Click here for English version.
ಹಲಸಿನ ಸೀಜನ್ ನಲ್ಲಿ ಊರಿಗೆ ಹೋದಾಗ ನಾನು ಸವಿದ ಅಡಿಗೆಗಳಲ್ಲಿ ಈ ಪಲ್ಯವೂ ಒಂದು. ಹದಿಗಡ್ಡೆ ಎಂದರೆ ಚೆನ್ನಾಗಿ ಬಲಿತ ಹಲಸಿನ ಕಾಯಿಯ ಬೀಜದ ಹೊರಭಾಗದಲ್ಲಿರುವ ಮೆತ್ತಗಿನ ಸಿಪ್ಪೆ. ಹಲಸಿನ ಕಾಯಿಯ ಪ್ರತಿಯೊಂದು ಭಾಗವೂ ಒಂದಿಲ್ಲೊಂದು ರೀತಿಯಲ್ಲಿ ಬಳಕೆಗೆ ಉಪಯುಕ್ತವಾಗಿದೆ. ಇದರ ತೊಳೆ, ಬೀಜ, ಬೀಜದ ಹೊರಗಿನ ಮೆತ್ತಗಿನ ಸಿಪ್ಪೆ (ಹದಿಗಡ್ಡೆ) ಇವೆಲ್ಲ ನಮ್ಮ ಆಹಾರವಾಗಿ ಬಳಕೆಯಾದರೆ, ಇದರ ಹೊರಗಿನ ಗಟ್ಟಿಯಾದ ಸಿಪ್ಪೆ, ಇತ್ಯಾದಿ ಭಾಗಗಳು ಜಾನುವಾರುಗಳಿಗೆ ಒಳ್ಳೆಯ ಮೇವು.
ಹದಿಗಡ್ಡೆಯನ್ನು ಅಡುಗೆಗೆ ಬಳಸುವುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಒಮ್ಮೆ ಹದಿಗಡ್ಡೆಯನ್ನು ಪಲ್ಯಕ್ಕೆಂದು ಬಿಡಿಸುತ್ತಿದ್ದರಂತೆ. ಆಗ ಮನೆಗೆ ಬಂದಿದ್ದ ದೂರದ ನೆಂಟರೊಬ್ಬರು 'ಅಯ್ಯೋ, ಇದನ್ನೂ ನೀವು ಅಡುಗೆಗೆ ಬಳಸುತ್ತೀರಾ?' ಎಂದು ಮುಖ ಹಿಂಡಿದ್ದರಂತೆ. ನಂತರ ಈ ಪಲ್ಯದ ರುಚಿ ನೋಡಿದ ಅವರು ಪಲ್ಯವನ್ನು ಮತ್ತೆ ಮತ್ತೆ ಹಾಕಿಸಿಕೊಂಡು ಉಂಡದ್ದನ್ನು ನಮ್ಮ ಮನೆಯಲ್ಲಿ ಈಗಲೂ ನೆನಪಿಸಿಕೊಳ್ಳುತ್ತಾರೆ.
ಹಲಸಿನಕಾಯಿಯ ಚಿಪ್ಸ್, ಹಪ್ಪಳ ತಯಾರಿಸುವಾಗ ಹದಿಗಡ್ಡೆಯನ್ನೂ ಬಿಡಿಸಿಕೊಂಡು ಅದರ ಪಲ್ಯವನ್ನು ತಯಾರಿಸುತ್ತಾರೆ. ಸುಲಭದಲ್ಲಿ ತಯಾರಿಸಬಹುದಾದ ಈ ಪಲ್ಯ ಊಟಕ್ಕೆ ಬಹಳ ರುಚಿ!
ತಯಾರಿಸಲು ಬೇಕಾಗುವ ಸಮಯ: 15 - 20 ನಿಮಿಷಗಳು
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಸುಲಭ
ಬೇಕಾಗುವ ಸಾಮಗ್ರಿಗಳು:
- ಎಣ್ಣೆ - 8 ಟೇಬಲ್ ಚಮಚ
- ಸಣ್ಣಗೆ ಹೆಚ್ಚಿದ ಹದಿಗಡ್ಡೆ - 3 1/2 ಕಪ್
- ಉದ್ದಿನಬೇಳೆ - 1 1/2 ಟೇಬಲ್ ಚಮಚ
- ಇಂಗು - ಚಿಟಿಕೆ
- ಸಾಸಿವೆ - 1 ಟೇಬಲ್ ಚಮಚ
- ಸಾಂಬಾರ್ ಪುಡಿ - 2 ಟೇಬಲ್ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಆಮ್ ಚೂರ್ ಪುಡಿ - ರುಚಿಗೆ ತಕ್ಕಷ್ಟು
- ಸಕ್ಕರೆ - 1/2 ಟೀ ಚಮಚ
- ತೆಂಗಿನತುರಿ - 1/2 ಕಪ್
ತಯಾರಿಸುವ ವಿಧಾನ:
- ಒಂದು ದಪ್ಪ ತಳದ ಬಾಣಲೆಯಲ್ಲಿ 8 ಟೇಬಲ್ ಚಮಚದಷ್ಟು ಎಣ್ಣೆ ಕಾಯಿಸಿಕೊಳ್ಳಿ. ಇದಕ್ಕೆ ಉದ್ದಿನಬೇಳೆ, ಇಂಗು, ಸಾಸಿವೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
- ಒಗ್ಗರಣೆ ಮಿಶ್ರಣಕ್ಕೆ ಸಾಂಬಾರ್ ಪುಡಿ ಸೇರಿಸಿ ಒಮ್ಮೆ ಕೈಯಾಡಿಸಿ. ಇದಕ್ಕೆ ಸಣ್ಣಗೆ ಹೆಚ್ಚಿದ ಹದಿಗಡ್ಡೆ ಚೂರುಗಳನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಹಾಗೂ ಆಮ್ ಚೂರ್ ಪುಡಿ ಸೇರಿಸಿ ಮಿಕ್ಸ್ ಮಾಡಿ.
- ಪಲ್ಯದ ಮಿಶ್ರಣವನ್ನು ನೀರು ಸೇರಿಸದೆ, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ. ಆಗಾಗ್ಗೆ ಕೈಯಾಡಿಸುತ್ತಿರಿ.
- ಪಲ್ಯ ಬೆಂದ ನಂತರ ಇದಕ್ಕೆ ತೆಂಗಿನತುರಿ ಸೇರಿಸಿ 3 - 4 ನಿಮಿಷ ಬಿಸಿಮಾಡಿ ಇಳಿಸಿ.
- ರುಚಿಕಟ್ಟಾದ ಪಲ್ಯವನ್ನು ಅನ್ನ ಅಥವಾ ರೊಟ್ಟಿಯೊಡನೆ ಸವಿದುನೋಡಿ!
Your back with your amazing recipes!!!!
ಪ್ರತ್ಯುತ್ತರಅಳಿಸಿYeah Shubha, u r true :)
ಅಳಿಸಿ