ವಿವಿಧ ಪೋಷಕಾಂಶಗಳ ಆಗರವಾಗಿರುವ ಬೂದುಗುಂಬಳಕಾಯಿ ವಿವಿಧ ಅಡುಗೆಗಳಲ್ಲಿ ಬಳಕೆಯಾಗುತ್ತದೆ. ಸಾಂಬಾರ್, ಮಜ್ಜಿಗೆಹುಳಿ, ಪಲ್ಯ ಇತ್ಯಾದಿ ನಿತ್ಯದ ಅಡುಗೆಗಳಲ್ಲದೆ ಪೇಠ, ಹಲ್ವಾ ಮುಂತಾದ ರುಚಿಕರ ಸಿಹಿತಿಂಡಿಗಳನ್ನು ತಯಾರಿಸುವುದಕ್ಕೂ ಬೂದುಗುಂಬಳಕಾಯಿ ಬೇಕು. ಬೂದುಗುಂಬಳದ ಜ್ಯೂಸ್ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ನಾನು ಆಗಾಗ್ಗೆ ಇಂಡಿಯನ್ ಸ್ಟೋರ್ ನಿಂದ ಈ ತರಕಾರಿಯನ್ನು ತಂದು ವಿವಿಧ ಅಡುಗೆಗಳನ್ನು ತಯಾರಿಸುತ್ತಿರುತ್ತೇನೆ.
ಇತ್ತೀಚೆಗೆ ಬೂದುಗುಂಬಳಕಾಯಿ ತಂದಾಗ ಅದರ ಹಲ್ವಾ ತಯಾರಿಸಿದ್ದೆ. ಈ ಹಲ್ವಕ್ಕೆ ದಮ್ ರೋಟ್ ಅಥವಾ ಕಾಶಿ ಹಲ್ವಾ ಎಂತಲೂ ಹೇಳುತ್ತಾರೆ. ಸಾಂಪ್ರದಾಯಿಕವಾಗಿ ತಯಾರಿಸುವ ಹಲ್ವಕ್ಕೆ ನಾನು ರವಾ ಮತ್ತು ಖೋವ ಹಾಕಿ ತಯಾರಿಸಿದ್ದೆ. ಮನೆಯಲ್ಲಿ ಎಲ್ಲರಿಗೂ ಈ ಹಲ್ವಾ ತುಂಬಾ ಇಷ್ಟವಾಯಿತು.
ರುಚಿಕರವಾದ ಕಾಶಿ ಹಲ್ವಾವನ್ನು ನೀವೂ ತಯಾರಿಸಿ ನೋಡಿ!
ತಯಾರಿಸಲು ಬೇಕಾಗುವ ಸಮಯ: 30 - 35 ನಿಮಿಷಗಳು
ಸರ್ವಿಂಗ್ಸ್: 6 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಬೇಕಾಗುವ ಸಾಮಗ್ರಿಗಳು:
- ಬೂದುಗುಂಬಳದ ತುರಿ (ನೀರಿನಂಶವನ್ನು ಹಿಂಡಿ ತೆಗೆದದ್ದು) - 1 ದೊಡ್ಡ ಕಪ್ (1 ಕಪ್ = 300 ಗ್ರಾಂ ಅಂದಾಜು)
- ಖೋವ - 1/2 ಲೀಟರ್ ಹಾಲಿನಿಂದ ತಯಾರಿಸಿದ್ದು (ಅಂದಾಜು 100 ಗ್ರಾಂ)
- ಸಕ್ಕರೆ - 1 1/2 ಕಪ್ (ರುಚಿಗೆ ತಕ್ಕಷ್ಟು)
- ತುಪ್ಪ - 1/4 ಕಪ್
- ಚಿರೋಟಿ ರವೆ - 1/4 ಕಪ್
- ಉಪ್ಪು - ಚಿಟಿಕೆ
- ಏಲಕ್ಕಿಪುಡಿ - 1 ಟೀ ಸ್ಪೂನ್
- ಕೇಸರಿ ದಳಗಳು (ಬೇಕಿದ್ದರೆ) - 10 ರಿಂದ 12
- ಗೋಡಂಬಿ ಚೂರುಗಳು - 3 ಟೇಬಲ್ ಸ್ಪೂನ್
ತಯಾರಿಸುವ ವಿಧಾನ:
- ನೀರನ್ನು ಹಿಂಡಿ ತೆಗೆದ ಬೂದುಗುಂಬಳದ ತುರಿಯನ್ನು ಪ್ರೆಷರ್ ಕುಕ್ಕರ್ ನಲ್ಲಿ ಎರಡು ವಿಸಿಲ್ ಆಗುವವರೆಗೆ ಬೇಯಿಸಿಕೊಳ್ಳಿ.
- ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿಗಿಡಿ. ಇದಕ್ಕೆ ಚಿರೋಟಿ ರವೆ ಸೇರಿಸಿ ಪರಿಮಳ ಬರುವವರೆಗೆ ಹುರಿಯಿರಿ.
- ಇದಕ್ಕೆ ಬೇಯಿಸಿದ ಬೂದುಗುಂಬಳದ ತುರಿ ಸೇರಿಸಿ ಎರಡು ನಿಮಿಷ ಕೈಯಾಡಿಸಿ.
- ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ, ಚಿಟಿಕೆ ಉಪ್ಪು, ಕೇಸರಿ ದಳಗಳನ್ನು ಸೇರಿಸಿ ಮಿಕ್ಸ್ ಮಾಡಿ. ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೆ ಸಣ್ಣ ಉರಿಯಲ್ಲಿ ಆಗಾಗ್ಗೆ ಕೈಯಾಡಿಸುತ್ತ ಬೇಯಿಸಿ.
- ಮಿಶ್ರಣ ಸ್ವಲ್ಪ ಗಟ್ಟಿಯಾಗಿ ಹಲ್ವಾದ ಹದಕ್ಕೆ ಬಂದಾಗ ಇದಕ್ಕೆ ಖೋವ ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷ ಚೆನ್ನಾಗಿ ಬಿಸಿಮಾಡಿ ಉರಿಯನ್ನು ಆಫ್ ಮಾಡಿ. ನಂತರ ಇದಕ್ಕೆ ಏಲಕ್ಕಿಪುಡಿ ಸೇರಿಸಿ.
- ಒಂದು ಟೀ ಸ್ಪೂನ್ ನಷ್ಟು ತುಪ್ಪದಲ್ಲಿ ಗೋಡಂಬಿ ಚೂರುಗಳನ್ನು ಹೊಂಬಣ್ಣಕ್ಕೆ ಹುರಿದು ಇದನ್ನು ಹಲ್ವಾ ಮಿಶ್ರಣಕ್ಕೆ ಸೇರಿಸಿ.
- ರುಚಿ ರುಚಿ ಹಲ್ವಾ ಈಗ ಸವಿಯಲು ಸಿದ್ಧ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)