ಭಾರತದಲ್ಲಿ ಹಬ್ಬ, ಮದುವೆ, ಇತ್ಯಾದಿ ವಿಶೇಷ ಸಮಾರಂಭಗಳಲ್ಲಿ ತಯಾರಿಸುವ ವಿಶೇಷ ಸಿಹಿ ತಿನಿಸುಗಳಲ್ಲಿ ಕ್ಯಾರೆಟ್ ಹಲ್ವಾ ಕೂಡ ಒಂದು. ಕ್ಯಾರೆಟ್, ಹಾಲು, ತುಪ್ಪ, ಸಕ್ಕರೆ, ಖೋವ, ಒಣ ಹಣ್ಣುಗಳು, ಇತ್ಯಾದಿ ಉತ್ತಮ ದರ್ಜೆಯ ಪದಾರ್ಥಗಳನ್ನು ಬಳಸಿ ತಯಾರಿಸುವ ಈ ಹಲ್ವಾ ತಿನ್ನಲು ಬಹಳ ರುಚಿ. ಸಿಹಿ ತಿಂಡಿಗಳನ್ನು ಹೆಚ್ಚಾಗಿ ಇಷ್ಟಪಡದ ನನ್ನ ಮಗಳಿಗೆ ಕ್ಯಾರೆಟ್ ಹಲ್ವ ಎಂದರೆ ತುಂಬಾ ಇಷ್ಟ!
ತಯಾರಿಸಲು ಸುಲಭವಾದ ಈ ಹಲ್ವಾ ಮಕ್ಕಳಿಗೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಖೋವ ಬಳಸಿದರೆ ಕ್ಯಾರೆಟ್ ಹಲ್ವಾ ಹೆಚ್ಚು ರುಚಿ. ಆದರೆ ಖೋವ ಇಲ್ಲದೆಯೂ ಈ ಹಲ್ವಾ ತಯಾರಿಸಬಹುದು. ಮನೆಯಲ್ಲಿ ಸ್ವಲ್ಪವೇ ಖೋವಾ ಇದ್ದಾಗ ನಾನು ಅದರೊಡನೆ ಸ್ವಲ್ಪ ಪನೀರ್ ಸೇರಿಸಿಯೂ ಕ್ಯಾರೆಟ್ ಹಲ್ವಾ ತಯಾರಿಸಿದ್ದಿದೆ! ಒಟ್ಟಿನಲ್ಲಿ ಹೇಗೆ ತಯಾರಿಸಿದರೂ ಈ ಹಲ್ವಾ ಚೆನ್ನಾಗಿಯೇ ಇರುತ್ತದೆ.
ಕ್ಯಾರೆಟ್ ಹಲ್ವಾ ತಯಾರಿಸುವ ವಿಧಾನ ಈ ಕೆಳಗಿನಂತಿದೆ:
ತಯಾರಿಸಲು ಬೇಕಾಗುವ ಸಮಯ: 1 1/2 ಘಂಟೆ
ಸರ್ವಿಂಗ್ಸ್: 10 - 12
ಡಿಫಿಕಲ್ಟಿ ಲೆವೆಲ್: ಕಷ್ಟಕರ
ಬೇಕಾಗುವ ಸಾಮಗ್ರಿಗಳು:
- ಕ್ಯಾರೆಟ್ - 1 ಕೆಜಿ
- ಸಕ್ಕರೆ - 800 ಗ್ರಾಂ (ರುಚಿಗೆ ತಕ್ಕಷ್ಟು)
- ಉಪ್ಪು - ದೊಡ್ಡ ಚಿಟಿಕೆ
- ಹಾಲು - 1/2 ಲೀಟರ್
- ತುಪ್ಪ - 6 ಟೇಬಲ್ ಸ್ಪೂನ್
- ಖೋವಾ - 1 ಲೀಟರ್ ಹಾಲಿನದು (ಅಥವಾ 200 ಗ್ರಾಂ)
- ಏಲಕ್ಕಿಪುಡಿ - 1 1/2 ಟೀ ಸ್ಪೂನ್
- ಒಣದ್ರಾಕ್ಷಿ - ಸ್ವಲ್ಪ
- ಬಾದಾಮಿ, ಪಿಸ್ತಾ - ಸ್ವಲ್ಪ
ತಯಾರಿಸುವ ವಿಧಾನ:
- ಕ್ಯಾರೆಟ್ ನ್ನು ಸ್ವಚ್ಛವಾಗಿ ತೊಳೆದು, ತುರಿದುಕೊಳ್ಳಿ.
- ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಬಿಸಿಗಿಟ್ಟು ಅದಕ್ಕೆ ಕ್ಯಾರೆಟ್ ತುರಿ ಸೇರಿಸಿ 5 ನಿಮಿಷ ಅಥವಾ ಹಸಿ ವಾಸನೆ ಹೋಗುವವರೆಗೆ ಕೈಯಾಡಿಸಿ.
- ಇದಕ್ಕೆ ಅರ್ಧ ಲೀಟರ್ ನಷ್ಟು ಹಾಲು ಸೇರಿಸಿ ಮುಚ್ಚಳ ಅರೆಬರೆ ಮುಚ್ಚಿ ಬೇಯಿಸಿ. ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತಿರಿ.
- ಕ್ಯಾರೆಟ್ ತುರಿ ಮೆತ್ತಗೆ ಬೆಂದು, ಹಾಲು ಭಾಗಶಃ ಆರಿದ ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ, ದೊಡ್ಡ ಚಿಟಿಕೆ ಉಪ್ಪು ಸೇರಿಸಿ ಕೈಯಾಡಿಸಿ.
- ಸಕ್ಕರೆ ಸೇರಿಸಿದಾಗ ಹಲ್ವಾ ಮಿಶ್ರಣ ಸ್ವಲ್ಪ ತೆಳ್ಳಗಾಗುತ್ತದೆ. ಆಗಾಗ್ಗೆ ಕೈಯಾಡಿಸುತ್ತ ಸ್ವಲ್ಪ ಸಮಯ ಬೇಯಿಸಿದರೆ ಮಂದವಾಗುತ್ತದೆ.
- ಮಿಶ್ರಣ ಮಂದವಾದ ನಂತರ ಇದಕ್ಕೆ ಖೋವ ಸೇರಿಸಿ ಇನ್ನೂ 10 - 12 ನಿಮಿಷ ಕೈಯಾಡಿಸಿ.
- ಕೊನೆಯಲ್ಲಿ ಏಲಕ್ಕಿಪುಡಿ, ತುಪ್ಪದಲ್ಲಿ ಹುರಿದ ಒಣದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರುಗಳನ್ನು ಸೇರಿಸಿ ಮಿಕ್ಸ್ ಮಾಡಿ.
- ಕ್ಯಾರೆಟ್ ಹಲ್ವಾವನ್ನು ಬಿಸಿಯಾಗಿಯೂ ತಿನ್ನಬಹುದು ಇಲ್ಲವೇ ತಣ್ಣಗೆ ಮಾಡಿಯೂ ತಿನ್ನಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)