ರಾಗಿ ಮಾಲ್ಟ್ | ರಾಗಿ ಸರಿ | ಬೇಬಿ ಫುಡ್ | Ragi Malt | Ragi Sari | Mixed Grains Powder for Kids | Baby Food Recipes

Click here for English version.

ಪುಟ್ಟ ಕಂದಮ್ಮಗಳಿಗೆ ಸಾಮಾನ್ಯವಾಗಿ 6ನೇ ತಿಂಗಳಿನ ನಂತರ ಹಣ್ಣು, ಸೆರಿಲಾಕ್ ಇತ್ಯಾದಿ ಆಹಾರಗಳನ್ನು ಸ್ವಲ್ಪ ಸ್ವಲ್ಪವಾಗಿ ಅಭ್ಯಾಸ ಮಾಡಿಸಲಾಗುತ್ತದೆ. ಇನ್ನೂ ಹಲ್ಲು ಬಂದಿರದ ಕಾರಣ ಅವರಿಗೆ ಸುಲಭದಲ್ಲಿ ಜೀರ್ಣವಾಗುವ, ಜೊತೆಗೇ ಒಳ್ಳೆಯ ಪೌಷ್ಟಿಕಾಂಶವುಳ್ಳ ಆಹಾರ ಬೇಕು. ಬೇಯಿಸಿದ ಹಾಗೂ ಮ್ಯಾಶ್ ಮಾಡಿದ ಹಣ್ಣುಗಳು, ರಾಗಿ ಮಾಲ್ಟ್, ತಾಜಾ ಹಣ್ಣಿನ ಜ್ಯೂಸ್, ಓಟ್ಸ್ ಗಂಜಿ, ಇವೆಲ್ಲ ಮಕ್ಕಳಿಗೆ ಸಾಮಾನ್ಯವಾಗಿ ಇಷ್ಟವಾಗುತ್ತವೆ. 
ಪುಟ್ಟ ಮಕ್ಕಳ ಆಹಾರದ ಬಗ್ಗೆ ನಾನು ಬೇರೆಯಬೇಕೆಂದು ಎಷ್ಟೋ ದಿನಗಳಿಂದ ಅಂದುಕೊಂಡಿದ್ದರೂ ಬರೆಯಲು ಸಾಧ್ಯವಾಗಿರಲಿಲ್ಲ. ಕಂದಮ್ಮಗಳ ಆರೋಗ್ಯ ಹಾಗೂ ಬೆಳವಣಿಗೆಗೆ ಸರಿಹೊಂದುವಂತೆ ಅವರ ಆಹಾರಕ್ರಮ ಇರಬೇಕಾಗುತ್ತದೆ. ನಾನು ಮಗಳಿಗೆ ರಾಗಿ ಸರಿ ತಯಾರಿಸುವಾಗ ಅನ್ನಿಸಿತು, ಇದನ್ನು ಬ್ಲಾಗ್ ನಲ್ಲಿ ಬರೆದರೆ ಅನೇಕ ಅಮ್ಮಂದಿರಿಗೆ ಉಪಯೋಗವಾದೀತೆಂದು.. ಹೀಗಾಗಿ ಈ ಪೋಸ್ಟ್!
ಈ ರಾಗಿ ಸರಿ / ಮಾಲ್ಟ್ ನ್ನು ನನ್ನ ಮಗಳಿಗೆ ಅವಳ 10ನೇ ತಿಂಗಳಿನಿಂದ ಕೊಡುತ್ತ ಬಂದಿದ್ದೇನೆ. ವಿವಿಧ ಧಾನ್ಯಗಳನ್ನು ಬಳಸಿ ತಯಾರಿಸುವ ಈ ರಾಗಿ ಮಾಲ್ಟ್ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಒಳ್ಳೆಯದು. ಈ ಮಾಲ್ಟ್ ಪೌಡರ್ ನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ 4 - 5 ತಿಂಗಳುಗಳ ತನಕ ಇಟ್ಟುಕೊಂಡು ಬಳಸಬಹುದು. ಪುಟ್ಟ ಕಂದಮ್ಮಗಳಿಗೆ ತಯಾರಿಸುವುದಾದರೆ ಕಡಿಮೆ ಪ್ರಮಾಣದಲ್ಲಿ ತಯಾರಿಸಿಕೊಳ್ಳುವುದು ಒಳ್ಳೆಯದು. ರಾಗಿ ಸರಿ ಪೌಡರ್ ತಯಾರಿಸುವ ವಿಧಾನ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಅವಧಿ: 8 - 10 ದಿನಗಳು 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 
ಈ ಅಳತೆಯಿಂದ ಸುಮಾರು 2.5 kg ಯಷ್ಟು ಮಾಲ್ಟ್ ಪೌಡರ್ ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು:
  • ರಾಗಿ ಕಾಳು - 1/2 kg
  • ಕುಚ್ಚಲಕ್ಕಿ - 1/4 kg
  • ಗೋಧಿ - 1/4 kg
  • ಹೆಸರುಕಾಳು - 125 gm
  • ಬಾದಾಮಿ - 125 gm
  • ಬಾರ್ಲಿ - 125 gm
  • ಜೋಳ - 125 gm
  • ಶೇಂಗಾ - 125 gm
  • ಲವಂಗ - 15 ಮೊಗ್ಗುಗಳು 
  • ಒಂದೆಲಗ (ಬೇಕಿದ್ದರೆ) - 15 ರಿಂದ 20

ತಯಾರಿಸುವ ವಿಧಾನ:
  • ರಾಗಿ, ಗೋಧಿ, ಹೆಸರುಕಾಳು ಇಷ್ಟನ್ನೂ ಬೇರೆಬೇರೆಯಾಗಿ ತೊಳೆದು ಒಂದು ದಿನ ನೀರಿನಲ್ಲಿ ನೆನೆಸಿಡಿ. ಮರುದಿನ ಚೆನ್ನಾಗಿ ತೊಳೆದು ನೀರನ್ನೆಲ್ಲ ಬಸಿದು, ಒದ್ದೆ ಬಟ್ಟೆಯಲ್ಲಿ ಕಟ್ಟಿ ಒಂದು ಪಾತ್ರೆಯಲ್ಲಿ ಇಡಿ. 1 - 2 ದಿನ ಇದನ್ನು ಹಾಗೇ ಇಟ್ಟು ಚೆನ್ನಾಗಿ ಮೊಳಕೆ ಬಂದ ನಂತರ ಬಿಸಿಲಿನಲ್ಲಿ ಬಟ್ಟೆ ಮುಚ್ಚಿ ಒಣಗಿಸಿ. 
  • ಅಕ್ಕಿ, ಬಾದಾಮಿ, ಬಾರ್ಲಿ, ಜೋಳ, ಶೇಂಗಾ ಇಷ್ಟನ್ನೂ ಬೇರೆಬೇರೆಯಾಗಿ ತೊಳೆದು ಬಿಸಿಲಿನಲ್ಲಿ ಬಟ್ಟೆ ಮುಚ್ಚಿಟ್ಟು ಒಣಗಿಸಿ.
  • ಇವೆಲ್ಲ ಧಾನ್ಯಗಳು ಚೆನ್ನಾಗಿ ಒಣಗಲು ಕನಿಷ್ಟ 3 - 4 ದಿನಗಳಾದರೂ ಬೇಕು.
  • ಒಂದೆಲಗವನ್ನು ಬೇರು ಸಹಿತ ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ.
  • ಚೆನ್ನಾಗಿ ಒಣಗಿದ ಒಂದೊಂದೇ ಬಗೆಯ ಧಾನ್ಯಗಳನ್ನು ಒಂದು ದಪ್ಪ ತಳದ ಬಾಣಲೆಯಲ್ಲಿ ಹಾಕಿಕೊಂಡು ಸಣ್ಣ ಉರಿಯಲ್ಲಿ ಪರಿಮಳ ಬರುವತನಕ ಹುರಿಯಿರಿ. ಲವಂಗವನ್ನೂ ಒಂದೆರಡು ನಿಮಿಷ ಹುರಿದುಕೊಳ್ಳಿ. 
  • ತಣ್ಣಗಾದ ನಂತರ ಎಲ್ಲ ಸಾಮಗ್ರಿಗಳನ್ನೂ ಮಿಕ್ಸ್ ಮಾಡಿ. ಒಂದೆಲಗವನ್ನೂ ಇದರೊಡನೆ ಸೇರಿಸಿ. 
  • ಸಾಮಗ್ರಿಗಳನ್ನು ಗಿರಣಿಯಲ್ಲಿ ಕೊಟ್ಟು ಹಿಟ್ಟು ತಯಾರಿಸಿ ಇಲ್ಲವೇ ಮನೆಯಲ್ಲೇ ಮಿಕ್ಸಿಯಲ್ಲಿ ಪುಡಿಮಾಡಿ. ಮಿಕ್ಸಿಯಲ್ಲಿ ಪುಡಿಮಾಡಿದರೆ ಹಿಟ್ಟು ಸ್ವಲ್ಪ ತರಿತರಿಯಾಗಿರುತ್ತದೆ. 
  • ತಯಾರಾದ ಮಾಲ್ಟ್ ಪೌಡರ್ ನ್ನು ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟು ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ಹೊರಗೆ ತೆಗೆದಿಟ್ಟುಕೊಂಡು ಬಳಸಿ. 


ಮಾಲ್ಟ್ ತಯಾರಿಸುವ ವಿಧಾನ: 1 1/2 ಟೇಬಲ್ ಸ್ಪೂನ್ ಅಥವಾ ಅಗತ್ಯವಿರುವಷ್ಟು ಮಾಲ್ಟ್ ಪೌಡರ್ ನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಇದಕ್ಕೆ 3 ಟೇಬಲ್ ಸ್ಪೂನ್ ನಷ್ಟು ನೀರು ಸೇರಿಸಿ ಮಿಕ್ಸ್ ಮಾಡಿ. ಇದಕ್ಕೆ ಒಂದರಿಂದ ಒಂದೂವರೆ ಕಪ್ ನಷ್ಟು ಹಾಲು, ಕಾಲು ಚಮಚ ತುಪ್ಪ (ಬೇಕಿದ್ದರೆ) ಸೇರಿಸಿ ಆಗಾಗ್ಗೆ ಕೈಯಾಡಿಸುತ್ತ ಬಿಸಿಮಾಡಿ. ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಸೇರಿಸಿ. ಮಿಶ್ರಣ ಕುದಿಯತೊಡಗಿದಾಗ ಉರಿ ಆಫ್ ಮಾಡಿ. ತಣ್ಣಗಾದ ನಂತರ ಕುಡಿಯಲು ಕೊಡಿ.

ಟಿಪ್ಸ್:
  • ಮಾಲ್ಟ್ ಪುಡಿ ತಯಾರಿಸುವಾಗ ಸ್ವಲ್ಪ ಏಲಕ್ಕಿ ಸೇರಿಸಿದರೆ ಮಾಲ್ಟ್ ಸುವಾಸಿತವಾಗಿ ಕುಡಿಯಲು ಚೆನ್ನಾಗಿರುತ್ತದೆ. ಅಥವಾ ಸ್ವಲ್ಪ ಕೇಸರಿ ದಳಗಳನ್ನು ಬೇಕಿದ್ದರೂ ಸೇರಿಸಬಹುದು. 
  • ಇಡೀ ರಾಗಿ ಸಿಗದಿದ್ದರೆ ಅಂಗಡಿಯಲ್ಲಿ ಸಿಗುವ ರಾಗಿ ಹಿಟ್ಟನ್ನು ಬಳಸಬಹುದು. 
  • ಹೆಸರುಕಾಳು ಮತ್ತು ಗೋಧಿಯನ್ನು ಮೊಳಕೆ ಬರಿಸದೆ ಹಾಗೇ ಒಣಗಿಸಿಯೂ ಬಳಸಬಹುದು.

ಕಾಮೆಂಟ್‌ಗಳು

  1. Thank you very much for nutritious food for baby and please share if u know any other home made nutritious food for baby.
    Regards,
    Vidya

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)