ಮಾವಿನಕಾಯಿ ಕೆಂಪು ಚಟ್ನಿ


ಮಾವಿನಕಾಯಿ ಸೀಜನ್ ಶುರುವಾದರೆ ಸಾಕು, ನಮ್ಮ ಮನೆಯಲ್ಲಿ ದಿನವೂ ಒಂದಾದರೊಂದು ಬಗೆಯ ಮಾವಿನ ಅಡುಗೆ ಇದ್ದೇ ಇರುತ್ತದೆ. ಇಲ್ಲಿ ಆಸ್ಟ್ರೇಲಿಯಾದಲ್ಲೂ ಮಾವಿನಕಾಯಿ ಸಿಕ್ಕಾಗಲೆಲ್ಲ ನಾನು ಮಾವಿನ ಗೊಜ್ಜು, ಚಟ್ನಿ, ಅಪ್ಪೆಹುಳಿ ಇತ್ಯಾದಿ ನಮ್ಮೂರ ಕಡೆಯ ಸ್ಪೆಷಲ್ ಅಡುಗೆಗಳನ್ನು ತಯಾರಿಸುತ್ತಿರುತ್ತೇನೆ. ಇತ್ತೀಚೆಗಂತೂ ಇಂಡಿಯನ್ ಸ್ಟೋರ್ ಗಳಲ್ಲಿ ಫ್ರೋಜನ್ ಮಾವಿನಕಾಯಿ ಸಿಗುತ್ತಿರುವುದರಿಂದ ಬೇಕೆನಿಸಿದಾಗಲೆಲ್ಲ ಮಾವಿನಕಾಯಿಯ ಅಡುಗೆ ಮಾಡಲು ಸಾಧ್ಯವಾಗುತ್ತಿದೆ. 
ಕಳೆದ ಬಾರಿ ನಾನು ಊರಿಗೆ ಹೋದಾಗ ನಮ್ಮ ಪರಿಚಯದವರೊಬ್ಬರು ಹೇಳಿದ್ದರು, ಮಾವಿನಕಾಯಿ ಸೀಜನ್ ನಲ್ಲಿ ಅವರು ಚೆನ್ನಾಗಿ ಬಲಿತ ಮಾವಿನಕಾಯಿಗಳನ್ನು ದೊಡ್ಡ ಹೋಳುಗಳಾಗಿ ಹೆಚ್ಚಿಕೊಂಡು ಬಾಕ್ಸ್ ನಲ್ಲಿ ಹಾಕಿ ಫ್ರೀಜರ್ ನಲ್ಲಿಟ್ಟು ಬೇಕಾದಾಗ ಬಳಸಬಹುದು ಎಂದು. ಮಾವಿನಕಾಯಿ ಅಡುಗೆ ಪ್ರಿಯರಿಗೆ ಇದೊಂದು ಒಳ್ಳೆಯ ಟಿಪ್ಸ್! ಅಲ್ಲವೆ?
ಹಸಿಮೆಣಸು ಬಳಸಿ ತಯಾರಿಸುವ ಮಾವಿನಕಾಯಿ ಚಟ್ನಿ ರೆಸಿಪಿಯನ್ನು ನಾನು ಈ ಮೊದಲೇ ಬರೆದಿದ್ದೆ. ಈಗ ನಾನು ಬರೆಯುತ್ತಿರುವುದು ಒಣಮೆಣಸು ಬಳಸಿ ತಯಾರಿಸುವ ಮಾವಿನಕಾಯಿ ಚಟ್ನಿ. ಮೆಂತ್ಯ ಹಾಗೂ ಇಂಗಿನ ಪರಿಮಳದೊಡನೆ ಖಾರ, ಹುಳಿ ಹದವಾಗಿರುವ ಈ ಚಟ್ನಿ ಊಟಕ್ಕೆ ಬಹಳ ರುಚಿ!

ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು 
ಸರ್ವಿಂಗ್ಸ್: 5 - 6 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಸುಲಭ 

ಬೇಕಾಗುವ ಸಾಮಗ್ರಿಗಳು:
 • ಮೀಡಿಯಂ ಸೈಜ್ ಗೆ ಹೆಚ್ಚಿದ ಬಲಿತ ಮಾವಿನಕಾಯಿ ಹೋಳುಗಳು - 1 1/2 ಕಪ್ 
 • ತೆಂಗಿನತುರಿ - 1/2 ಕಪ್ 
 • ಒಣಮೆಣಸು - 2 ಅಥವಾ 3 (ಖಾರಕ್ಕೆ ತಕ್ಕಂತೆ)
 • ಮೆಂತ್ಯ - 3/4 ಟೀ ಸ್ಪೂನ್ 
 • ಇಂಗು - ದೊಡ್ಡ ಚಿಟಿಕೆ 
 • ಎಣ್ಣೆ - 3/4 ಟೀ ಸ್ಪೂನ್
 • ಸಕ್ಕರೆ -1/4 ಟೀ ಸ್ಪೂನ್
 • ಉಪ್ಪು - ರುಚಿಗೆ ತಕ್ಕಷ್ಟು 
 • ನೀರು - 3/4 ಕಪ್
ಒಗ್ಗರಣೆಗೆ: ಎಣ್ಣೆ - 1 ಟೀ ಸ್ಪೂನ್, ಸಾಸಿವೆ - 1 ಟೀ ಸ್ಪೂನ್, ಇಂಗು - ಚಿಟಿಕೆ 


ತಯಾರಿಸುವ ವಿಧಾನ:
 • ಒಂದು ದಪ್ಪ ತಳದ ಬಾಣಲೆಯಲ್ಲಿ 3/4 ಟೀ ಸ್ಪೂನ್ ನಷ್ಟು ಎಣ್ಣೆ ಕಾಯಿಸಿ ಒಣಮೆಣಸು, ಮೆಂತ್ಯ, ದೊಡ್ಡ ಚಿಟಿಕೆಯಷ್ಟು ಇಂಗು ಸೇರಿಸಿ ಹುರಿದುಕೊಳ್ಳಿ. 
 • ಹುರಿದ ಸಾಮಗ್ರಿಗಳು, ಹೆಚ್ಚಿದ ಮಾವಿನಕಾಯಿ, ತೆಂಗಿನತುರಿ, ಉಪ್ಪು, ಸಕ್ಕರೆ ಇಷ್ಟನ್ನೂ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ರುಬ್ಬುವಾಗ ಅಗತ್ಯವಿರುವಷ್ಟು ನೀರು ಸೇರಿಸಿ. 
 • ಚಟ್ನಿಯ ರುಚಿ ನೋಡಿಕೊಂಡು ಉಪ್ಪು ಬೇಕಿದ್ದರೆ ಸೇರಿಸಿ. ಬಾಣಲೆಯಲ್ಲಿ 1 ಟೀ ಸ್ಪೂನ್ ನಷ್ಟು ಎಣ್ಣೆ ಕಾಯಿಸಿ ಸಾಸಿವೆ, ಇಂಗಿನ ಒಗ್ಗರಣೆ ಮಾಡಿ ಚಟ್ನಿಗೆ ಸೇರಿಸಿ. 
 • ಈ ಚಟ್ನಿ ಅನ್ನದೊಡನೆ ಒಳ್ಳೆಯ ಕಾಂಬಿನೇಶನ್!
ಟಿಪ್ಸ್:
 • ಮಾವಿನಕಾಯಿಯ ಸಿಪ್ಪೆ ಕಹಿ ಎನಿಸಿದರೆ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ. ಇಲ್ಲವೇ ಸಿಪ್ಪೆ ಸಹಿತ ಬಳಸಬಹುದು. 

ಕಾಮೆಂಟ್‌ಗಳು