ಈರುಳ್ಳಿ ಸೊಪ್ಪಿನ ರೊಟ್ಟಿ । ಸ್ಪ್ರಿಂಗ್ ಆನಿಯನ್ ರೊಟ್ಟಿ


ಮನೆಯಲ್ಲಿ ಈರುಳ್ಳಿ ತಂದಿಟ್ಟು ತುಂಬಾ ದಿನಗಳಾಗಿದ್ದರಿಂದ ಅವು ಅಲ್ಲೇ ಮೊಳಕೆಯೊಡೆಯತೊಡಗಿದ್ದವು. ಅವನ್ನು ಹಾಗೇ ತೆಗೆದುಕೊಂಡು ಹೋಗಿ ಹಿತ್ತಿಲಲ್ಲಿ ನೆಟ್ಟಿದ್ದೆ. ಈಗ ಅವೆಲ್ಲ ಚೆನ್ನಾಗಿ ಬೆಳೆದು ನಮ್ಮ ಅಡುಗೆಗೆ ಬಳಕೆಯಾಗುತ್ತಿವೆ. ಮನೆಯಲ್ಲೇ ಬೆಳೆದ ತರಕಾರಿ, ಹಣ್ಣುಗಳನ್ನು ಬಳಸುವುದರಲ್ಲಿ ಇರುವ ಖುಷಿಯೇ ಬೇರೆ.. ಅಲ್ಲವೆ?
ಈ ರೊಟ್ಟಿ ನನ್ನ ಇತ್ತೀಚಿನ ಎಕ್ಸ್ ಪರಿಮೆಂಟ್. ಬೇರೆ ತರಕಾರಿಗಳನ್ನು ಬಳಸಿ ರೊಟ್ಟಿ ತಯಾರಿಸುವಂತೆಯೇ ಈರುಳ್ಳಿ ಸೊಪ್ಪಿನಲ್ಲೂ ರೊಟ್ಟಿ ಮಾಡಬಹುದೆನಿಸಿತು. ನನ್ನ ಶ್ರಮ ವ್ಯರ್ಥವಾಗಲಿಲ್ಲ, ರೊಟ್ಟಿ ಬಹಳ ಚೆನ್ನಾಗಿ ಬಂತು! ಸುಲಭದಲ್ಲಿ ತಯಾರಿಸಬಹುದಾದ ಈರುಳ್ಳಿ ಸೊಪ್ಪಿನ ರೊಟ್ಟಿಯ ರೆಸಿಪಿ ಈ ಕೆಳಗಿನಂತಿದೆ..


ತಯಾರಿಸಲು ಬೇಕಾಗುವ ಸಮಯ: 1 ಘಂಟೆ
ಈ ಅಳತೆಯಿಂದ 8 ಮೀಡಿಯಮ್ ಸೈಜಿನ ರೊಟ್ಟಿಗಳನ್ನು ತಯಾರಿಸಬಹುದು
ಡಿಫಿಕಲ್ಟಿ ಲೆವೆಲ್: ಮೀಡಿಯಮ್

ಬೇಕಾಗುವ ಸಾಮಗ್ರಿಗಳು:
  • ಈರುಳ್ಳಿ ಸೊಪ್ಪು / ಸ್ಪ್ರಿಂಗ್ ಆನಿಯನ್ - 1 ಕಟ್ಟು
  • ಈರುಳ್ಳಿ - 2 (ದೊಡ್ಡದು)
  • ಅಕ್ಕಿಹಿಟ್ಟು - 1 1/2 ಕಪ್ (1 ಕಪ್ = 200 ಗ್ರಾಂ ಅಂದಾಜು)
  • ಹಸಿಮೆಣಸು - 2 ಅಥವಾ ಅಚ್ಚಮೆಣಸಿನಪುಡಿ - 1 1/2 ಟೀ ಸ್ಪೂನ್ (ಖಾರಕ್ಕೆ ತಕ್ಕಂತೆ)
  • ಮೊಸರು - 3/4 ಕಪ್ (ಟಿಪ್ಸ್ ನೋಡಿ)
  • ಉಪ್ಪು - ರುಚಿಗೆ ತಕ್ಕಷ್ಟು
  • ಸಕ್ಕರೆ (ಬೇಕಿದ್ದರೆ) - 3/4 ಟೀ ಸ್ಪೂನ್
  • ನೀರು - 1/4 ಕಪ್
  • ಬೇಯಿಸಲು ಎಣ್ಣೆ ಅಥವಾ ಬೆಣ್ಣೆ - ಸ್ವಲ್ಪ

ತಯಾರಿಸುವ ವಿಧಾನ:
  • ಈರುಳ್ಳಿ ಸೊಪ್ಪು, ಈರುಳ್ಳಿ ಹಾಗೂ ಹಸಿಮೆಣಸನ್ನು ಸಣ್ಣದಾಗಿ ಹೆಚ್ಚಿ ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಹಾಕಿಕೊಳ್ಳಿ. ಇದಕ್ಕೆ ಉಪ್ಪು ಹಾಗೂ ಸಕ್ಕರೆ ಸೇರಿಸಿ ಕಲಸಿ 10 ನಿಮಿಷ ಹಾಗೇ ಇಡಿ. ಅಷ್ಟರಲ್ಲಿ ಮಿಶ್ರಣ ಸ್ವಲ್ಪ ನೀರೊಡೆದು ಹಿಟ್ಟನ್ನು ಕಲಸಲು ಅನುಕೂಲವಾಗುತ್ತದೆ.
  • 10 ನಿಮಿಷದ ನಂತರ ಈ ಮಿಶ್ರಣಕ್ಕೆ ಒಂದೂವರೆ ಕಪ್ ನಷ್ಟು ಅಕ್ಕಿಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹಸಿಮೆಣಸು ಬಳಸದಿದ್ದರೆ ಅಕ್ಕಿಹಿಟ್ಟಿನ ಜೊತೆಗೆ ಖಾರಕ್ಕೆ ತಕ್ಕಷ್ಟು ಮೆಣಸಿನ ಪುಡಿಯನ್ನೂ ಸೇರಿಸಿ.
  • ಅಕ್ಕಿಹಿಟ್ಟಿಗೆ ಮೊಸರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ ಮೆತ್ತಗೆ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ಗಟ್ಟಿ ಎನಿಸಿದರೆ ಸ್ವಲ್ಪ ನೀರು ಸೇರಿಸಿ ಕಲಸಿ.
  • ಕಲಸಿದ ಹಿಟ್ಟನ್ನು 10 ನಿಮಿಷ ನೆನೆಯಲು ಬಿಡಿ. ಇಲ್ಲವೇ ಹಾಗೇ ಬೇಕಿದ್ದರೂ ಬಳಸಬಹುದು.
  • ತಯಾರಾದ ಹಿಟ್ಟಿನಿಂದ ದೊಡ್ಡ ನಿಂಬೆಗಾತ್ರದ ಉಂಡೆಗಳನ್ನು ಮಾಡಿಕೊಂಡು ಎಣ್ಣೆ ಸವರಿದ ಬಾಳೆಯೆಲೆ ಅಥವಾ ಪ್ಲಾಸ್ಟಿಕ್ ಶೀಟ್ ನ ಮೇಲೆ ಆದಷ್ಟು ತೆಳ್ಳಗೆ ತಟ್ಟಿ, ಕಾದ ಕಾವಲಿಯಮೇಲೆ ಹಾಕಿ ಎರಡೂ ಕಡೆ ಕೆಂಪಗೆ ಬೇಯಿಸಿ.
  • ರೊಟ್ಟಿ ಬೇಯಿಸುವಾಗ ಮೇಲಿನಿಂದ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕಿದರೆ ಚೆನ್ನಾಗಿರುತ್ತದೆ.
  • ರೊಟ್ಟಿ ಬಿಸಿ ಇರುವಾಗಲೇ ಬೆಣ್ಣೆ ಹಾಕಿಕೊಂಡು ತಿನ್ನಿ.


ಟಿಪ್ಸ್:
  • ಮೊಸರು ಹುಳಿ ಇದ್ದರೆ ಇಲ್ಲಿ ಹೇಳಿದ ಪ್ರಮಾಣಕ್ಕಿಂತ ಕಡಿಮೆ ಬಳಸಿ, ಸ್ವಲ್ಪ ಹೆಚ್ಚು ನೀರು ಸೇರಿಸಿ ಕಲಸಿ.

ಕಾಮೆಂಟ್‌ಗಳು