ಆರೇಂಜ್ ಶಾರ್ಟ್ ಬ್ರೆಡ್ | ಆರೇಂಜ್ ಬಿಸ್ಕಿಟ್ | Orange Shortbread | Orange Biscuits

Click here for English version.

ಕೆಲ ದಿನಗಳ ಹಿಂದೆ ಸುಪರ್ ಮಾರ್ಕೆಟ್ ನಿಂದ ತಂದ ಮೈದಾ ಹಿಟ್ಟಿನ ಪ್ಯಾಕೆಟ್ ಮೇಲೆ ಒಂದು ರೆಸಿಪಿ ಇತ್ತು. ಆರೇಂಜ್ ಝೆಸ್ಟ್ ಬಳಸಿ ಬಿಸ್ಕಿಟ್ ತಯಾರಿಸುವ ವಿಧಾನ ಅಲ್ಲಿತ್ತು. ಆರೇಂಜ್ ಝೆಸ್ಟ್ ಎಂದರೆ ಮತ್ತೇನಿಲ್ಲ, ಕಿತ್ತಳೆ ಹಣ್ಣಿನ ಹೊರಭಾಗದ ಸಿಪ್ಪೆಯನ್ನು ತುರಿದು ಅದನ್ನು ಬಿಸ್ಕಿಟ್, ಕೇಕ್ ಇತ್ಯಾದಿ ತಿಂಡಿಗಳನ್ನು ತಯಾರಿಸಲು ಬಳಸುತ್ತಾರೆ. ಇದು ತಿಂಡಿಗಳಿಗೆ ಒಳ್ಳೆಯ ಪರಿಮಳ ಕೊಡುತ್ತದೆ. ನಾನಿನ್ನೂ ಆರೇಂಜ್ ಝೆಸ್ಟ್ ಬಳಸಿ ಯಾವುದೇ ತಿಂಡಿಗಳನ್ನು ತಯಾರಿಸಿರಲಿಲ್ಲ. ಹಿಟ್ಟಿನ ಪ್ಯಾಕೆಟ್ ಮೇಲಿನ ರೆಸಿಪಿ ಚೆನ್ನಾಗಿರುವಂತೆ ಕಂಡಿತು, ಹಾಗೇ ಟ್ರೈ ಮಾಡಿದ್ದಾಯಿತು. ಕಿತ್ತಳೆ ಪರಿಮಳದ ಗರಿಗರಿಯಾದ ಬಿಸ್ಕಿಟ್ ಗಳು ನಮಗೆ ಬಹಳ ಇಷ್ಟವಾದವು!
ಬಹಳ ಸುಲಭವಾಗಿ ತಯಾರಿಸಬಹುದಾದ ಈ ಬಿಸ್ಕಿಟ್ ಗೆ ನಿಮ್ಮಿಷ್ಟದ ಯಾವುದೇ ಆಕಾರ ಕೊಡಬಹುದು. ನಾನು ಒಂದಷ್ಟು ಬಿಸ್ಕಿಟ್ ಗಳನ್ನು ಆಯತಾಕಾರದಲ್ಲಿ ತಯಾರಿಸಿದೆ ಮತ್ತು ಇನ್ನು ಸ್ವಲ್ಪವನ್ನು ಚಿಕ್ಕ ಸ್ಟಿಕ್ ಗಳಂತೆ ತಯಾರಿಸಿದೆ. ಚಿಕ್ಕ ಮಕ್ಕಳಿಗೆ ಹಲ್ಲು ಬರುವ ಸಮಯದಲ್ಲಿ ಸಾಮಾನ್ಯವಾಗಿ ಏನೇ ಸಿಕ್ಕಿದರೂ ಕಚ್ಚುತ್ತಿರುತ್ತಾರೆ. ಅಂಗಡಿಯಲ್ಲಿ ಸಿಗುವ ಟೀತಿಂಗ್ ಬಿಸ್ಕಿಟ್, ರಸ್ಕ್ ಗೆ ಬದಲಾಗಿ ಮನೆಯಲ್ಲೇ ತಯಾರಿಸಿದ ಈ ಬಿಸ್ಕಿಟ್ ಗಳನ್ನು ಅವರಿಗೆ ಕೊಡಬಹುದು.
ಆರೇಂಜ್ ಶಾರ್ಟ್ ಬ್ರೆಡ್ (ಬಿಸ್ಕಿಟ್) ತಯಾರಿಸುವ ವಿಧಾನ ಇಂತಿದೆ:

ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಂ
ಈ ಅಳತೆಯಿಂದ ಸುಮಾರು 25 ಬಿಸ್ಕಿಟ್ ಗಳನ್ನು ತಯಾರಿಸಬಹುದು


ಬೇಕಾಗುವ ಸಾಮಗ್ರಿಗಳು:
  • 2 ಜ್ಯೂಸ್ ಆರೇಂಜ್ ನ ಸಿಪ್ಪೆ - ತುರಿದದ್ದು
  • ಸಕ್ಕರೆ - 1/2 ಕಪ್ (ಸಿಹಿ ಬೇಕಿದ್ದರೆ 2 ಟೀ ಸ್ಪೂನ್ ಜಾಸ್ತಿ ಹಾಕಿ)
  • ಮೈದಾ ಹಿಟ್ಟು - 3 ಕಪ್ (ಅಂದಾಜು)
  • ಬೆಣ್ಣೆ - 125 ಗ್ರಾಂ

ತಯಾರಿಸುವ ವಿಧಾನ:
  • ಸಕ್ಕರೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ.
  • ರೂಮ್ ಟೆಂಪರೇಚರ್ ನಲ್ಲಿರುವ ಬೆಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಚೆನ್ನಾಗಿ ಬೀಟ್ ಮಾಡಿ. ಇದಕ್ಕೆ ಸಕ್ಕರೆ ಪುಡಿ ಸೇರಿಸಿ ಬೀಟ್ ಮಾಡಿ ಕ್ರೀಮ್ ನಂತೆ ಮಾಡಿ. ಇದಕ್ಕೆ ಆರೇಂಜ್ ಝೆಸ್ಟ್ ಸೇರಿಸಿ ಮಿಕ್ಸ್ ಮಾಡಿ. 
  • ಬೆಣ್ಣೆ ಮಿಶ್ರಣಕ್ಕೆ ಮೈದಾ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಹಾಕಿ ಕಲಸಿ ಮೆತ್ತಗಿನ ಹಿಟ್ಟನ್ನು ತಯಾರಿಸಿಕೊಳ್ಳಿ. ಮಿಶ್ರಣ ಉಂಡೆ ಕಟ್ಟುವ ಹದಕ್ಕೆ ಬರುವತನಕ ಮೈದಾ ಹಿಟ್ಟನ್ನು ಸೇರಿಸಿ. ಹಿಟ್ಟನ್ನು ನಾದಿ ಒಂದು ದೊಡ್ಡ ಉಂಡೆಯನ್ನು ತಯಾರಿಸಿಕೊಳ್ಳಿ.
  • ಲಟ್ಟಿಸುವ ಜಾಗಕ್ಕೆ ಒಣ ಹಿಟ್ಟನ್ನು ಉದುರಿಸಿಕೊಂಡು ಲಟ್ಟಣಿಗೆಯ ಸಹಾಯದಿಂದ ಹಿಟ್ಟಿನ ಉಂಡೆಯನ್ನು ಲಟ್ಟಿಸಿ ಬೇಕಾದ ಆಕಾರಕ್ಕೆ ಕತ್ತರಿಸಿ. ಇಲ್ಲವೇ ನಿಮಗೆ ಬೇಕಾದ ಆಕಾರಕ್ಕೆ ಈ ಬಿಸ್ಕಿಟ್ ತಯಾರಿಸಬಹುದು.
  • ಬಿಸ್ಕಿಟ್ ಗಳನ್ನು 170°C ಗೆ ಪ್ರೀ ಹೀಟ್ ಮಾಡಿದ ಓವನ್ ನಲ್ಲಿ 15 - 20 ನಿಮಿಷ ಅಥವಾ ಹೊಂಬಣ್ಣ ಬರುವವರೆಗೆ ಬೇಯಿಸಿ 5 ನಿಮಿಷದ ನಂತರ ಓವನ್ ನಿಂದ ಹೊರತೆಗೆಯಿರಿ.
  • ಈ ಬಿಸ್ಕಿಟ್ ಗಳು ತಣ್ಣಗಾದ ನಂತರ ಚೆನ್ನಾಗಿ ಗರಿಗರಿಯಾಗುತ್ತವೆ. ಟೀ ಅಥವಾ ಕಾಫಿಯೊಡನೆ ಸವಿಯಲು ಬಹಳ ಚೆನ್ನಾಗಿರುತ್ತದೆ.  

ಕಾಮೆಂಟ್‌ಗಳು