ಕ್ಯಾಶ್ಯೂ ಬಿಸ್ಕಿಟ್ । ಗೇರುಬೀಜದ ಬಿಸ್ಕಿಟ್ | ಗೋಡಂಬಿ ಬಿಸ್ಕಿಟ್


ಬಿಸ್ಕಿಟ್ - ಇದು ಮಕ್ಕಳಿಂದ ದೊಡ್ದವರವರೆಗೂ ಎಲ್ಲರಿಗೂ ಇಷ್ಟವಾಗುವ ತಿಂಡಿ. ನಮ್ಮ ಮನೆಯಲ್ಲೂ ಎಲ್ಲರೂ ಬಿಸ್ಕಿಟ್ ಪ್ರಿಯರು. ಅಂಗಡಿಯಿಂದ ಬಿಸ್ಕಿಟ್ ತರುವುದಷ್ಟೇ ಅಲ್ಲದೆ, ನಾನೂ ಮನೆಯಲ್ಲಿ ವಿವಿಧ ಬಿಸ್ಕಿಟ್ ಗಳನ್ನು ತಯಾರಿಸುತ್ತಿರುತ್ತೇನೆ. ಮನೆಯಲ್ಲಿ ತಯಾರಿಸುವ ಬೆಣ್ಣೆ ಬಿಸ್ಕಿಟ್, ನಿಪ್ಪಟ್ಟು ಇತ್ಯಾದಿ ಬೇಕರಿ ಸ್ಟೈಲ್ ತಿಂಡಿಗಳು ನಮ್ಮವರಿಗೆ ಬಹಳ ಇಷ್ಟ.
ಹೈದರಾಬಾದ್ ನಲ್ಲಿರುವ ಕರಾಚಿ ಬೇಕರಿಯ ಬಗ್ಗೆ ನಿಮಗೆ ಗೊತ್ತಿರಬಹುದು. ಅಲ್ಲಿ ಸಿಗುವ ಫ್ರೂಟ್ ಬಿಸ್ಕಿಟ್ ಮತ್ತು ಕ್ಯಾಶ್ಯೂ ಬಿಸ್ಕಿಟ್ ಬಹಳ ಚೆನ್ನಾಗಿರುತ್ತವೆ. ಹೈದರಾಬಾದ್ ನಲ್ಲಿರುವ ನನ್ನ ಅಕ್ಕ - ಭಾವ ಊರಿಗೆ ಬರುವಾಗಲೆಲ್ಲ ಕರಾಚಿ ಬೇಕರಿಯ ಬಿಸ್ಕಿಟ್ ನ್ನು ಮರೆಯದೇ ತರುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲೂ ಕೆಲವು ಅಂಗಡಿಗಳಲ್ಲಿ ಕರಾಚಿ ಬಿಸ್ಕಿಟ್ ಪ್ಯಾಕೆಟ್ ಗಳನ್ನು ಕಾಣಬಹುದು.
ಕರಾಚಿ ಬೇಕರಿಯ ಬಿಸ್ಕಿಟ್ ಗಳೆಂದರೆ ನಮಗೆಲ್ಲ ಇಷ್ಟ. ಈ ಬಿಸ್ಕಿಟ್ ನ್ನು ಮನೆಯಲ್ಲಿ ತಯಾರಿಸಿ ನೋಡೋಣವೆಂದು ನಾನು ಯಾವಾಗಲೂ ತಯಾರಿಸುವ ಆರೇಂಜ್ ಬಿಸ್ಕಿಟ್ ರೆಸಿಪಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿ ಕ್ಯಾಶ್ಯೂ ಬಿಸ್ಕಿಟ್ ತಯಾರಿಸಿದೆ. ಪ್ರತಿ ಬಾರಿ ತಯಾರಿಸಿದಾಗಲೂ ಎರಡು ದಿನದೊಳಗೆ ಖಾಲಿಯಾಗಿಬಿಡುವ ಈ ಕ್ಯಾಶ್ಯೂ ಬಿಸ್ಕಿಟ್ ಬಹಳ ಅಡಿಕ್ಟಿವ್!


ತಯಾರಿಸಲು ಬೇಕಾಗುವ ಸಮಯ: 25 - 30 ನಿಮಿಷ 
ಬೇಕಿಂಗ್ ಟೈಮ್: 20 ನಿಮಿಷ 
ಈ ಅಳತೆಯಿಂದ ಸುಮಾರು 30 ಬಿಸ್ಕಿಟ್ ಗಳನ್ನು ತಯಾರಿಸಬಹುದು 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
  • ಮೈದಾಹಿಟ್ಟು - 4 1/2 ಕಪ್ 
  • ಬೆಣ್ಣೆ - 185 ಗ್ರಾಂ (ರೂಮ್ ಟೆಂಪರೇಚರ್ ನಲ್ಲಿ)
  • ಸಕ್ಕರೆ - 3/4 ಕಪ್ + 1 ಟೇಬಲ್ ಸ್ಪೂನ್
  • ವೆನಿಲ್ಲಾ ಎಸೆನ್ಸ್ - 3/4 ಟೀ ಸ್ಪೂನ್ 
  • ಗೋಡಂಬಿ ಚೂರುಗಳು - 1 1/4 ಕಪ್ 


ತಯಾರಿಸುವ ವಿಧಾನ:
  • ಸಕ್ಕರೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ.
  • ಬೆಣ್ಣೆಯನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿಕೊಂಡು ಚೆನ್ನಾಗಿ ಬೀಟ್ ಮಾಡಿ. ಬೀಟ್ ಮಾಡಲು ಹ್ಯಾಂಡ್ ಮಿಕ್ಸರ್ ಬಳಸಿದರೆ ಉತ್ತಮ, ಇಲ್ಲವೇ ಹಾಗೇ ಬೀಟ್ ಮಾಡಬಹುದು. 
  • ಬೀಟ್ ಮಾಡಿದ ಬೆಣ್ಣೆಗೆ ಸಕ್ಕರೆ ಪುಡಿಯನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ ಚೆನ್ನಾಗಿ ಬೀಟ್ ಮಾಡಿ ಕ್ರೀಮ್ ನಂತೆ ಮಾಡಿ. ಕೊನೆಯಲ್ಲಿ ವೆನಿಲ್ಲಾ ಎಸೆನ್ಸ್ ಸೇರಿಸಿ ಒಂದು ನಿಮಿಷ ಬೀಟ್ ಮಾಡಿ. 
  • ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ಮೈದಾಹಿಟ್ಟು ಸೇರಿಸಿ ಮೆತ್ತಗಿನ, ಕೈಗೆ ಅಂಟದ ಹಿಟ್ಟಿನ ಉಂಡೆಯನ್ನು ತಯಾರಿಸಿಕೊಳ್ಳಿ.
  • ಓವನ್ ನ್ನು 170°C ಗೆ ಪ್ರಿ-ಹೀಟ್ ಮಾಡಿಕೊಳ್ಳಿ. 
  • ಮೈದಾಹಿಟ್ಟಿನ ಉಂಡೆಯನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಎರಡು ಅಥವಾ ಮೂರು ಭಾಗಗಳಾಗಿ ಮಾಡಿಕೊಳ್ಳಿ. ಪ್ರತಿಯೊಂದು ಉಂಡೆಯನ್ನೂ ಅರ್ಧ ಇಂಚು ದಪ್ಪಕ್ಕೆ ದೊಡ್ಡದಾಗಿ ಚೌಕ ಅಥವಾ ಆಯತಾಕಾರಕ್ಕೆ ಲಟ್ಟಿಸಿಕೊಳ್ಳಿ. 
  • ಇದರಮೇಲೆ ಗೋಡಂಬಿ ಚೂರುಗಳನ್ನು ಉದುರಿಸಿಕೊಂಡು ಲಟ್ಟಣಿಗೆಯಲ್ಲಿ ನಾಜೂಕಾಗಿ ಸ್ವಲ್ಪ ಲಟ್ಟಿಸಿ ಗೋಡಂಬಿ ಚೂರುಗಳು ಸರಿಯಾಗಿ ಕೂರುವಂತೆ ಮಾಡಿ. ಇದನ್ನು ಚಿಕ್ಕ ಚೌಕಗಳಾಗಿ ಅಥವಾ ಬೇಕಾದ ಆಕಾರಕ್ಕೆ ಕತ್ತರಿಸಿ ಬೇಕಿಂಗ್ ಶೀಟ್ ಹಾಕಿದ ಬೇಕಿಂಗ್ ಟ್ರೇಯಲ್ಲಿ ಜೋಡಿಸಿ. 
  • ಬೇಕಿಂಗ್ ಟ್ರೇಯನ್ನು ಪ್ರೀ-ಹೀಟ್ ಮಾಡಿದ ಓವನ್ ನಲ್ಲಿಟ್ಟು 18 - 20 ನಿಮಿಷ ಬೇಯಿಸಿ. ನಮ್ಮ ಮನೆಯ ಓವನ್ ನಲ್ಲಿ ಸಾಮಾನ್ಯವಾಗಿ 20 ನಿಮಿಷಕ್ಕೆ ಬಿಸ್ಕಿಟ್ ಬೆಂದಿರುತ್ತದೆ. ಬೆಂದಾಗ ಬಿಸ್ಕಿಟ್ ತಿಳಿಹೊಂಬಣ್ಣಕ್ಕೆ ಬರುತ್ತದೆ. 
  • ಬೆಂದ ಬಿಸ್ಕಿಟ್ ನ್ನು 4 - 5 ನಿಮಿಷ ಓವನ್ ನಲ್ಲಿ ಹಾಗೇ ಇಟ್ಟು ಹೊರತೆಗೆದು ತಣ್ಣಗಾಗಲು ಬಿಡಿ. 
  • ಗರಿಗರಿಯಾದ ಗೋಡಂಬಿ ಬಿಸ್ಕಿಟ್ ನ್ನು ಟೀಯೊಡನೆ ಸವಿಯಿರಿ.


ಕಾಮೆಂಟ್‌ಗಳು