ಮೆಂತ್ಯ ಅಥವಾ ಮೆಂತೆ ಕಾಳು ನಮ್ಮ ದಿನನಿತ್ಯದ ಅಡುಗೆಗಳಲ್ಲಿ ವಿವಿಧ ರೀತಿಯಲ್ಲಿ ಬಳಕೆಯಾಗುತ್ತದೆ. ದೋಸೆ ಹಿಟ್ಟು, ಸಾಂಬಾರ್ ಪುಡಿ, ಮೆಂತ್ಯ ಹಿಟ್ಟು, ಇವಕ್ಕೆಲ್ಲ ಮೆಂತ್ಯ ಬೇಕೇ ಬೇಕು. ಮೆಂತ್ಯದ ಬಳಕೆ ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಅಲ್ಲದೆ ತಲೆಹೊಟ್ಟು, ಕೂದಲು ಉದುರುವುದು, ಇತ್ಯಾದಿ ತೊಂದರೆಗಳಿಗೂ ಮೆಂತ್ಯದ ಬಳಕೆ ಪರಿಣಾಮಕಾರಿ. ಮೆಂತ್ಯದ ಸೊಪ್ಪು ಕೂಡ ಪಲ್ಯ, ರೊಟ್ಟಿ, ವಿವಿಧ ರೈಸ್ ಐಟಂಗಳನ್ನು ತಯಾರಿಸಲು ಚೆನ್ನಾಗಿರುತ್ತದೆ.
ಈಗ ಚಳಿಗಾಲ ಮುಗಿದು ಬೇಸಿಗೆ ಶುರುವಾಗಿರುವುದರಿಂದ ನಮ್ಮ ಹಿತ್ತಿಲಲ್ಲಿ ಒಂದಿಷ್ಟು ಸೊಪ್ಪು, ತರಕಾರಿಗಳನ್ನು ಹಾಕಿಕೊಂಡಿದ್ದೇವೆ. ಮೆಂತ್ಯ ಸೊಪ್ಪಂತೂ ಬೀಜ ಹಾಕಿದ 15 - 20 ದಿನಗಳಲ್ಲಿ ಗಿಡ ದೊಡ್ಡದಾಗಿ ಬಳಕೆಗೆ ಸಿಗುತ್ತದೆ. ನಾನು ಪ್ರತಿ ವಾರವೂ ಒಂದೊಂದು ಸಾಲು ಮೆಂತ್ಯವನ್ನು ಬಿತ್ತನೆ ಮಾಡಿ, ಪ್ರತಿ ವಾರವೂ ಮೆಂತ್ಯ ಸೊಪ್ಪು ಅಡುಗೆಗೆ ಸಿಗುವಂತೆ ನೋಡಿಕೊಳ್ಳುತ್ತೇನೆ. ಹೀಗಾಗಿ ಮೆಂತ್ಯ ಸೊಪ್ಪಿನ ಅಡುಗೆ ನಮ್ಮ ಮನೆಯಲ್ಲಿ ವಾರಕ್ಕೆ ಒಂದೆರಡು ದಿನವಾದರೂ ಇರುತ್ತದೆ.
ಮೆಂತ್ಯ ಸೊಪ್ಪು ಬಳಸಿ ತಯಾರಿಸುವ ಎಲ್ಲ ಅಡುಗೆಗಳನ್ನೂ ಸಬ್ಬಸಿಗೆ ಸೊಪ್ಪಿನಲ್ಲೂ ತಯಾರಿಸಬಹುದು. ಸಬ್ಬಸಿಗೆ ಸೊಪ್ಪಿನ ಪಲ್ಯದ ರೆಸಿಪಿಯನ್ನು ಈ ಮೊದಲೇ ಬರೆದಿದ್ದೆ. ಅದೇ ರೀತಿಯಲ್ಲೇ ಮೆಂತ್ಯ ಸೊಪ್ಪಿನ ಪಲ್ಯ ತಯಾರಿಸಬಹುದು. ಮೆಂತ್ಯ ಸೊಪ್ಪು ಕಹಿ ಅಂಶವನ್ನು ಹೊಂದಿರುವುದರಿಂದ ಪಲ್ಯವನ್ನು ಸ್ವಲ್ಪ ಸಿಹಿ ಆಗುವಂತೆ ಮಾಡಿದರೆ ಚೆನ್ನಾಗಿರುತ್ತದೆ.
ಮೆಂತ್ಯ ಸೊಪ್ಪಿನ ಪಲ್ಯ ತಯಾರಿಸುವ ವಿಧಾನ ಈ ಕೆಳಗಿನಂತಿದೆ:
ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಸರ್ವಿಂಗ್ಸ್: 2 - 3
ಡಿಫಿಕಲ್ಟಿ ಲೆವೆಲ್: ಸುಲಭ
ಬೇಕಾಗುವ ಸಾಮಗ್ರಿಗಳು:
ಮೆಂತ್ಯ ಸೊಪ್ಪು ಬಳಸಿ ತಯಾರಿಸುವ ಎಲ್ಲ ಅಡುಗೆಗಳನ್ನೂ ಸಬ್ಬಸಿಗೆ ಸೊಪ್ಪಿನಲ್ಲೂ ತಯಾರಿಸಬಹುದು. ಸಬ್ಬಸಿಗೆ ಸೊಪ್ಪಿನ ಪಲ್ಯದ ರೆಸಿಪಿಯನ್ನು ಈ ಮೊದಲೇ ಬರೆದಿದ್ದೆ. ಅದೇ ರೀತಿಯಲ್ಲೇ ಮೆಂತ್ಯ ಸೊಪ್ಪಿನ ಪಲ್ಯ ತಯಾರಿಸಬಹುದು. ಮೆಂತ್ಯ ಸೊಪ್ಪು ಕಹಿ ಅಂಶವನ್ನು ಹೊಂದಿರುವುದರಿಂದ ಪಲ್ಯವನ್ನು ಸ್ವಲ್ಪ ಸಿಹಿ ಆಗುವಂತೆ ಮಾಡಿದರೆ ಚೆನ್ನಾಗಿರುತ್ತದೆ.
ಮೆಂತ್ಯ ಸೊಪ್ಪಿನ ಪಲ್ಯ ತಯಾರಿಸುವ ವಿಧಾನ ಈ ಕೆಳಗಿನಂತಿದೆ:
ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಸರ್ವಿಂಗ್ಸ್: 2 - 3
ಡಿಫಿಕಲ್ಟಿ ಲೆವೆಲ್: ಸುಲಭ
ಬೇಕಾಗುವ ಸಾಮಗ್ರಿಗಳು:
- ಮೆಂತ್ಯ ಸೊಪ್ಪು - 3 ದೊಡ್ಡ ಕಟ್ಟು
- ಉದ್ದಿನಬೇಳೆ - 1 ಟೀ ಸ್ಪೂನ್
- ಸಾಸಿವೆ - 1 ಟೀ ಸ್ಪೂನ್
- ಚಿಟಿಕೆ ಇಂಗು
- ಸಾಂಬಾರ್ ಪೌಡರ್ - 2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು (ಟಿಪ್ಸ್ ನೋಡಿ)
- ಸಕ್ಕರೆ - 1 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು (ಟಿಪ್ಸ್ ನೋಡಿ)
- ಆಮ್ ಚೂರ್ ಪೌಡರ್ - 1/2 ಟೀ ಸ್ಪೂನ್
- ಉಪ್ಪು - ರುಚಿಗೆ ತಕ್ಕಷ್ಟು
- ತೆಂಗಿನತುರಿ - 1 ಮುಷ್ಟಿ
- ಎಣ್ಣೆ - 4 ಟೀ ಸ್ಪೂನ್
ತಯಾರಿಸುವ ವಿಧಾನ:
- ಮೆಂತ್ಯ ಸೊಪ್ಪನ್ನು ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ.
- ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಉದ್ದಿನಬೇಳೆ, ಸಾಸಿವೆ, ಇಂಗು ಹಾಕಿ ಒಗ್ಗರಣೆ ಮಾಡಿ.
- ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ ಸಾಂಬಾರ್ ಪೌಡರ್ ಸೇರಿಸಿ ಒಮ್ಮೆ ಕೈಯಾಡಿಸಿ. ಜೊತೆಗೇ ಹೆಚ್ಚಿಟ್ಟ ಮೆಂತ್ಯ ಸೊಪ್ಪನ್ನು ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಆಮ್ ಚೂರ್ ಪೌಡರ್ ಸೇರಿಸಿ ಮಿಕ್ಸ್ ಮಾಡಿ. ಬಾಣಲೆಯ ಮುಚ್ಚಳವನ್ನು ಅರೆಬರೆ ಮುಚ್ಚಿ ಬೇಯಿಸಿ.
- ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತಿರಿ. 7 - 8 ನಿಮಿಷ ಬೇಯಿಸಿದ ನಂತರ ಪಲ್ಯದ ನೀರಿನಂಶವೆಲ್ಲ ಆರಿಹೋಗಿರುತ್ತದೆ.
- ಮೆಂತ್ಯ ಸೊಪ್ಪು ಕಪ್ಪಾಗಿ ಒಣಗಿದಂತಾದಾಗ ಇದಕ್ಕೆ ತೆಂಗಿನತುರಿ ಸೇರಿಸಿ 2 - 3 ನಿಮಿಷ ಬಿಸಿಮಾಡಿ ಉರಿ ಆಫ್ ಮಾಡಿ.
- ಈ ಪಲ್ಯ ಅನ್ನ, ರೊಟ್ಟಿ, ಚಪಾತಿಯೊಡನೆ ಚೆನ್ನಾಗಿರುತ್ತದೆ.
ಟಿಪ್ಸ್:
- ಪಲ್ಯಕ್ಕೆ ಇಲ್ಲಿ ಹೇಳಿದ ಸಾಂಬಾರ್ ಪುಡಿಯ ಬದಲು ಯಾವುದೇ ಬಗೆಯ ಸಾಂಬಾರ್ ಪುಡಿ, ಪಲ್ಯದ ಪುಡಿ ಅಥವಾ ಸಾರಿನ ಪುಡಿ ಬಳಸಬಹುದು.
- ಮೆಂತ್ಯ ಸೊಪ್ಪು ಕಹಿ ಇರುವುದರಿಂದ ಪಲ್ಯವನ್ನು ಸ್ವಲ್ಪ ಸಿಹಿಯಾಗುವಂತೆ ಮಾಡಿದರೆ ಚೆನ್ನಾಗಿರುತ್ತದೆ. ಸಿಹಿ ಇಷ್ಟವಾಗದಿದ್ದರೆ ಸಕ್ಕರೆಯನ್ನು ಕಡಿಮೆ ಬಳಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)