಸಾಲಾ ಪುಡಿಯನ್ನು ಸೇರಿಸಿ ಉರಿಯನ್ನು ಆಫ್ ಮಾಡಿದರೆ ರುಚಿಕರವಾದ ಪಲ್ಯ ಸವಿಯಲು ಸಿದ್ಧ!

ಕಾಮೆಂಟ್‌ಗಳು