ಎಗ್ ಲೆಸ್ ಚಾಕೊಲೇಟ್ ಲೇಯರ್ ಕೇಕ್ ವಿತ್ ಚಾಕೊಲೇಟ್ ಫ್ರಾಸ್ಟಿಂಗ್


ಬರ್ತ್ ಡೇ, ಆನಿವರ್ಸರಿ ಇತ್ಯಾದಿ ಸ್ಪೆಷಲ್ ದಿನಗಳಿಗೆ ಕೇಕ್ ತಯಾರಿಸುವುದು ಅಷ್ಟೇನೂ ಕಷ್ಟದ ಸಂಗತಿಯಲ್ಲ. ನಮ್ಮಂಥ ಬೇಕಿಂಗ್ ಪ್ರಿಯರಿಗಂತೂ ಕೇಕ್ ತಯಾರಿಸುವುದು ಖುಷಿಯ ವಿಚಾರವೇ! ಆದರೆ ಕೇಕ್ ಗೆ ಅಲಂಕಾರ ಮಾಡುವುದು ಹೇಗೆ? ಎನ್ನುವುದನ್ನು ಬಹಳವೇ ಯೋಚಿಸಬೇಕಾಗುತ್ತದೆ. ತಯಾರಿಸಿದ ಕೇಕ್ ಗೆ ಸರಿಹೊಂದುವಂತೆ ಅದರ ಡೆಕೊರೇಶನ್ ಗೆ ಅಗತ್ಯವಾದ ಸಾಮಗ್ರಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ. 
ಇತ್ತೀಚಿಗೆ ನಾನು ತಯಾರಿಸಿದ ಕೇಕ್ ಗೆ ಚಾಕೋಲೇಟ್ ಫ್ರಾಸ್ಟಿಂಗ್ ಮಾಡಿದ್ದೆ. ಸುಲಭದಲ್ಲಿ ತಯಾರಿಸಬಹುದಾದ ಈ ಕೇಕ್ ಮತ್ತು ಫ್ರಾಸ್ಟಿಂಗ್ ಬಹಳ ಚೆನ್ನಾಗಿ ಬಂತು. ನಾನು ಕೆಲ ದಿನಗಳ ಹಿಂದೆ ಎಗ್ ಲೆಸ್ ಚಾಕೋಲೇಟ್ ಕೇಕ್ ರೆಸಿಪಿಯನ್ನು ಬರೆದಿದ್ದೆನಲ್ಲ, ಅದೇ ಥರದ ಎರಡು ಕೇಕ್ ಗಳನ್ನು ತಯಾರಿಸಿಕೊಂಡು ಈ ಚಾಕೋಲೇಟ್ ಲೇಯರ್ ಕೇಕ್ ಗೆ ಬಳಸಿದ್ದೇನೆ. ಜೊತೆಗೆ ಫ್ರಾಸ್ಟಿಂಗ್ ಗೆ ಬಳಸಿದ ನಂತರ ಉಳಿದ ಚಾಕೋಲೇಟ್ ಬ್ಲಾಕ್ ಬಳಸಿ ಕೇಕ್ ಗೆ ಒಂದಿಷ್ಟು ಅಲಂಕಾರ! 
ಎಗ್ ಲೆಸ್ ಚಾಕೋಲೇಟ್ ಕೇಕ್ ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ. 


ತಯಾರಿಸಲು ಬೇಕಾಗುವ ಸಮಯ: 45 - 50 ನಿಮಿಷಗಳು
ಕೇಕ್ ಸೆಟ್ ಆಗಲು ಬೇಕಾಗುವ ಸಮಯ: 2 -3 ಘಂಟೆಗಳು
ಸರ್ವಿಂಗ್ಸ್: 10 - 12 
ಡಿಫಿಕಲ್ಟಿ ಲೆವೆಲ್: ಕಷ್ಟಕರ 

ಬೇಕಾಗುವ ಸಾಮಗ್ರಿಗಳು:
- ಎಗ್ ಲೆಸ್ ಚಾಕೋಲೇಟ್ ಕೇಕ್ - 2 (ಮೊದಲೇ ತಯಾರಿಸಿಕೊಂಡಿರಿ)
- ಫ್ರಾಸ್ಟಿಂಗ್ ಗೆ:
  • ಬೆಣ್ಣೆ / ಅನ್ ಸಾಲ್ಟೆಡ್ ಬಟರ್ (ರೂಮ್ ಟೆಂಪರೇಚರ್ ನಲ್ಲಿ) - 1 ಕಪ್ 
  • ಐಸಿಂಗ್ ಶುಗರ್ - 3 ಕಪ್ (ಸಿಹಿ ನೋಡಿಕೊಂಡು ಅಡ್ಜಸ್ಟ್ ಮಾಡಿ)
  • ವೆನಿಲ್ಲಾ ಎಸೆನ್ಸ್ - 1 ಟೀ ಸ್ಪೂನ್ 
  • ಡಾರ್ಕ್ ಚಾಕೋಲೇಟ್ - 200 ಗ್ರಾಂ
  • ಹಾಲು - 1/2 ಕಪ್
  • ದೊಡ್ಡ ಚಿಟಿಕೆ ಉಪ್ಪು 
  • ಚಾಕೋಲೇಟ್ ಶೇವ್ಸ್ - ಸ್ವಲ್ಪ (ಟಿಪ್ಸ್ ನೋಡಿ)
  • ಚಾಕೋಲೇಟ್ ಕೋಟೆಡ್ ಪೀನಟ್ ಅಥವಾ ನಿಮ್ಮಿಷ್ಟದ ಚಾಕೋಲೇಟ್ಸ್ - ಸ್ವಲ್ಪ


ತಯಾರಿಸುವ ವಿಧಾನ:
- ಫ್ರಾಸ್ಟಿಂಗ್ ತಯಾರಿಸುವ ವಿಧಾನ:
  • ಡಾರ್ಕ್ ಚಾಕೋಲೇಟ್ ನ್ನು ಕರಗಿಸಿ ತಣ್ಣಗಾಗಲು ಬಿಡಿ.
  • ಒಂದು ದೊಡ್ಡ ಮಿಕ್ಸಿಂಗ್ ಬೌಲಿನಲ್ಲಿ ಬೆಣ್ಣೆ ಹಾಕಿಕೊಂಡು ಚೆನ್ನಾಗಿ ಬೀಟ್ ಮಾಡಿ. ನಾನು ಇದಕ್ಕೆ ಹ್ಯಾಂಡ್ ಮಿಕ್ಸರ್ ಬಳಸಿದ್ದೇನೆ. 
  • ಬೀಟ್ ಮಾಡಿದ ಬೆಣ್ಣೆಗೆ ಕರಗಿಸಿದ ಡಾರ್ಕ್ ಚಾಕೋಲೇಟ್, ಉಪ್ಪು, 1 ಕಪ್ ನಷ್ಟು ಐಸಿಂಗ್ ಶುಗರ್ ಸೇರಿಸಿ ಸ್ವಲ್ಪ ಬೀಟ್ ಮಾಡಿ. 
  • ಇದಕ್ಕೆ ಸ್ವಲ್ಪ 2 - 3 ಟೇಬಲ್ ಸ್ಪೂನ್ ನಷ್ಟು ಹಾಲು ಸೇರಿಸಿ ಒಮ್ಮೆ ಮಿಕ್ಸ್ ಮಾಡಿಕೊಂಡು ಇನ್ನೊಂದು ಕಪ್ ಐಸಿಂಗ್ ಶುಗರ್ ಸೇರಿಸಿ ಪುನಃ ಬೀಟ್ ಮಾಡಿ. 
  • ಇದೇ ರೀತಿ ಪ್ರತಿ ಬಾರಿಯೂ ಸ್ವಲ್ಪ ಹಾಲು, ಸ್ವಲ್ಪ ಸಕ್ಕರೆ ಸೇರಿಸುತ್ತ ಬೀಟ್ ಮಾಡಿ. ರುಚಿ ನೋಡಿಕೊಂಡು ಸಕ್ಕರೆಯ ಪ್ರಮಾಣವನ್ನು ಅಡ್ಜಸ್ಟ್ ಮಾಡಿ.
  • ಕೊನೆಯಲ್ಲಿ ವೆನಿಲ್ಲಾ ಎಸೆನ್ಸ್ ಸೇರಿಸಿ. ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಆಗುವವರೆಗೆ ಬೀಟ್ ಮಾಡಿ.

- ಕೇಕ್ ನ್ನು ಜೋಡಿಸುವುದು:
  • ಎರಡೂ ಕೇಕ್ ಗಳನ್ನು ಎರಡು ಲೇಯರ್ ಗಳಾಗಿ ನಾಜೂಕಾಗಿ ಕತ್ತರಿಸಿ ಒಟ್ಟೂ 4 ಲೇಯರ್ ಗಳನ್ನು ರೆಡಿಮಾಡಿಕೊಳ್ಳಿ. 
  • ಕೇಕ್ ನ ಒಂದು ಲೇಯರ್ ನ್ನು ಕೇಕ್ ಬೇಸ್ ಅಥವಾ ಒಂದು ಅಗಲವಾದ ಪ್ಲೇಟ್ ನ ಮೇಲಿಟ್ಟುಕೊಂಡು ಅದರಮೇಲೆ ಒಂದು ಲೇಯರ್ ಚಾಕೋಲೇಟ್ ಐಸಿಂಗ್ ಸವರಿ. 
  • ಅದರಮೇಲೆ ಕೇಕ್ ನ ಇನ್ನೊಂದು ಲೇಯರ್ ಇಟ್ಟು, ಮತ್ತೆ ಒಂದು ಲೇಯರ್ ಐಸಿಂಗ್ ಹಾಕಿ. ಇದೇರೀತಿ ನಾಲ್ಕೂ ಲೇಯರ್ ಗಳನ್ನು ಜೋಡಿಸಿ. 
  • ಕೇಕ್ ನ ಮೇಲ್ಭಾಗ ಮತ್ತು ಸೈಡಿಗೆ ನಾಜೂಕಾಗಿ ಐಸಿಂಗ್ ಸವರಿ ಅಲಂಕರಿಸಿ. 
  • ಕೇಕ್ ನ ಸೈಡಿಗೆ ಚಾಕೋಲೇಟ್ ಶೇವ್ಸ್ ನಿಂದ ಅಲಂಕರಿಸಿ. ಮೇಲ್ಭಾಗಕ್ಕೆ ಚಾಕೋಲೇಟ್ ಕೋಟೆಡ್ ಪೀನಟ್ಸ್ ಮತ್ತು ಚಾಕೋಲೇಟ್ ಶೇವ್ಸ್ ಬಳಸಿ ಬೇಕಾದಂತೆ ಅಲಂಕರಿಸಿ. 
  • ಕೇಕ್ ಸೆಟ್ ಆಗಲು 2 - 3 ಘಂಟೆಗಳ ಕಾಲ ಫ್ರಿಜ್ ನಲ್ಲಿಟ್ಟು ನಂತರ ಬಳಸಿ.


ಟಿಪ್ಸ್:
  • ಐಸಿಂಗ್ ಗೆ ಬಳಸುವ ಡಾರ್ಕ್ ಚಾಕೋಲೇಟ್ ಸಿಹಿಯಾಗಿದ್ದರೆ ಇಲ್ಲಿ ಹೇಳಿದಷ್ಟು ಸಕ್ಕರೆ ಸಾಕು. ಚಾಕೋಲೇಟ್ ಸಿಹಿ ಇಲ್ಲದಿದ್ದರೆ ಇಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಸಕ್ಕರೆ ಬೇಕು. 
  • ಫ್ರಿಜ್ ನಲ್ಲಿಟ್ಟು ತಣ್ಣಗಾದ ಚಾಕೋಲೇಟ್ ಬ್ಲಾಕ್ ನ್ನು ಪೀಲರ್ ನಲ್ಲಿ ನಾಜೂಕಾಗಿ ಕೆತ್ತಿ ಚಾಕೊಲೇಟ್ ಶೇವ್ಸ್ ನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು.

ಕಾಮೆಂಟ್‌ಗಳು