ಫ್ರೂಟ್ ಸ್ಯಾಂಡ್ ವಿಚ್ | Fruit Sandwich

Click here to read in English.

ನಮಗೆಲ್ಲ ಗೊತ್ತಿರುವಂತೆ ಹಣ್ಣುಗಳು ನಮ್ಮ ದೇಹಕ್ಕೆ ಬೇಕಾದ ವಿವಿಧ ಪೋಷಕಾಂಶಗಳ ಆಗರ. ಹಣ್ಣುಗಳನ್ನು ಇಷ್ಟಪಡುವವರಿಗಂತೂ ವರ್ಷವಿಡೀ ಒಂದಲ್ಲಾ ಒಂದು ಹಣ್ಣಿನ ಸೀಜನ್ ಇದ್ದೇ ಇರುತ್ತದೆ. ಈಗಂತೂ ಆಯಾ ಹಣ್ಣಿನ ಸೀಜನ್ ನಲ್ಲಿ ಹಣ್ಣಿನ ಮೇಳಗಳು ನಡೆಯುವುದು ಸಾಮಾನ್ಯ. ನಾವಂತೂ ಈ ವರ್ಷದ ದ್ರಾಕ್ಷಿ ಸೀಜನ್ ನ್ನು ಚೆನ್ನಾಗಿ ಎಂಜಾಯ್ ಮಾಡಿದೆವು! ಯಾವಾಗಲೂ ತಯಾರಿಸುವ ಫ್ರೂಟ್ ಸಲಾಡ್, ಐಸ್ ಕ್ರೀಮ್ ಹೊರತಾಗಿ ಇನ್ನೇನಾದರೂ ಹೊಸದನ್ನು ಟ್ರೈ ಮಾಡಲು ಯೋಚಿಸಿದಾಗ ತುಂಬಾ ದಿನಗಳ ಹಿಂದೆ ರೆಸ್ಟುರಾಂಟ್ ಒಂದರಲ್ಲಿ ಸವಿದಿದ್ದ ಫ್ರೂಟ್ ಸ್ಯಾಂಡ್ ವಿಚ್ ನೆನಪಾಯಿತು.
ಸಲಾಡ್ ಮತ್ತು ಐಸ್ ಕ್ರೀಮ್ ಗಳಿಗೆ ದ್ರಾಕ್ಷಿ ಹಣ್ಣಿನ ಜತೆಗೆ ಪೈನಾಪಲ್ ಒಳ್ಳೆಯ ಕಾಂಬಿನೇಶನ್. ಅದೃಷ್ಟಕ್ಕೆ ನನ್ನ ಬಳಿ ಈ ಎರಡೂ ಹಣ್ಣುಗಳಿದ್ದವು! ಕ್ರೀಮ್ ನ ಜತೆಗೆ ಈ ಎರಡು ಹಣ್ಣುಗಳನ್ನು ಬಳಸಿ ತಯಾರಿಸಿದ ಸ್ಯಾಂಡ್ ವಿಚ್ ಸೂಪರ್ಬ್ ಆಗಿತ್ತು!
ಬಹಳ ಸುಲಭದಲ್ಲಿ ತಯಾರಿಸಬಹುದಾದ ಈ ಸ್ಯಾಂಡ್ ವಿಚ್ ನ್ನು ನೀವೂ ತಯಾರಿಸಿ ನೋಡಿ. ಸ್ಯಾಂಡ್ ವಿಚ್ ತಯಾರಿಸುವ ಮೊದಲು ಒಂದು ಚಿಕ್ಕ ಸಲಹೆ: ಈ ರೆಸಿಪಿಗೆ ಬಳಸುವ ಎಲ್ಲ ಸಾಮಗ್ರಿಗಳನ್ನೂ ಮೊದಲೇ ಫ್ರಿಜ್ ನಲ್ಲಿಟ್ಟಿರಿ. ಏಕೆಂದರೆ ಫ್ರೂಟ್ ಸ್ಯಾಂಡ್ ವಿಚ್ ತಣ್ಣಗಿದ್ದಾಗಲೇ ತಿನ್ನಲು ಚೆನ್ನಾಗಿರುತ್ತದೆ!


ತಯಾರಿಸಲು ಬೇಕಾಗುವ ಸಮಯ: 30 - 35 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಈ ಅಳತೆಯಿಂದ 8 ಫ್ರೂಟ್ ಸ್ಯಾಂಡ್ ವಿಚ್ ಗಳನ್ನು ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು:
  • ಸ್ವೀಟ್ ಬ್ರೆಡ್ - 16 ಸ್ಲೈಸ್ ಗಳು ( ಸ್ವೀಟ್ ಬ್ರೆಡ್ ಸಿಗದಿದ್ದರೆ ಸ್ಯಾಂಡ್ ವಿಚ್ ಬ್ರೆಡ್ ಬಳಸಬಹುದು)
  • ಮೀಡಿಯಮ್ ಅಥವಾ ಚಿಕ್ಕ ಚೂರುಗಳಾಗಿ ಹೆಚ್ಚಿದ ಪೈನಾಪಲ್ - 2 ಕಪ್
  • ದ್ರಾಕ್ಷಿ ಹಣ್ಣು - 2 ಕಪ್
  • ಸಕ್ಕರೆ ಪುಡಿ - 1/4 ಕಪ್
  • ನೀರು - 1 ಕಪ್
  • ಫ್ರೆಶ್ ಕ್ರೀಮ್ - 200 ಗ್ರಾಂ

ತಯಾರಿಸುವ ವಿಧಾನ:
  • 1 ಕಪ್ ನೀರಿಗೆ 3 ಟೀ ಚಮಚದಷ್ಟು ಸಕ್ಕರೆ ಪುಡಿ ಸೇರಿಸಿ ಕದಡಿಕೊಳ್ಳಿ. 
  • ಫ್ರೆಶ್ ಕ್ರೀಮ್ ನ್ನು ಚೆನ್ನಾಗಿ ಬೀಟ್ ಮಾಡಿ ವಿಪ್ಪಿಂಗ್ ಕ್ರೀಮ್ ತಯಾರಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಬಳಸುವವರೆಗೆ ಫ್ರಿಜ್ ನಲ್ಲಿಟ್ಟಿರಿ.
  • 2 ಬ್ರೆಡ್ ಸ್ಲೈಸ್ ಗಳನ್ನು ತೆಗೆದುಕೊಳ್ಳಿ. ಇದರ ಎರಡೂ ಮೇಲ್ಮೈಗೂ 2 - 3 ಚಮಚದಷ್ಟು ಸಕ್ಕರೆ ನೀರನ್ನು ಚಿಮುಕಿಸಿ.
  • ಒಂದು ಬ್ರೆಡ್ ನ ಮೇಲೆ ಒಂದು ದಪ್ಪ ಪದರ ವಿಪ್ಪಿಂಗ್ ಕ್ರೀಮ್ ನ್ನು ಹರಡಿ. ಇದರಮೇಲೆ ಪೈನಾಪಲ್ ಚೂರುಗಳು ಮತ್ತು ದ್ರಾಕ್ಷಿ ಹಣ್ಣುಗಳನ್ನು ಧಾರಾಳವಾಗಿ ಉದುರಿಸಿ.
  • ಇದರ ಮೇಲೆ ಇನ್ನೊಂದು ಬ್ರೆಡ್ ಸ್ಲೈಸ್ ಇಟ್ಟರೆ ಸವಿಯಾದ ಕೂಲ್ ಕೂಲ್ ಸ್ಯಾಂಡ್ ವಿಚ್ ಸವಿಯಲು ಸಿದ್ಧ! 


ಟಿಪ್ಸ್:
  • ಸ್ಯಾಂಡ್ ವಿಚ್ ತಯಾರಿಸುವ ಮೊದಲು ಇದಕ್ಕೆ ಬಳಸುವ ಸಾಮಗ್ರಿಗಳನ್ನು ಫ್ರಿಜ್ ನಲ್ಲಿಟ್ಟು ತಣ್ಣಗೆ ಮಾಡಿಕೊಳ್ಳಿ. ಏಕೆಂದರೆ ಈ ಸ್ಯಾಂಡ್ ವಿಚ್ ತಣ್ಣಗಿದ್ದಾಗಲೇ ತಿನ್ನಲು ಚೆನ್ನ!

ಕಾಮೆಂಟ್‌ಗಳು