ಹರಿವೆ ಸೊಪ್ಪಿನ ಪಲ್ಯ

ಸೊಪ್ಪಿನಿಂದ ತಯಾರಿಸುವ ಅಡುಗೆಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ತಿನ್ನಲೂ ಅಷ್ಟೇ ರುಚಿಕರ. ಹರಿವೆ ಸೊಪ್ಪಂತೂ ನಮಗಿಬ್ಬರಿಗೂ ಬಹಳ ಪ್ರಿಯ. ನಮಗಿಲ್ಲಿ ತರಕಾರಿ ತರಲು ಹೋದಾಗ ಆಗಾಗ್ಗೆ ಹರಿವೆಸೊಪ್ಪು ಸಿಗುತ್ತದೆ. ಕ್ಯಾಲ್ಸಿಯಂ, ಕಬ್ಬಿಣ ಹಾಗೂ ವಿವಿಧ ವಿಟಮಿನ್ ಗಳ ಆಗರವಾದ ಈ ಸೊಪ್ಪು ಪಲ್ಯ, ಸಾಂಬಾರ್, ಹಶಿ, ಸಾಸಿವೆ ಇತ್ಯಾದಿ ಅಡುಗೆಗಳನ್ನು ತಯಾರಿಸಲು ಚೆನ್ನಾಗಿರುತ್ತದೆ.
ಹರಿವೆ ಸೊಪ್ಪಿನ ಪಲ್ಯ ತಯಾರಿಸುವ ವಿಧಾನ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು 
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
  • ಹರಿವೆ ಸೊಪ್ಪು - 1 ಕಟ್ಟು 
  • ಒಣಮೆಣಸು - 2 ರಿಂದ 3 (ಖಾರಕ್ಕೆ ತಕ್ಕಂತೆ)
  • ಉದ್ದಿನಬೇಳೆ - 1 ಟೀ ಸ್ಪೂನ್ 
  • ಸಾಸಿವೆ - 1 ಟೀ ಸ್ಪೂನ್ 
  • ಇಂಗು - ಚಿಟಿಕೆ 
  • ಅರಿಶಿನ - 1/8 ಟೀ ಸ್ಪೂನ್ 
  • ಎಣ್ಣೆ - 3 ಟೇಬಲ್ ಸ್ಪೂನ್
  • ತೆಂಗಿನತುರಿ - 1/2 ಕಪ್
  • ಉಪ್ಪು - ರುಚಿಗೆ ತಕ್ಕಷ್ಟು
  • ಆಮ್ ಚೂರ್ ಪೌಡರ್ - ರುಚಿಗೆ ತಕ್ಕಷ್ಟು
  • ಬೆಲ್ಲ / ಸಕ್ಕರೆ - 1/4 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು (ಟಿಪ್ಸ್ ನೋಡಿ)
  • ಈರುಳ್ಳಿ (ಬೇಕಿದ್ದರೆ) - 1 

ತಯಾರಿಸುವ ವಿಧಾನ:
  • ಹರಿವೆ ಸೊಪ್ಪನ್ನು ನೀರಿನಲ್ಲಿ ಸ್ವಚ್ಚವಾಗಿ ತೊಳೆಯಿರಿ. ಹರಿವೆಯ ದಂಟು ಬೆಳೆದಿದ್ದರೆ ಅದನ್ನು ಕತ್ತರಿಸಿ ತೆಗೆದುಬಿಡಿ. ದಂಟು ಎಳಸಾಗಿದ್ದರೆ ಅದನ್ನೂ ಹರಿವೆ ಎಲೆಗಳೊಡನೆ ಸಣ್ಣದಾಗಿ ಹೆಚ್ಚಿಕೊಳ್ಳಿ. 
  • ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಒಣಮೆಣಸು, ಉದ್ದಿನಬೇಳೆ ಹಾಕಿ ಒಂದು ನಿಮಿಷ ಹುರಿಯಿರಿ. ಉದ್ದಿನಬೇಳೆ ನಸು ಹೊಂಬಣ್ಣಕ್ಕೆ ತಿರುಗಿದಾಗ ಇದಕ್ಕೆ ಸಾಸಿವೆ, ಇಂಗು ಸೇರಿಸಿ. ಸಾಸಿವೆ ಸಿಡಿಯ ತೊಡಗಿದಾಗ ಇದಕ್ಕೆ ಅರಿಶಿನ ಸೇರಿಸಿ ಒಮ್ಮೆ ಕೈಯಾಡಿಸಿ, ಮೊದಲೇ ಹೆಚ್ಚಿಟ್ಟ ಹರಿವೆಸೊಪ್ಪು ಸೇರಿಸಿ. ಒಗ್ಗರಣೆಗೆ ಹಾಕಿದ ಒಣಮೆಣಸನ್ನು ಕೈಯಲ್ಲಿ ಅಥವಾ ಸೌಟಿನ ಸಹಾಯದಿಂದ ಪುಡಿಮಾಡಿ ಪುನಃ ಪಲ್ಯದ ಮಿಶ್ರಣಕ್ಕೆ ಸೇರಿಸಿ.
  • ಪಲ್ಯದ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ ಮೀಡಿಯಮ್ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ. ನೀರು ಸೇರಿಸಬೇಡಿ. ಸೊಪ್ಪಿನಲ್ಲಿರುವ ನೀರಿನಂಶವೇ ಪಲ್ಯ ಬೇಯಲು ಸಾಕಾಗುತ್ತದೆ.
  • ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತಿರಿ. ಸೊಪ್ಪು ಮುಕ್ಕಾಲು ಭಾಗ ಬೆಂದ ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಆಮ್ ಚೂರ್ ಪೌಡರ್, ಬೆಲ್ಲ / ಸಕ್ಕರೆ ಸೇರಿಸಿ ಕೈಯಾಡಿಸಿ.
  • 2 - 3 ನಿಮಿಷ ಬೇಯಿಸಿದ ನಂತರ ಇದಕ್ಕೆ ತೆಂಗಿನತುರಿ ಸೇರಿಸಿ. ಈರುಳ್ಳಿ ಹಾಕುವುದಾದರೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನೂ ಸೇರಿಸಿ ಕೈಯಾಡಿಸಿ 5 ನಿಮಿಷ ಬೇಯಿಸಿ ಉರಿ ಆಫ್ ಮಾಡಿ. ನಾನು ಈ ಪಲ್ಯಕ್ಕೆ ಈರುಳ್ಳಿ ಸೇರಿಸಿದ್ದೇನೆ.
  • ಈ ಪಲ್ಯ ಅನ್ನ, ಚಪಾತಿ, ಪೂರಿಯೊಡನೆ ಚೆನ್ನಾಗಿರುತ್ತದೆ. 


ಟಿಪ್ಸ್:
  • ಈ ಪಲ್ಯವನ್ನು ಸಿಹಿ ಮಾಡುವುದಾದರೆ ಜಾಸ್ತಿ (ಸಿಹಿಯಾಗುವಷ್ಟು) ಬೆಲ್ಲ / ಸಕ್ಕರೆ ಸೇರಿಸಿ. ಸಿಹಿ ಬೇಡವೆಂದರೆ ರುಚಿಗಾಗಿ 1/4 ಟೀ ಸ್ಪೂನ್ ನಷ್ಟು ಬೆಲ್ಲ / ಸಕ್ಕರೆ ಸೇರಿಸಿ. ಸಿಹಿ ಪಲ್ಯ ಮಾಡಿದರೆ ಈರುಳ್ಳಿ ಸೇರಿಸಬೇಡಿ.

English version

ಕಾಮೆಂಟ್‌ಗಳು